ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ಕೊಡಿ; ಇಲ್ಲದಿದ್ದರೆ ಪ್ರತಿಭಟನೆ: ಶಾಸಕ ಸುನೀಲ್ ಕುಮಾರ್

ಉಡುಪಿಯಲ್ಲಿ ಬಿಜೆಪಿ ನಾಯಕ ಸುನಿಲ್ ಕುಮಾರ್ ಹೇಳಿಕೆ ನೀಡಿ, “ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅವಕಾಶ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ಕೊಡಬೇಕಾಗಿತ್ತು ಎಂದರು.
ಸಿದ್ದರಾಮಯ್ಯ ಭಂಡತನವನ್ನು ದೂರ ಮಾಡಲಿ. ನೈತಿಕತೆಯ ಸಿದ್ಧಾಂತ ಹೇಳುವ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯ ತನಿಖೆಯನ್ನು ಎದುರಿಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಅಧಿಕಾರದಲ್ಲಿ ಇರಬಾರದು ಎಂದರು.
ರಾಜ್ಯಪಾಲರ ನಡೆಯನ್ನು ಕಾಂಗ್ರೆಸ್ ಟೀಕೆ ಮಾಡುತ್ತಿದೆ. ರಾಜ್ಯಪಾಲರಿಂದ ಭಾಷಣ ಮಾಡಿಸಿ ಕೇಂದ್ರವನ್ನು ಟೀಕೆ ಮಾಡಿಸಿ ಪ್ರಶಂಸಿಸಿದ್ದರು. ರಾಜ್ಯಪಾಲರು ತಮಗೆ ಬೇಕಾದಾಗ ಒಳ್ಳೆಯವರು ಬೇಡದಿದ್ದಾಗ ಕೆಟ್ಟವರಾಗುತ್ತಾರಾ? ಮೂಡ ಹಗರಣ ಸಂಬಂಧಪಟ್ಟಂತೆ ಮೂರು ಮಂದಿ ಖಾಸಗಿ ವ್ಯಕ್ತಿಗಳು ದೂರು ಕೊಟ್ಟಿದ್ದಾರೆ. ರಾಜ್ಯಪಾಲರಿಗೆ ಬಿಜೆಪಿ ದೂರು ಕೊಟ್ಟಿಲ್ಲ ಸಾಮಾಜಿಕ ಕಾರ್ಯಕರ್ತರು ದೂರಿದ್ದಾರೆ. ರಾಜ್ಯಪಾಲರು ವಿವರಣೆ ಕೇಳಿದ್ದರೂ ಯಾವುದೇ ವಿವರಣೆಯನ್ನು ಆ ಸಂದರ್ಭ ಮುಖ್ಯಮಂತ್ರಿಗಳು ಅಥವಾ ಸರ್ಕಾರ ಕೊಟ್ಟಿಲ್ಲ. ಕರ್ನಾಟಕದ ರಾಜಕೀಯಕ್ಕೆ ಇತಿಹಾಸ ಮತ್ತು ಪರಂಪರೆ ಇದೆ. ಒಂದು ಕ್ಷಣ ಕೂಡ ಮುಖ್ಯಮಂತ್ರಿಗಳು ಆ ಸ್ಥಾನದಲ್ಲಿ ಇರಕೂಡದು ಎಂದರು.
ತನಿಖೆಯನ್ನು ಮಾಡುತ್ತೇನೆ ಎಂಬ ನೆಪಗಳನ್ನು ಒಡ್ಡಬಾರದು. ತನಿಖೆಯಾಗಿ ಆರೋಪ ಮುಕ್ತರಾಗುವ ತನಕ ಆ ಕುರ್ಚಿಯನ್ನ ತ್ಯಾಗ ಮಾಡಿ. ಆರೋಪ ಸಾಬೀತಾಗದಿದ್ದರೆ ನಿರಪರಾಧಿಯಾದರೆ ಹೈಕಮಾಂಡ್ ಅನುಮತಿ ತೆಗೆದುಕೊಂಡು ನೀವೇ ಮುಖ್ಯಮಂತ್ರಿಯಾಗಿ. ತನಿಖೆಗೆ ಒಳಪಟ್ಟ ನಂತರ ಆ ಸ್ಥಾನದಲ್ಲಿ ಇರುತ್ತೇನೆ ಎಂಬುದು ಸರಿಯಲ್ಲ. ನಾಳೆ ನ್ಯಾಯಾಲಯವನ್ನು ಕೂಡ ಕಾಂಗ್ರೆಸ್ ಪ್ರಶ್ನೆ ಮಾಡಿದರೆ ಆಶ್ಚರ್ಯ ಇಲ್ಲ. ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಎಡೆಮಾಡಿ ಕೊಡಬೇಡಿ. ರಾಜ್ಯಪಾಲರು ಕಾನೂನು ತಜ್ಞರ ಅಭಿಪ್ರಾಯ ಕೇಳಿಯೇ ಈ ನಿರ್ಧಾರಕ್ಕೆ ಬಂದಿರುತ್ತಾರೆ ಎಂದರು.
ಇಂದು ಅಥವಾ ನಾಳೆ ರಾಜೀನಾಮೆ ಕೊಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಶಾಸಕರು ಬೆಂಗಳೂರಿನಲ್ಲಿ ಪಕ್ಷ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡುತ್ತಾರೆ. ಆಡಳಿತ ಪಕ್ಷದಲ್ಲಿರುವವರು ಜನ ಆಂದೋಲನ ಚಳುವಳಿ ಮಾಡುವುದು ಶೋಭೆ ತರಲ್ಲ. ಲಾಲು ಪ್ರಸಾದ್ ಯಾದವ್ ಜಯಲಲಿತಾ ಯಡಿಯೂರಪ್ಪ ರಾಜೀನಾಮೆಕೊಟ್ಟು ತನಿಖೆ ಎದುರಿಸಿದ್ದರು. ತನಿಖೆ ಎದುರಿಸುವಾಗ ಆ ಸ್ಥಾನದಲ್ಲಿ ಇರಬಾರದು ಎಂದು ಹೇಳಿದರು.
ಸಂಕಷ್ಟ ಬಂದಾಗ ಲೋಕಾಯುಕ್ತವನ್ನು ದುರ್ಬಲ ಮಾಡಿ ಎಸಿಬಿ ರಚಿಸಿದರು. ಆರೋಪ ಬಂದಾಗ ಸಾಂವಿಧಾನಿಕ ಹುದ್ದೆಯನ್ನು ಬುಡಮೇಲು ಮಾಡಿದ್ದರು. ಸೋಮವಾರ ನಾವು ಪ್ರತಿಭಟನೆಗೆ ಇಳಿಯುತ್ತೇವೆ. ಎಲ್ಲಾ ಮಂತ್ರಿಗಳಿಗೆ ನಾನು ವಿನಂತಿ ಮಾಡುತ್ತೇನೆ ರಾಜ್ಯಪಾಲರನ್ನ ಟೀಕಿಸಬೇಡಿ. ಜನಾಂದೋಲನ ಆಗುವ ಮೊದಲು ಇಳಿಯುವ ಮೊದಲು ರಾಜೀನಾಮೆ ನೀಡಿ. ಕರ್ನಾಟಕ ಬಹಳ ದೊಡ್ಡ ಪ್ರಮಾಣದ ಪ್ರತಿಭಟನೆ ಎದುರಿಸುವಂತೆ ಮಾಡದಿರಿ ಎಂದರು.