ವಿಜಯಪುರ ಧೂಳಮುಕ್ತವಾಗಿರುವುದೇ ಒಂದು ಹೆಮ್ಮೆ: ಶಾಸಕ ಯತ್ನಾಳ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೧೭:ವಿಜಯಪುರ ನಗರ ಧೂಳಿನಿಂದ ಮುಕ್ತವಾಗಿದೆ ಎಂಬುವುದು ಹೆಮ್ಮೆಯ ವಿಷಯ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ವಾರ್ಡ್ ನಂ.೩೫ ರ ವ್ಯಾಪ್ತಿಯ ಮಹಾತ್ಮ ಗಾಂಧಿ ಕಾಲೊನಿಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿAದ ಮಂಜೂರಾದ ರೂ.೪೮೨.೯೦ ಲಕ್ಷ ಮೊತ್ತದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಡಾ. ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜನರ ಸಹಕಾರದಿಂದ ವಿಜಯಪುರ ನಗರ ನಿರೀಕ್ಷೆ ಮೀರಿ ಅಭಿವೃದ್ಧಿ ಕಂಡಿದ್ದು, ಧೂಳಿನಿಂದ ಮುಕ್ತವಾಗಿ, ದೇಶದಲ್ಲಿ ಒಳ್ಳೆಯ ಗಾಳಿ ಬೀಸುವ ನಗರಗಳ ಪಟ್ಟಿಯಲ್ಲಿ ೬ನೇ ಸ್ಥಾನದಲ್ಲಿರುವುದೇ ಸಾಕ್ಷಿ ಎಂದರು.
ಬಡ ಮಕ್ಕಳ ಅನುಕೂಲಕ್ಕಾಗಿ ಸುಮಾರು ಸುಮಾರು ರೂ. ೫ ಕೋಟಿ ಖರ್ಚು ಮಾಡಿ, ಅತ್ಯುತ್ತಮವಾದ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಇದು ನಿಮ್ಮ ಆಸ್ತಿಯಾಗಿದ್ದು, ಹಾಳು ಮಾಡದೆ ನಿಮ್ಮ ಮನೆಯಷ್ಟೇ ಸರಿಯಾಗಿ ಸ್ವಚ್ಛತೆಯೊಂದಿಗೆ ವಾಸ ಮಾಡಬೇಕು. ನೀವು ಹೋದ ಮೇಲೆ ಬೇರೆ ಬಡ ಮಕ್ಕಳಿಗೂ ಅನುಕೂಲ ಆಗಬೇಕು ಎಂದು ಕಿವಿಮಾತು ಹೇಳಿದರು.
ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ತಮ್ಮ ಜನಪ್ರತಿನಿಧಿ ಹೇಗಿರಬೇಕು, ಯಾರು ನಮ್ಮ ಹಿತ ಕಾಪಾಡುತ್ತಾರೆ, ಅಭಿವೃದ್ಧಿ ಕೆಲಸ ಮಾಡುತ್ತಾರೆಯೇ ಅಂತವರನ್ನು ಆಯ್ಕೆ ಮಾಡಲು ಮತ ಹಾಕಲು ನಿರ್ಧರಿಸಿದರೆ, ನಿಶ್ಚಿತವಾಗಿಯೂ ಭಾರತ ದೊಡ್ಡ ಶಕ್ತಿಯಾಗಿ ನಿಲ್ಲುತ್ತದೆ. ಪಾಕಿಸ್ತಾನದಲ್ಲೂ ಸಹ ಮೋದಿಯಂತಹ ಪ್ರಧಾನಿ ಬೇಕು ಎನ್ನುತ್ತಾರೆ. ಜಗತ್ತಿನಲ್ಲಿ ನಮ್ಮ ದೇಶಕ್ಕೆ ಬಹಳ ಗೌರವ ಬರುವಂತೆ ಮಾಡಿದ್ದು, ಜಗದ್ಗುರು ಆಗುವ ನಿಟ್ಟಿನಲ್ಲಿ ಭಾರತ ಸಾಗಿದೆ ಎಂದರು.
ಇದೇ ವೇಳೆ ಶಾಸಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಲೋನಿಯ ನಿವಾಸಿಗಳ ಅಹವಾಲು ಆಲಿಸಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಕುರಿಯವರ, ಪ್ರೇಮಾನಂದ ಬಿರಾದಾರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಮಾನವರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಈರಪ್ಪ ಆಶಾಪೂರ, ಗುತ್ತಿಗೆದಾರ ಶಂಕರಗೌಡ ಹೊಸಮನಿ ಸೇರಿದಂತೆ ಮತ್ತಿತರರು ಇದ್ದರು.