ಮೋಕ್ಷಮಾರ್ಗದಲ್ಲಿ ಸಾಗಲು ದೀಕ್ಷೆ ಸಹಕಾರಿ; ಶ್ರೀಶೈಲ ಶ್ರೀ
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೧೬; ವೀರಶೈವ ಲಿಂಗಾಯತ ಧರ್ಮದಲ್ಲಿ ಶ್ರೀ ಗುರುವು ಶಿಷ್ಯನಿಗೆ ದಯಪಾಲಿಸುವ ಲಿಂಗದೀಕ್ಷೆಯನ್ನು ಯಾವುದೇ ಜಾತಿಭೇದವಿಲ್ಲದೇ ಸರ್ವರೂ ಪಡೆದುಕೊಳ್ಳಲು ಮುಕ್ತ ಅವಕಾಶವಿರುವುದರಿಂದ ಮತ್ತು ಮೋಕ್ಷ ಮಾರ್ಗದಲ್ಲಿ ಸಾಗಲು ಇದುವೇ ಮೊದಲ ಅಡಿಪಾಯ ಆಗಿರುವುದರಿಂದ  ಇದು ಮೋಕ್ಷಕ್ಕೆ ಮಹಾದ್ವಾರವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ  ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.ಶ್ರೀಶೈಲದ ಶ್ರೀ ಜಗದ್ಗುರು ಸೂರ್ಯಸಿಂಹಾಸನ ಮಹಾಪೀಠದಲ್ಲಿ ಜರುಗಿದ ಸಾಮೂಹಿಕ ಅಯ್ಯಾಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಾ ಈ ವಿಚಾರವನ್ನು ತಿಳಿಸಿದರು. ಮನುಷ್ಯನಿಗೆ ಅನಾದಿಕಾಲದಿಂದ ಆಣವ ಮಾಯಿಯ ಮತ್ತು ಕಾರ್ಮಿಕ ಎಂಬ ಮೂರು ಪ್ರಕಾರದ ಮಲಗಳು ಆವರಿಸಿರುತ್ತವೆ. ಈ ಮಲಗಳೇ ಮನುಷ್ಯನ ಸಾಂಸಾರಿಕ ಎಲ್ಲ ದುಃಖಗಳಿಗೆ ಮತ್ತು ಭವಬಂಧನಕ್ಕೆ ಕಾರಣವಾಗಿರುತ್ತವೆ.  ಶ್ರೀಗುರುವು ಇಷ್ಟಲಿಂಗ ದೀಕ್ಷೆ ಮತ್ತು ಅಯ್ಯಾಚಾರಗಳನ್ನು ನೀಡುವ ಸಂದರ್ಭದಲ್ಲಿ ವೇಧಾದೀಕ್ಷೆ, ಮಂತ್ರದೀಕ್ಷೆ ಮತ್ತು ಕ್ರಿಯಾದೀಕ್ಷೆ ಎಂಬ ಮೂರು ಪ್ರಕಾರದ ದೀಕ್ಷೆಗಳನ್ನು ದಯಪಾಲಿಸುವ ಮೂಲಕ ಆಣವಾದಿ ಮಲತ್ರಯಗಳನ್ನು ತಿರೋಹಿತಗೊಳಿಸುತ್ತಾನೆ ಮತ್ತು ಶಿವಸ್ವರೂಪವಾದ ಇಷ್ಟಲಿಂಗವನ್ನು ದೇಹದಮೇಲೆ ಸದಾ ಧರಿಸಿಕೊಂಡು ಪ್ರತಿನಿತ್ಯ ಅದನ್ನು ತಪ್ಪದೆ ಪೂಜಿಸಬೇಕೆಂದು ಆದೇಶಿಸುತ್ತಾನೆ. ಸದಾಚಾರ ಸದ್ವಿಚಾರ ಸಂಪನ್ನನಾಗಿ ನಿಷ್ಠೆಯಿಂದ ಲಿಂಗಪೂಜಾ ಮಹಾವ್ರತವನ್ನು ಪರಿಪಾಲಿಸುವ ವ್ಯಕ್ತಿಯು ಸುಲಭವಾಗಿ ಮೋಕ್ಷವನ್ನು ಪಡಿಯುತ್ತಾನೆ ಎಂಬುದಾಗಿ ವಿವರಿಸಿದರು.