ವೈದ್ಯ ವಿದ್ಯಾರ್ಥಿನಿ ಕೊಲೆ: ಖಂಡನೆ
ಕಲಬುರಗಿ: ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಖಂಡನೀಯ.ಇದು ಇಡೀ ಸಮಾಜ ತಲೆತಗ್ಗಿಸುವ ವಿಷಯ ಎಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ‘ಎಲ್ಲಾ ವರ್ಗದ ಮಹಿಳೆಯರಿಗೆ ಸುರಕ್ಷತೆಯ ಕೊರತೆ ಇದೆ. ಸರ್ಕಾರ ಕೂಡಲೇ ಈ ಪ್ರಕರಣದ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ಶಿಕ್ಷಣ ಪಡೆಯುವುದು ಸಣ್ಣ ವಿಷಯವಲ್ಲ. ಸಾಕಷ್ಟು ಶ್ರಮವಹಿಸಿ ಈ ವೃತ್ತಿಯನ್ನು ಆರಿಸಿಕೊಂಡು ಬಂದಿರುತ್ತಾರೆ. ಜೀವ ಉಳಿಸುವ ವೈದ್ಯರ ಸ್ಥಿತಿ ಹೀಗಾದರೆ, ಜನಸಾಮಾನ್ಯರ ಪಾಡೇನು?’ ಎಂದು ಅವರು ಪ್ರಶ್ನಿಸಿದರು.
ತಮ್ಮದಲ್ಲದ ತಪ್ಪಿಗೆ ವೈದ್ಯರು ಹಲ್ಲೆಗೆ ಗುರಿಯಾಗುತ್ತಿದ್ದಾರೆ. ಇದರಿಂದ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬರುವ ಮಹಿಳೆಯರ ಸಂಖ್ಯೆ ಕುಸಿದಿದೆ. ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಾಗಾಗಿ ಸರ್ಕಾರ ಸೂಕ್ತ ಕ್ರಮ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ‘ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಮನ ಪರಿವರ್ತನೆಯಾಗ ಬೇಕು.ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗದ ಹೊರತು ಇಂತಹ ಘಟನೆಗಳು ನಿಲ್ಲುವುದಿಲ್ಲ. ಕೋಲ್ಕತ್ತ ಘಟನೆಯ ವಿರುದ್ಧ ಎಲ್ಲರೂ ಹೋರಾಟಕ್ಕೆ ಇಳಿಯಬೇಕು. ಆಳುವ ಸರ್ಕಾರಕ್ಕೆ ಪ್ರತಿರೋಧದ ಧ್ವನಿ ತಟ್ಟುವಂತೆ ಮಾಡಬೇಕು’ ಎಂದರು