ಅರಸಿಕೇರೆ-ಉಚ್ಚಂಗಿದುರ್ಗ ರಸ್ತೆ ಅಸ್ತವ್ಯಸ್ತ ವರ್ಷಗಳು ಕಳೆದರೂ ಅಭಿವೃದ್ಧಿಯಾಗದ ರಸ್ತೆ.
ಸಂಜೆವಾಣಿವಾರ್ತೆ
ಹರಪನಹಳ್ಳಿ: ಅ,17: ವರ್ಷಗಳು ಕಳೆದರು ಅಭಿವೃದ್ಧಿಯಾಗದೆ ಮಳೆಗಾದಲ್ಲಿ ಮತ್ತಷ್ಟು ಹದಗೆಟ್ಟು ಪ್ರಯಾಣೀಕರಿಗೆ, ವಾಹನ ಸವಾರರ ಸಂಚಾರಕ್ಕೆ ಗುಂಡಿಗಳಂತಾಗಿ ಅಸ್ಯವ್ಯಸ್ತಗೊಂಡು ಕಿರಿ ಕಿರಿಯಾಗುತ್ತಿದೆ ಅರಸಿಕೇರೆ-ಉಚ್ಚಂಗಿದುರ್ಗದ ರಸ್ತೆಗಳು.
ತಾಲೂಕಿನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಗ್ರಾಮಗಳು ಇವಾಗಿದ್ದು, ಅರಸೀಕೆರೆ ಗ್ರಾಮದಲ್ಲಿ ಪಂಚಗಣಾಧೀಶ್ವರರ ಪೈಕಿ ಶ್ರೀ ಕೋಲಾಶಾಂತೇಶ್ವರರು ನೆಲೆಸಿದ್ದಾರೆ ಅಲ್ಲದೇ ಇದೇ ಗ್ರಾಮದಲ್ಲಿ ದುರ್ಗಮ್ಮನ ದೇವಸ್ಥಾನವು ಇದೆ, ಇಷ್ಟು ಮಾತ್ರವಲ್ಲದೆ ರಾಜ್ಯದ ನಾಡಿನ ಮೂಲೆ ಮೂಲೆಗಳಿಂದ ಹುಣ್ಣಿಮೆ, ಅಮಾವಾಸೆ, ಹಬ್ಬ, ಜಾತ್ರೆಗಳಲ್ಲಿ ಲಕ್ಷಾಂತರ ಭಕ್ತರ ಸಮಾಗಮಾಗೊಳ್ಳುವ ಸ್ಥಳ ಉಚ್ಚಂಗಿದುರ್ಗವಾಗಿದೆ. ಇಲ್ಲಿ ಉಚ್ಚೆಂಗೆಮ್ಮದೇವಿ ನೆಲೆಸಿದ್ದು ಇಲ್ಲಿಗೆ ನಿತ್ಯವು ಭಕ್ತರ, ಸಾರ್ವಜನಿಕರ, ಪ್ರಯಾಣೀಕರ ಓಡಾಟ ಇದ್ದೆ ಇರುತ್ತದೆ. ಆದರೆ ರಸ್ತೆಗಳು ಅಲ್ಲಲ್ಲಿ ಹದಗೆಟ್ಟು ವಾಹನಗಳ ಓಡಿಸುವಿಕೆಗೆ ಅಡ್ಡಿಯಾಗುತ್ತಿವೆ.
ಅರೆ-ಬರೆ ರಸ್ತೆ: ಉಚ್ಚಂಗಿದುರ್ಗ ಹಾಗೂ ಅಣಜಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಅಂದಾಜು 9 ಮೀಟರ್‍ನಷ್ಟು ಇದ್ದು, ಈ ರಸ್ತೆ ಇಲಾಖೆಗೆಯಿಂದ ಕಾಮಗಾರಿ ಆರಂಭವಾಗಿದೆಯಾದರೂ ಪೂರ್ಣಗೊಳ್ಳದೆ ಅರೆ, ಬರೆಯಾಗಿ ಅರ್ದಕ್ಕೆ ನಿಂತಿದೆ.
