ವಿಜೃಂಭಣೆಯಿಂದ ನಡೆದ ವರಮಹಾಲಕ್ಷ್ಮೀಯ ಆರಾಧನೆ-ದೇವಿಗೆ ವಿಶೇಷಪೂಜೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.17; ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆಯಾದ ಲಕ್ಷ್ಮಿ ದೇವಿಯ ಆರಾಧನೆಯ ದಿನವಾದ ಇಂದು ವರಲಕ್ಷ್ಮಿ ವ್ರತವು ನಗರದೆಲ್ಲೆಡೆ ಅತ್ಯಂತ ಸಂಭ್ರಮ ಹಾಗೂ ವಿಜೃಂಭಣೆಯಿಂದ ಜರುಗಿತು.ಗುರುವಾರದಿಂದಲೇ ಸಕಲ ತಯಾರಿಯಲ್ಲಿ ತೊಡಗಿದ್ದ ಮಹಿಳಾ ಮಣಿಗಳು ಶುಕ್ರವಾರ ಬೆಳಗಿನಿಂದಲೇ ಲಕ್ಷ್ಮೀದೇವಿಗೆ ವಿವಿಧ ಅಲಂಕಾರಗಳಿಂದ ಶೃಂಗರಿಸಿ ವಿಧಿವಿಧಾನಗಳಿಂದ ವಿಶೇಷವಾಗಿ ಪೂಜೆ ನೆರವೇರಿಸಿದ್ದರು ಕಂಡು ಬಂದಿತು.ವರ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮತ್ತು ಗೌರವಿಸಲು ಮಹಿಳೆಯರು ವಿಶೇಷ ಪೂಜೆ ಮತ್ತು ಉಪವಾಸ ವ್ರತವನ್ನು ಕೂಡ ಆಚರಿಸಿದ್ದಾರೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯಂದು ವರಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಸಂಪತ್ತು ಮತ್ತು ಸಮೃದ್ಧಿಗೆ ಸಂಬಂಧಿಸಿದ ಲಕ್ಷ್ಮಿ ದೇವಿಯ ಅವತಾರಗಳಲ್ಲಿ ಒಂದಾದ ವರಲಕ್ಷ್ಮಿ ದೇವಿಯನ್ನು ಪೂಜಿಸಲು ಇದು ಪ್ರಮುಖ ದಿನವಾಗಿದೆ ಎನ್ನಲಾಗುತ್ತದೆ.ಪೌರಾಣಿಕ ನಂಬಿಕೆಗಳ ಪ್ರಕಾರ, ಕ್ಷೀರಸಾಗರದಿಂದ ಜನಿಸಿದ ವರಲಕ್ಷ್ಮಿಯನ್ನು ಪೂಜಿಸುವುದರಿಂದ ಸಮೃದ್ಧಿ ಹೆಚ್ಚಾಗುತ್ತದೆ ಮತ್ತು ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ.ವರಮಹಾಲಕ್ಷ್ಮಿ ವ್ರತವು ಧಾರ್ಮಿಕ ಮಹತ್ವವುಳ್ಳ ವ್ರತವಾಗಿದೆ. ಲಕ್ಷ್ಮಿ ದೇವಿಯನ್ನು ಗೌರವಿಸಲು, ಪೂಜಿಸಲು ಈ ದಿನವನ್ನು ಆಚರಿಸಲಾಗುತ್ತದೆ ಮತ್ತು ಹೆಚ್ಚಾಗಿ ವಿವಾಹಿತ ಮಹಿಳೆಯರು ತಮ್ಮ ಪತಿ ಮತ್ತು ಇತರ ಕುಟುಂಬ ಸದಸ್ಯರ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಈ ವ್ರತ ಆಚರಿಸುತ್ತಾರೆ. ಈ ಶುಭ ದಿನದಂದು ಅಷ್ಟ ಲಕ್ಷ್ಮಿಯನ್ನು ಪೂಜಿಸುವುದು ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಈ ವ್ರತ ಆಚರಿಸುವ ಮಹಿಳೆಯರು, ಸಂಪತ್ತು, ಪ್ರೀತಿ, ಶಾಂತಿ, ಕೀರ್ತಿ, ಶಕ್ತಿ ಮತ್ತು ಎಂಟು ಶಕ್ತಿಗಳನ್ನು ಪ್ರತಿನಿಧಿಸುವ ಅಷ್ಟಲಕ್ಷ್ಮೀಯರ ಆಶೀರ್ವಾದವನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ.ದಾವಣಗೆರೆಯಲ್ಲಿಯೂ ವರಮಹಾಲಕ್ಷ್ಮೀ ಹಬ್ಬ ಸಂಭ್ರಮದಿಂದ‌ ಜರುಗಿದ್ದು
ಕಂಡುಬಂದಿತು.