ಆರ್ ಕೆ ಶೆಟ್ರು ಪುಣ್ಯಸ್ಮರಣೆ ಬಡ ಮಕ್ಕಳಿಗೆ ಬ್ಯಾಗ್ ಪುಸ್ತಕ ವಿತರಣೆ.
ಕೂಡ್ಲಿಗಿ. ಆ. 17 :- ಪಟ್ಟಣದ ಹೋಟೆಲ್ ಉದ್ಯಮಿಯಾಗಿದ್ದ ಆರ್ ಕೆ ಶೆಟ್ರು ಅತೀ ಹೆಚ್ಚು ಕೂಲಿ ಕಾರ್ಮಿಕ ಮಕ್ಕಳು ಇರುವ 1ನೇ ವಾರ್ಡಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದತ್ತು ತೆಗೆದುಕೊಂಡು ಪುಸ್ತಕ, ಪೆನ್ನು, ಬ್ಯಾಗ್ ವಿತರಣೆ ಮಾಡುತ್ತಿದ್ದರು ಅವರು ಇಂದಿಗೆ ದಿವಂಗತರಾಗಿ ಒಂದು ವರ್ಷವಾಗಿದ್ದು ಅವರ ಕುಟುಂಬ ಆರ್ ಕೆ ಶೆಟ್ರು ಪುಣ್ಯಸ್ಮರಣೆ ದಿನವಾದ ಇಂದು ಅದೇ ಶಾಲೆಯ ಮಕ್ಕಳಿಗೆ ಬ್ಯಾಗ್ ಹಾಗೂ ನೋಟ್ ಬುಕ್ ಪೆನ್ನು ವಿತರಣೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಹೌದು ಪಟ್ಟಣದ ಮೂಲೆ ಕಟ್ಟಿನ ಸ್ಥಳದಲ್ಲಿದ್ದ 1ನೇ ವಾರ್ಡಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮಕ್ಕಳ ಸಂಖ್ಯೆ ಇಲ್ಲವೆಂದು ಶಾಲೆ ಮುಚ್ಚುವ ಸ್ಥಿತಿ ಬಂದಾಗ ಅಂದಿನ ಮುಖ್ಯ ಶಿಕ್ಷಕರೊಬ್ಬರೂ ಬಡ ಕೂಲಿ ಕಾರ್ಮಿಕ ಮಕ್ಕಳನ್ನು ಶಾಲೆಗೆ ಸೇರಿಸಿ ಮುಚ್ಚುವ ಶಾಲೆಯನ್ನು ಮತ್ತೊಮ್ಮೆ ತೆರೆಯಲು ಸಹಕಾರ ನೀಡಿದ್ದರೆ ಇಂತಹ ಶಾಲೆಯ ಬಡ ಮಕ್ಕಳಿಗೆ ಹೋಟೆಲ್ ಉದ್ಯಮಿಯಾಗಿದ್ದ ಹಾಗೂ ಕನ್ನಡ ಮಿತ್ರ ಸಂಘದ ಅಧ್ಯಕ್ಷರಾಗಿದ್ದ ಆರ್ ಕೆ ಶೆಟ್ರು ಪ್ರತಿವರ್ಷ ಬ್ಯಾಗ್, ನೋಟ್ ಬುಕ್, ಪೆನ್ನು ಪೆನ್ಸಿಲ್ ಹಾಗೂ ಬಿಸಿಯೂಟದ ತಟ್ಟೆಯನ್ನು ವಿತರಣೆ ಮಾಡುವ ಮೂಲಕ ಶಾಲೆಯನ್ನು ದತ್ತು ಸಹ ತೆಗೆದುಕೊಂಡಿದ್ದರು
ಆದರೆ ಅವರು ಒಂದು ವರ್ಷದ ಹಿಂದೆ ನಿಧನರಾಗಿದ್ದು ಅವರ ಕುಟುಂಬ ಆರ್ ಕೆ ಶೆಟ್ರು ಮಾಡಿದ ಸೇವಾ ಕಾರ್ಯ ಮುಂದುವರೆಸಿ ಇಂದು ಅವರ ಪುಣ್ಯತಿಥಿಯಂದು ಅವರ ಪುಣ್ಯಸ್ಮರಣೆ ಮಾಡಿಕೊಂಡು ಶಾಲೆಯ ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಮತ್ತು ಮೂರು, ನಾಲ್ಕು ಮತ್ತು ಐದನೇ ತರಗತಿ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ ಪೆನ್ಸಿಲ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ನಿಂಗಮ್ಮ ಮಾತನಾಡಿ ಆರ್ ಕೆ ಶೆಟ್ರು ಅವರ ಸರಳ ಜೀವನ ನಡೆಸುವ ಜೊತೆಗೆ ಶಾಲೆಯಲ್ಲಿನ ಬಡ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದರು ಇಂತಹ ವ್ಯಕ್ತಿಗಳು ವಿರಳವಾಗಿದ್ದು ಅವರೊಬ್ಬ ಶಿಕ್ಷಣಪ್ರೇಮಿ ಎಂದರೆ ತಪ್ಪಾಗದು ಎಂದು ತಿಳಿಸಿದರು.
ಸಿಆರ್ ಪಿ ದೊಡ್ಡಪ್ಪ, ಹೊನ್ನೂರ, ವೀರೇಕ್  ಹಾಗೂ ಆರ್ ಕೆ ಶೆಟ್ರು ಕುಟುಂಬದ ಆಪ್ತರಲ್ಲಿ ಒಬ್ಬರಾದ ಅಲ್ಲಾಭಕ್ಷಿ ಮಾತನಾಡಿ ಆರ್ ಕೆ ಶೆಟ್ರು ಹೋಟೆಲ್ ಉದ್ಯಮಿಯಾದರೂ ಬಡವರ, ಬಡ ಮಕ್ಕಳ ಶ್ರಯೋಭಿವೃದ್ದಿಗೆ ಶ್ರಮಿಸುತ್ತಿದ್ದರು ಆದರೆ ಬಡ ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದ 1ನೇ ವಾರ್ಡಿನ ಶಾಲೆಯ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶ್ರಮಿಸುತ್ತಿದ್ದರು. ಅವರು ಮೂಲತಃ ಮಂಗಳೂರು ಕಡೆಯವರಾದರೂ ಅನೇಕ ವರ್ಷಗಳ ಕೂಡ್ಲಿಗಿ ವಾಸ ಉದ್ಯಮದಿಂದ ಹೆಸರು ಮಾಡಿದ್ದರು ಅವರ ಸಮಾಜಸೇವೆ ಹಾಗೂ ಶಿಕ್ಷಣ ಪ್ರೇಮ ನಮಗೆಲ್ಲಾ ಆದರ್ಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿ ಸುನೀತಾ ಹಾಗೂ ಅಡುಗೆ ಸಿಬ್ಬಂದಿ ಮತ್ತು ಶಾಲೆಯ 62ಮಕ್ಕಳು ಉಪಸ್ಥಿತರಿದ್ದು ಶಾಲೆಯಲ್ಲಿ ಆರ್ ಕೆ ಶೆಟ್ರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು.