ಕೊಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರಕೊಲೆ ಪ್ರಕರಣ: ಉಡುಪಿ ಜಿಲ್ಲೆಯಲ್ಲಿ ವೈದ್ಯರಿಂದ ಮುಷ್ಕರ
ಉಡುಪಿ: ಕೊಲ್ಕತ್ತಾದಲ್ಲಿನ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ವಿರೋಧಿಸಿ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯ ಕರೆಯಂತೆ ಉಡುಪಿ ಜಿಲ್ಲೆಯಾದ್ಯಂತ ವೈದ್ಯರು ಇಂದು ಬೆಳಗ್ಗೆ ೬ ಗಂಟೆಯಿಂದ ತುರ್ತು ಚಿಕಿತ್ಸೆ ಹೊರತುಪಡಿಸಿ ತಮ್ಮ ಎಲ್ಲ ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದಾರೆ.
ಐಎಂಎ ಉಡುಪಿ ಕರಾವಳಿ ಶಾಖೆಯ ವ್ಯಾಪ್ತಿಯ ಸುಮಾರು ೨೬೦ ಮಂದಿ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಆ.೧೭ರ ಬೆಳಗ್ಗೆ ೬ಗಂಟೆಯಿಂದ ೧೮ರ ರವಿವಾರ ಬೆಳಗ್ಗೆ ೬ಗಂಟೆಯವರೆಗೆ ಒಟ್ಟು ೨೪ ಗಂಟೆಗಳ ಕಾಲ ತುರ್ತು ಚಿಕಿತ್ಸೆಯನ್ನು ಹೊರತುಪಡಿಸಿ ತಮ್ಮ ಕ್ಲಿನಿಕ್ ಹಾಗೂ ಆಸ್ಪತ್ರೆಗಳ ಇತರ ಸೇವೆಗಳನ್ನು ಸ್ಥಗಿತಗೊಳಿಸಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಐಎಂಎ ಅಧೀನದಲ್ಲಿ ಒಟ್ಟು ೫೫೦ಕ್ಕೂ ಅಧಿಕ ವೈದ್ಯರಿದ್ದು, ಅವರೆಲ್ಲ ಇಂದಿನಿಂದ ಮುಷ್ಕರ ನಡೆಸುತ್ತಿದ್ದಾರೆ.
ಅದೇ ರೀತಿ ಈ ಮುಷ್ಕರಕ್ಕೆ ಭಾರತೀಯ ದಂತ ವೈಧ್ಯ ಸಂಘ ಉಡುಪಿ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಇದರ ೧೨೫ ಸದಸ್ಯರು ಕೂಡ ಇಂದು ಬೆಳಗ್ಗೆಯಿಂದ ತಮ್ಮ ದಂತ ವೈದ್ಯಕೀಯ ಚಿಕಿತ್ಸಾಲಯಗಳನ್ನು ಮುಚ್ಚಿದ್ದಾರೆ.