ಕೆಲಸಕ್ಕೆ ತೆರಳಿದ್ದ ವಿವಾಹಿತೆ ನಾಪತ್ತೆ
ಗಂಗೊಳ್ಳಿ: ಇಲ್ಲಿನ ನಿವಾಸಿ ಮಿಥುನ್ ಪುತ್ರನ್ ಅವರ ಪತ್ನಿ, ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ರೇಣುಕಾ ಖಾರ್ವಿ (೩೨) ಅವರು ಆ. ೧೨ರಂದು ಮನೆಯಿಂದ ಕೆಲಸಕ್ಕೆಂದು ಹೊರಟು ಹೋಗಿದ್ದವರು ಆ ಬಳಿಕ ನಾಪತ್ತೆಯಾಗಿದ್ದಾರೆ.
ಆ. ೧೨ರಂದು ಬೆಳಗ್ಗೆ ಮನೆಯಿಂದ ಎಂದಿನಂತೆ ಹೊರಟು ಬಂದಿದ್ದು, ಸಂಜೆ ಪತಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಮಳಿಗೆಯ ಮಾಲಕರಲ್ಲಿ ವಿಚಾರಿಸಿದಾಗ ಆ ದಿನ ಕೆಲಸಕ್ಕೆ ಬಂದಿಲ್ಲವೆಂದು ತಿಳಿಸಿದ್ದರು. ಆ. ೧೩ರ ಬೆಳಗ್ಗೆ ೧೧ ಗಂಟೆಗೆ ರೇಣುಕಾ ಅವರು ಸಹೋದರ ವಿನೋದ್‌ಗೆ ಕರೆ ಮಾಡಿ ಉಡುಪಿಯಲ್ಲಿರುವುದಾಗಿ ತಿಳಿಸಿದ್ದರು. ಆ ಬಳಿಕ ಮರಳಿ ಕೇಳಿದಾಗ ಬೆಂಗಳೂರಿನಲ್ಲಿದ್ದು, ನನ್ನನ್ನು ಹುಡುಕುವುದು ಬೇಡ ಎನ್ನುವುದಾಗಿ ತಿಳಿಸಿ, ಫೋನ್ ಸ್ವಿಚ್ ಆಫ್ ಮಾಡಿದ್ದರು.
ಪತಿ ಮಿಥುನ್ ಪುತ್ರನ್ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.