ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಕುಂಠಿತವಿಲ್ಲ: ಈಶ್ವರ ಖಂಡ್ರೆ
(ಸAಜೆವಾಣಿ ವಾರ್ತೆ)
ಬೀದರ್.ಆ.೧೭: ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಯಾವುದೆ ಅಡೆ ತಡೆ ಆಗುವುದಿಲ್ಲ. ಅವು ಅಗತ್ಯವೇ ಹೊರತು ಅವಶ್ಯಕವಲ್ಲ. ಹಾಗಾಗಿ ಲಾಭ ಇನ್ನು ಯಾರಿಗೆ ಸಿಕ್ಕಿಲ್ಲ ಅಂಥಹ ಎಲ್ಲಾ ಜನರಿಗೆ ಈ ಯೋಜನೆಗಳ ಲಾಭ ತಲುಪಿಸುವ ಕೆಲಸ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮತ್ತು ತಾಲ್ಲೂಕ ಅನುಷ್ಠಾನ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಮಾಡಬೇಕು ಎಂದು ಅರಣ್ಯ. ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಶುಕ್ರವಾರ ಜಿಲ್ಲಾ ಪಂಚಾಯತನಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕಾರ್ಯಾಲಯಗಳ ಉದ್ಘಾಟನೆ ಹಾಗೂ ಜಿಲ್ಲಾ ಪಂಚಾಯತ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕಾರ್ಯಾಲಯಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಡ ಜನರಿಗೆ ಅವರ ಮೂಲಭೂತ ಅವಶ್ಯಕತೆಗಳಾದ ಅನ್ನ. ವಸತಿ. ಬಟ್ಟೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಕೊಡುವ ಜವಾಬ್ದಾರಿ ಇದೆ. ಜನರು ಗ್ಯಾರಂಟಿ ಯೋಜನೆಗಳು ಮುಂದುವರಿಯುವದಿಲ್ಲ ಎಂದು ಮಾತನಾಡುತ್ತಾರೆ ಆದರೆ ಯಾವುದೇ ಕಾರಣಕ್ಕೆ ಅವು ನಿಲ್ಲುವುದಿಲ್ಲ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳು ಎಲ್ಲಾ ಜನರಿಗೆ ತಲುಪಬೇಕು ಎಂಬ ಕಾರಣಕ್ಕಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಅರ್ಹರಿದ್ದವರಿಗೆ ಮತ್ತು ಬಿಟ್ಟು ಹೋದವರಿಗೂ ಈ ಯೋಜನೆಗಳ ಲಾಭ ಸಿಗಬೇಕಿದೆ. ಹಳ್ಳಿಗಳ ಉದ್ದಾರ ಆದರೆ ಮಾತ್ರ ದೇಶದ ಉದ್ದಾರ ಎಂದು ನಮ್ಮ ರಾಷ್ಟ್ರಪಿತ ಗಾಂಧೀಜಿಯವರು ಹೇಳಿದ್ದರು. ಹಿಂದೆ ಪಂಚಾಯತಿಗಳಿಗೆ ಅನುದಾನ ಬರುತ್ತಿರಲಿಲ್ಲ ಇಂದು ಲಕ್ಷ್ಯಾಂತರ ರೂಪಾಯಿ ಅನುದಾನ ಬರುತ್ತಿದ್ದು ಅದು ಸಮರ್ಪಕವಾಗಿ ಬಳಕೆಯಾಗಬೇಕು. ಇಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಕಾರ್ಯಾಲಯ ಹಾಗೂ ಜಿಲ್ಲಾ ಪಂಚಾಯತ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಕಾರ್ಯಾಲಯಗಳ ಉದ್ಘಾಟನೆ ಮಾಡಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ ಮಾತನಾಡಿ ಸರ್ಕಾರದ ಕೆಲಸ ದೇವರ ಕೆಲಸ ಜನ ಸೇವೆಯೆ ಜನಾರ್ದನ ಸೇವೆ. ಮಹಿಳೆಯರ ಕಷ್ಟ ಅರ್ಥಮಾಡಿಕೊಂಡ ನಮ್ಮ ಸರ್ಕಾರ ಅವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲರೂ ಸೇರಿ ನಮ್ಮ ಕೈಲಾದಷ್ಟು ಜನರಿಗೆ ಅನುಕೂಲವಾಗುವ ಕೆಲಸ ಮಾಡೋಣ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಅವರು ಮಾತನಾಡಿ ಜಿಲ್ಲಾ ಪಂಚಾಯತ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಕಾರ್ಯಾಲಯ ಹಾಗೂ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಕಾರ್ಯಾಲಯಗಳ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸಿದ್ದಾರೆ. ಕರ್ನಾಟಕ ಸರ್ಕಾರ ಜಾರಿಗೆ ತಂದ ೫ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಸಮಿತಿಗಳನ್ನು ರಚಿಸಲಾಗಿದೆ ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ೮ ಜನರಿಗೆ ಬಿ.ಎಫ್.ಟಿ ಪ್ರಮಾಣ ಪತ್ರಗಳು ಹಾಗೂ ೨೧ ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ಕಂಪ್ಯೂಟರ್ ಹಾಗೂ ಮೊಬೈಲ್ ಪೋನ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾAತ ಪೂಜಾರ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಲತಾ ಹಾರಕೂಡೆ, ಮಾರುತಿ ಬಂಗಾರೆ ಸೇರಿದಂತೆ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಜಿಲ್ಲಾ ಪಂಚಾಯತಿ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.