ರಸ್ತೆಗಾಗಿ ಹೋರಾಟ: ಸಿಪಿಐ ಹಾಗೂ ದಲಿತ ಸಂಘಟನೆಗಳು ಒಳಗೊಂಡು ವಿವಿಧ ಸಂಘಟನೆಗಳು ಮತ್ತು ವಿದ್ಯಾರ್ಥಿಗಳಿಂದ ರಸ್ತೆ ಅಭಿವೃದ್ಧಿ ನಡೆಸುವಂತೆ ವಿವಿಧ ರೀತಿಯಲ್ಲಿ ಅನೇಕ ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಿದರು ಪ್ರಯೋಜವಾಗಿಲ್ಲ.
ಸಿಡಿ ನಿರ್ಮಾಣ: ಅರಸೀಕೆರೆ ಗ್ರಾಮದಿಂದ ಉಚ್ಚಂಗಿದುರ್ಗ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಗುಂಡಿಗಳಾಗಿ ಮಾರ್ಪಟ್ಟಿವೆ, ಇನ್ನೂ ಗ್ರಾಮದ ಹೊರಗೆ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ರಸ್ತೆಯು ಮುಳುಗಿದ ಸಂದರ್ಭಗಳು ಎದುರಾಗಿವೆ. ಗ್ರಾಮಸ್ಥರು ರಸ್ತೆಗೆ ಸಿ.ಡಿ.ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ.
ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಸ್ತೆ ದುರಸ್ಥಿಗೆ 70ಲಕ್ಷ ಅನುದಾನದಲ್ಲಿ ಮಳೆಗಾಲ ನಿಂತ ಬಳಿಕ ದುರಸ್ಥಿ ಕಾಮಗಾರಿ ಆರಂಭವಾಗಲಿದೆ. ಅರಸೀಕೆರೆ ಬಳಿ ಸೇತುವೆಗೆ(ಸಿಡಿ ನಿರ್ಮಾಣ) ಕೆ.ಕೆ.ಆರ್.ಡಿ.ಬಿ.ಯೋಜನೆಯಲ್ಲಿ 2 ಕೋಟಿ.ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಉಳಿದಂತೆ ದಾವಣಗೆರೆ ಅಣಜಿ ರಸ್ತೆಗೆ 10 ಕೋಟಿ.ರೂ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ, ಸರ್ಕಾರದ ಕೈಯಲ್ಲಿದ್ದು, ಅದು ಬಂದ ಮೇಲೆ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
ಉಚ್ಚಂಗಿದುರ್ಗಕ್ಕೆ ಹೋಗುವ ರಸ್ತೆಯಲ್ಲಿ ಅರಸೀಕೆರೆ ಕೆರೆಗೆ ಹೋಗುವ ನೀರು ಸೇತುವೆ ಕುಸಿತದಿಂದಾಗಿ ವಾಹನ ಸವಾರರು ಜೀವ ಭಯದಿಂದ ಓಡಾಡುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡ ರಸ್ತೆ ಇದೀಗ ದುರಸ್ಥಿಯಾಗುತ್ತಿದ್ದು, ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ, ಪ್ರಯಾಣೀಕರಿಗೆ ತೊಂದರೆಯಾಗಲಿದೆ.
ಗುಡಿಹಳ್ಳಿ ಹಾಲೇಶ್, ಕಾರ್ಯದರ್ಶಿ, ಸಿಪಿಐ, ಅರಸೀಕೆರೆ.

3ವರ್ಷಗಳ ಹಿಂದೆ ಅಭಿವೃದ್ಧಿಯಾಗಿದ್ದು ಪೂರ್ಣಪ್ರಮಾಣದಲ್ಲಿ ಆಗದೆ ಅರೆ ಬರೆ ರಸ್ತೆಯಾಗಿದೆ, ಈ ರಸ್ತೆಗಳಲ್ಲಿ ದ್ವೀಚಕ್ರ ವಾಹನಸವಾರರು ಸಂಚಾರದಿಂದ ಅಪಘಾತಗಳು ನಡೆದಿದ್ದು, ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ, ಸಾವು, ನೋವುಗಳನ್ನು ತಡೆಯಲು ಕೂಡಲೇ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು.
ಪ್ರಶಾಂತ ಪಾಟೀಲ್, ಯುವಮುಖಂಡರು, ಅರಸೀಕೆರೆ.
