ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ವೀರರನ್ನು ಸ್ಮರಿಸೋಣ
ಗುಳೇದಗುಡ್ಡ,ಆ 17 : ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತ್ಯಾಗ ಬಲಿದಾನ ಮಾಡಿದರು. ಅವರ ತ್ಯಾಗ ಬಲಿದಾನದಿಂದ ನಾವು ಇಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಸ್ವಾತಂತ್ರ್ಯ ದಿನ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳವುದು ನಮ್ಮ ಕರ್ತವ್ಯವಾಗಿದೆ ಎಂದು ತಹಶೀಲ್ದಾರ ಮಂಗಳಾ ಎಂ. ಹೇಳಿದರು.
ಅವರು ಗುಳೇದಗುಡ್ಡ ತಾಲೂಕು ಆಡಳಿತದ ವತಿಯಿಂದ ಗುರುವಾರ ಇಲ್ಲಿನ ಬಾಲಕರ ಸರಕಾರಿ ಪಪೂ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಬ್ರಿಟೀಷರ ದಬ್ಬಾಳಿಕೆಯಿಂದ ಬೇಸತ್ತು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿತು. ಮಹಾತ್ಮಾಗಾಂಧೀಜಿ, ಸುಭಾಷಚಂದ್ರ ಭೋಸ್, ಜವಹರಲಾಲ್ ನೆಹರೂ, ಬಾಲಗಂಗಾಧರ ತಿಲಕ್, ಭಗತ್ ಸಿಂಗ್, ಚಂದರಶೇಖರ ಆಜಾದ ಅವರಂತಹ ಲಕ್ಷಾಂತರ ಜನರ ಹೋರಾಟದ ಫಲವಾಗಿ ಬ್ರಿಟೀಷರು ದೇಶ ಬಿಟ್ಟು ಹೋದರು. ಇಂತಹ ಸ್ವಾತಂತ್ರ್ಯ ಹೋರಾಟದ ಘಳಿಗೆಗಳನ್ನು ನಾವು ಸದಾ ಸ್ಮರಿಸಬೇಕು ಎಂದರು.
78ನೇ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ನೆನಪಿಗಾಗಿ ಹಿರಿಯ ರಂಗಕಲಾವಿದರು, ಸಂಗೀತ ಕಲಾವಿದರು, ಪರ್ತಕರ್ತರು, ಪ್ರಗತಿಪರ ನೇಕಾರರು, ರೈತರು, ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಅಧಿಕ ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಆರಕ್ಷಕ ದಳದವರಿಂದ, ಗೃಹರಕ್ಷಕದಳ, ಎನ್‍ಸಿಸಿ ವಿದ್ಯಾರ್ಥಿಗಳಿಂದ ಧ್ವಜವಂದನಾ ಕಾರ್ಯಕ್ರಮ ನಡೆಯಿತು. ವಿವಿಧ ನಾಯಕರ ವೇಷಧರಿಸಿದ ವಿದ್ಯಾರ್ಥಿಗಳು ಗಮನಸೆಳೆದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಜಯ ಬರಗುಂಡಿ, ಪುರಸಭೆ ಮುಖ್ಯಾಧಿಕಾರಿ ಅಸ್ಲಂ ಮುಜಾವರ, ಪುರಸಭೆ ಸದಸ್ಯರಾದ ಯಲ್ಲವ್ವ ಗೌಡರ, ವಿದ್ಯಾ ಮುರಗೋಡ, ರಾಜು ಹೆಬ್ಬಳ್ಳಿ, ಯಲ್ಲಪ್ಪ ಮನ್ನಿಕಟ್ಟಿ, ಪಿಎಸ್‍ಐ ಸಿದ್ದಪ್ಪ ಯಡಹಳ್ಳಿ, ವಿಶೇಷತಹಶೀಲ್ದಾರ ಮಹೇಶ ಗಸ್ತಿ, ಪ್ರಾಚಾರ್ಯರಾದ ವಿ.ಎಸ್. ಕಳಸಾ, ವೈ.ಆರ್. ಹೆಬ್ಬಳ್ಳಿ, ಪ್ರಕಾಶ ಮುರಗೋಡ, ಬಿ.ವೈ.ಗೌಡರ, ವೈ.ಬಿ. ಗೌಡರ, ಮುಬಾರಕ ಮಂಗಳೂರು, ಎಂ.ಎಂ. ತುಪ್ಪದ,ಮತ್ತಿತರರು ಇದ್ದರು.