ಡೆಂಗ್ಯೂ ನಿಯಂತ್ರಣಕ್ಕೆ ಕೈ ಜೋಡಿಸಿ: ಡಿಹೆಚ್‍ಓ
ಬಳ್ಳಾರಿ ಆ.17 :: ಸಾರ್ವಜನಿಕರು ಬಳಕೆಗಾಗಿ ನೀರು ತುಂಬುವ ಡ್ರಮ್, ಬ್ಯಾರೆಲ್‍ಗಳಲ್ಲಿ ಬಾಲದ ಹುಳುವಿನ ರೀತಿ ಕಂಡುಬರುವ ಸೊಳ್ಳೆ ಮರಿಗಳನ್ನು ನಿರ್ಮೂಲನೆ ಮಾಡಲು ವಾರಕ್ಕೊಮ್ಮೆ ನೀರು ತುಂಬಿಸುವ ಪರಿಕರಗಳನ್ನು ಸ್ವಚ್ಛಗೊಳಿಸುವ ಮೂಲಕ ಡೆಂಗ್ಯೂ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‍ಬಾಬು ಅವರು ತಿಳಿಸಿದರು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲಿ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆಯ ಲಾರ್ವಾ ನಿರ್ಮೂಲನಾ ದಿನದ ಅಂಗವಾಗಿ ಜಿಲ್ಲೆಯಾದ್ಯಂತ ಸಮೀಕ್ಷೆ ಹಮ್ಮಿಕೊಳ್ಳಲಾದ ಹಿನ್ನಲೆಯಲ್ಲಿ ಶುಕ್ರವಾರ ಬಂಡಿಹಟ್ಟಿ ವ್ಯಾಪ್ತಿಯ ಆಶ್ರಯ ಕಾಲೋನಿಯಲ್ಲಿ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಳಕೆಗಾಗಿ ನೀರು ತುಂಬುವ ಡ್ರಮ್, ಬ್ಯಾರೆಲ್, ಸಿಮೆಂಟ್ ತೊಟ್ಟಿ ಮುಂತಾದವುಗಳಲ್ಲಿ ಕಂಡುಬರುವ ಬಾಲದ ಹುಳು ರೀತಿಯಲ್ಲಿ ಇರುವ ಕ್ರಿಮಿಯು ಸೊಳ್ಳೆ ಮರಿಯಾಗಿದ್ದು, ಇದು 7 ದಿನಗಳ ಅವಧಿಯಲ್ಲಿ ಸೊಳ್ಳೆಯಾಗಿ ಬದಲಾವಣೆಗೊಂಡು ಮನುಷ್ಯರನ್ನು ಕಚ್ಚುತ್ತದೆ. ಒಂದು ವೇಳೆ ಸೋಂಕು ಹೊಂದಿದ ಸೊಳ್ಳೆಯು ಮೊಟ್ಟೆಯಿಟ್ಟು ಮರಿಗಳಾಗಿ ಅದರಿಂದ ಹೊರಬರುವ ಎಲ್ಲಾ ಸೊಳ್ಳೆಗಳು ಡೆಂಗ್ಯೂ ರೋಗವನ್ನು ಹರಡುವ ಸಾಮಥ್ರ್ಯ ಹೊಂದಿರುತ್ತದೆ ಎಂದು ಅವರು ತಿಳಿಸಿದರು.
ಹಾಗಾಗಿ ಸಾರ್ವಜನಿಕರು ಎಲ್ಲಾ ನೀರಿನ ಪರಿಕರಗಳನ್ನು ವಾರಕ್ಕೊಮ್ಮೆ ನೀರು ಖಾಲಿ ಮಾಡಿ ನೀರು ತುಂಬಿದ ನಂತರ ಮುಚ್ಚುಳ ಅಥವಾ ಬಟ್ಟೆ ಕಟ್ಟುವ ಮೂಲಕ ನೀರಿನ ಮೇಲೆ ಮೊಟ್ಟೆ ಇಡದಂತೆ ಸೊಳ್ಳೆ ಉತ್ಪತ್ತಿ ತಡೆಗೆ ಸಹಕರಿಸಿ ಎಂದು ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ ಅವರು ಮಾತನಾಡಿ, ಕೇವಲ ಮನೆಗಳ ಮಾತ್ರವಲ್ಲದೇ ಶಾಲೆ, ಅಂಗನವಾಡಿಗಳು, ವಾಣಿಜ್ಯ ಮಳಿಗೆಗಳಲ್ಲಿ ನೀರು ಸಂಗ್ರಹಕಗಳನ್ನು ಪರಿಶೀಲಿಸಿ ಲಾರ್ವಾ ಕಂಡುಬಂದಲ್ಲಿ ಟೆಮೋಫಾಸ್ ದ್ರಾವಣವನ್ನು ಹಾಕಬೇಕು ಎಂದು ಸೂಚಿಸಿದರು.
ಮುಖ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆ ಇದಾಗಿರುವುದರಿಂದ ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವ ಮಕ್ಕಳು, ವಯೋವೃದ್ದರು, ಗರ್ಭಿಣಿಯರು ಸೇರಿದಂತೆ ಇತರರು ಮೈತುಂಬ ಬಟ್ಟೆ ಧರಿಸುವ ಹಾಗೂ ಅಗತ್ಯವೆನಿಸಿದರೆ ಸೊಳ್ಳೆ ಪರದೆ ಬಳಸಬೇಕು. ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧ ದಾಸ್ತಾನು ಲಭ್ಯವಿದ್ದು,  ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಜ್ವರ ಕಂಡು ಬಂದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಆಶ್ರಯ ಕಾಲೋನಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಾಶಿ ಪ್ರಸಾದ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಪಿಹೆಚ್‍ಸಿಒ ದಾನಕುಮಾರಿ, ಆಶಾ ಕಾರ್ಯಕರ್ತೆ ಗಿರಿಜಾ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರು, ಸಾರ್ವಜನಿಕರು ಹಾಜರಿದ್ದರು.