ದುರಸ್ತಿ ಹಿನ್ನೆಲೆಯಲ್ಲಿ ಕೂಳೂರು ಹಳೆ ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿರ್ಬಂಧ
ಮಂಗಳೂರು: ದುರಸ್ತಿ ಕಾರ್ಯಗಳನ್ನು ನಡೆಸಲಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಕೂಳೂರಿನ ಹಳೆಯ ಕಮಾನು ಸೇತುವೆಯಲ್ಲಿ ಆ.೧೯ರಿಂದ ೨೧ರವರೆಗೆ ಘನ ವಾಹನಗಳ ಸಂಚಾರ ನಿರ್ಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಘನ ವಾಹನಗಳಿಗೆ ರಾತ್ರಿ ೧೦ರಿಂದ ಬೆಳಗ್ಗೆ ೬ರವರೆಗೆ ಹಾಗೂ ಬೆಳಗ್ಗೆ ೧೧ರಿಂದ ೩ರವರೆಗೆ ಹೊಸ ಸೇತುವೆಯಲ್ಲಿ ಸಂಚರಿಸಲು ಅನುಮತಿಸಲಾಗಿದೆ. ಈ ಅವಧಿಯಲ್ಲಿ ಹೊಸ ಸೇತುವೆಯನ್ನು ಘನ ವಾಹನಗಳ ದ್ವಿಮುಖ ಸಂಚಾರಕ್ಕೆ ಉಪಯೋಗಿಸಲಾಗುತ್ತದೆ. ಈ ಮೂರು ದಿನಗಳಲ್ಲಿ ಕೂಳೂರು ಹಳೆಯ ಕಮಾನು ಸೇತುವೆಯನ್ನು ಪ್ರಯಾಣಿಕರ ಬಸ್ಸು ಹೊರತುಪಡಿಸಿ ಘನ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗುವುದು.
ಬೆಳಗ್ಗೆ ೬ರಿಂದ ೧೧ವರೆಗೆ ಹಾಗೂ ಮಧ್ಯಾಹ್ನ ೩ರಿಂದ ರಾತ್ರಿ ೧೦ರವರೆಗೆ ಉಡುಪಿಯಿಂದ ಕೇರಳಕ್ಕೆ ಸಂಚರಿಸುವ ವಾಹನಗಳು ಮುಲ್ಕಿ- ಸುರತ್ಕಲ್- ಎಂಆರ್‌ಪಿಎಲ್- ಬಜ್ಪೆ- ಕೆಪಿಟಿ- ನಂತೂರು ಮಾರ್ಗವಾಗಿ ಸಂಚರಿಸಬೇಕು. ಜೊತೆಗೆ ಉಡುಪಿ ಸುರತ್ಕಲ್ ಬೆಂಗಳೂರು ಸಂಚರಿಸುವ ವಾಹನಗಳು ಉಡುಪಿ- ಮುಲ್ಕಿ- ಮೂಡುಬಿದಿರೆ ಬಂಟ್ವಾಳ ಮಾರ್ಗವಾಗಿ ಸಂಚರಿಸಬೇಕು.
ಪ್ರಾಯೋಗಿಕ ಸಂಚಾರ ನಡೆಸಿದ ಬಳಿಕ ಅಗತ್ಯ ಮಾರ್ಪಾಡುಗಳಿದ್ದಲ್ಲಿ ಈ ನಿರ್ಬಂಧವನ್ನು ಆಗಸ್ಟ್ ೨೫ರಿಂದ ಸೆಪ್ಟೆಂಬರ್ ೨೫ರವರೆಗೆ ವಿಸ್ತರಿಸಲಾಗುತ್ತದೆ. ಆದ್ದರಿಂದ ಕೂಳೂರು ಸೇತುವೆಯ ದುರಸ್ತಿ ಕಾರ್ಯಗಳನ್ನು ಸೆ.೨೫ರೊಳಗೆ ಕಾರ್ಯಗತಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಸೂಚನೆ ನೀಡಲಾಗಿದೆ.