ದೃಶ್ಯಕಲಾ ಕಾಲೇಜಿನವಜ್ರ ಮಹೋತ್ಸವ ಸಂಭ್ರಮದ ಲಾಂಛನ ಅನಾವರಣ

ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೧೭; ದಾ ವಿ ವಿಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿ,’ನಮ್ಮ ದೇಶಕ್ಕೆ ಗಾಂಧೀಜಿಯವರ ನೇತೃತ್ವದಲ್ಲಿ ಅನೇಕಾನೇಕ ದೇಶಭಕ್ತರು,ತ್ಯಾಗಜೀವಿಗಳು ಸ್ವಾತಂತ್ರ್ಯ ಹೋರಾಟವನ್ನು ಎಡೆಬಿಡದೆ, ಬಹಳ ಕಷ್ಟ ಪಟ್ಟು ನಡೆಸಿದ ಪರಿಣಾಮ ನಮಗೆ ಸ್ವಾತಂತ್ರ್ಯ ದೊರಕಿ ನಾವಿಂದು ಸ್ವತಂತ್ರ ಭಾರತದ ಹೆಮ್ಮೆಯ ಪ್ರಜೆಗಳಾಗಿ ಬಾಳುತ್ತಿದ್ದೇವೆ.ಇಂದು ನಮ್ಮ ದೇಶದ ತೀವ್ರ ಗತಿಯ ಪ್ರಗತಿಯನ್ನು ಕಂಡು ಹೊಟ್ಟೆ ಕಿಚ್ಚು ಪಡುತ್ತಿರುವ ನಮ್ಮ ನೆರೆಹೊರೆಯ ದೇಶಗಳು ನಾನಾ ರೀತಿಯ ಕುಯುಕ್ತಿಗಳಿಂದ ನಮ್ಮ ಪ್ರಗತಿಗೆ ಭಂಗ ತರುವ ಕೆಲಸಮಾಡುತ್ತಿದ್ದು,  ನಾವೆಲ್ಲ ನಮ್ಮ ನಮ್ಮ ವೈಯಕ್ತಿಕ ಮಟ್ಟದಲ್ಲಿಯೂ ಸಹ ದೇಶಪ್ರೇಮ ಪ್ರಜ್ಞೆಯನ್ನು ಜಾಗೃತವಾಗಿರಿಸಿಕೊಂಡು ,ಅಂತಹ ದುಷ್ಟ ತಂತ್ರಗಳ ಕುತಂತ್ರಕ್ಕೆ ಬಲಿಯಾಗದಂತೆ ನಮ್ಮ ಕುರಿತಾಗಿಯೇ ನಾವು ಜಾಗೃತಿ ವಹಿಸಿ ಕರ್ತವ್ಯ ನಿರ್ವಹಿಸಿಕೊಂಡು ಹೋಗುವ ಬದ್ಧತೆ ಮತ್ತು ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ನಾವು ರಾಷ್ಟ್ರೀಯ ಹಿತ ಕಾಯುವ ನಿಟ್ಟಿನಲ್ಲಿ ಪ್ರಾಮಾಣಿಕ ಹೆಜ್ಜೆ ಇಡೋಣ’ಎಂದು ಕರೆ ನೀಡಿದರು.ಇದೇ ಸಂದರ್ಭದಲ್ಲಿ ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯ 60ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಪ್ರಯುಕ್ತ ಹಮ್ಮಿಕೊಳ್ಳಲು ಉದ್ದೇಶಿಸಿರುವ ವಜ್ರ ಮಹೋತ್ಸವ ಸಂಭ್ರಮದ ಸಲುವಾಗಿನ ಲಾಂಛನವನ್ನು ಅನಾವರಣಗೊಳಿಸಿದರು.ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೈರಾಜ ಚಿಕ್ಕ ಪಾಟೀಲ್, ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್  ಪಿ.ವಲ್ಲೇಪುರೆ, ಬೋಧನಾ ಸಹಾಯಕರುಗಳಾದ ಡಾ.ಸಂತೋಷ ಕುಲಕರ್ಣಿ, ಡಾ.ಗಿರೀಶ್ ಕುಮಾರ್, ದತ್ತಾತ್ರೇಯ ಭಟ್ಟ, ಸುರೇಶ್ ಡಿ.ಎಚ್, ಶಿವಶಂಕರ್ ಸುತಾರ್, ಹರೀಶ್ ಹೆಡ್ನವರ್, ಪ್ರಮೋದ ಕೆ.ವಿ,ನವೀನ್ ಕುಮಾರ್, ಕಛೇರಿ ನೌಕರರಾದ ನಂದಕುಮಾರ್, ಶಿವಕುಮಾರ್, ರಮೇಶ್ ಮತ್ತಿತರರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಮದನ್ ರಾಜ್ ಧ್ವಜಾರೋಹಣ ವಿಧಿ ವಿಧಾನ ಪೂರೈಸಿದರು.ದೃಶ್ಯ ಕಲಾ ಮಹಾವಿದ್ಯಾಲಯದ ವಜ್ರ ಮಹೋತ್ಸವ ಸಂಭ್ರಮದ ಸಲುವಾಗಿನ ಲಾಂಛನ ರಚನಾ ಸ್ಪರ್ಧೆಯಲ್ಲಿ ದೃಶ್ಯ ಕಲಾ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಹರೀಶ್ ಆಚಾರ್ ಎನ್ನುವವರು ರಚಿಸಿದ ಲಾಂಛನ ಆಯ್ಕೆ ಆಗಿ ಅನಾವರಣಗೊಂಡಿದೆ.