ಸಮಾಜದಲ್ಲಿ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಮತ್ತು ಶೂದ್ರ ಎಂಬುದಾಗಿ ನಾಲ್ಕು ವರ್ಣಗಳು ಉಂಟು ಬ್ರಹ್ಮಚರ್ಯ ಗೃಹಸ್ಥ ವಾನಪ್ರಸ್ಥ ಮತ್ತು ಸನ್ಯಾಸ ಎಂಬುದಾಗಿ ನಾಲ್ಕು ಆಶ್ರಮಗಳುಂಟು. ಸ್ತ್ರೀ ಪುರುಷ ಮತ್ತು ನಪುಂಶಕ ಎಂಬುದಾಗಿ ಮೂರು ಲಿಂಗಗಳು ಉಂಟು. ಇವುಗಳಲ್ಲಿ ಯಾವುದೇ ಜಾತಿ ವರ್ಗ ವರ್ಣದವರಿದ್ದರೂ ಶಿವನಲ್ಲಿ, ಶಿವಧರ್ಮದ ಆಚರಣೆಯಲ್ಲಿ ಶ್ರದ್ಧೆಯುಳ್ಳವನಾಗಿದ್ದರೆ, ಗುರುವಿನಿಂದ ದೀಕ್ಷೆಯನ್ನು ಪಡೆದು ಲಿಂಗಧಾರಣೆ ಮಾಡಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ. ಆದ್ದರಿಂದ ಲಿಂಗವು ಯಾವುದೇ ಒಂದು ಜಾತಿ ಅಥವಾ ಸಮುದಾಯದ ಕುರುಹಾಗಿರದೇ ಶಿವಜ್ಞಾನದ ಮತ್ತು ಶಿವಧರ್ಮದ ಆಚರಣೆಗಳ ಸಂಕೇತವಾಗಿದೆ. ಇಷ್ಟಲಿಂಗವನ್ನು ದೇಹದ ಮೇಲೆ ಧರಿಸಿ ಪ್ರತಿನಿತ್ಯ ತಪ್ಪದೆ ಪೂಜಿಸುವವರೆಲ್ಲರೂ ವೀರಶೈವ ಲಿಂಗಾಯಿತರು. ಲಿಂಗದಾರಿಗಳಾದವರೆಲ್ಲರೂ ಒಂದೇ ತೆರನಾದ ಧಾರ್ಮಿಕ ಆಚರಣೆ ಹೊಂದಿದವರಾಗಿರುವುದರಿಂದ ಅವರಲ್ಲಿ ಯಾವುದೇ ರೀತಿಯ ಭೇದಭಾವವನ್ನು ಮಾಡಬಾರದೆಂದು ತಿಳಿಸಿದರು.ಮಾಡುವ ಪೂಜೆ ಫಲಪ್ರದವಾಗಬೇಕಾದರೆ ಪರೋಪಕಾರ ಮುಂತಾದ ಲೋಕೊತ್ತರ ಗುಣಗಳನ್ನು ಅಳವಡಿಸಿಕೊಂಡಿರಬೇಕು ಪ್ರತಿನಿತ್ಯ ಪೂಜೆ ಮಾಡೋದು ಆದರೆ ಮನದಲ್ಲಿ ದುರ್ಗುಣ ದುರಾಚಾರಗಳನ್ನು ರೂಡಿಸಿಕೊಂಡಿದ್ದರೆ ಆ ಪೂಜೆ ಪ್ರಯೋಜನಕ್ಕೆ ಬರಲಾರದು. ರಾವಣ ಮಹಾ ಶಿವಭಕ್ತನಾಗಿದ್ದರೂ ಮಹಾ ಶಕ್ತಿವಂತನಾಗಿದ್ದರೂ ಲೋಕಕಂಟಕವಾದ ಕುಕೃತ್ಯಗಳಲ್ಲಿ ತೊಡಗಿಕೊಂಡಿರುವ ಕಾರಣ ಕೊನೆಗೆ ಅವನತಿ ಹೊಂದಬೇಕಾಯಿತು. ಬದುಕು ಸಾಗಬೇಕಾದರೆ ಪ್ರೀತಿ ಎಷ್ಟು ಮುಖ್ಯವೋ, ನಾವು ಉನ್ನತಿ ಪಡೆದುಕೊಳ್ಳಬೇಕಾದರೆ, ನೀತಿ ಅಷ್ಟೇ ಮುಖ್ಯವಾದುದು. ಎಂದರು.ಈ ಸಂದರ್ಭದಲ್ಲಿ ಗುರುಗುಂಟದ ಶ್ರೀ ಷ ಬ್ರ ಸದಾನಂದ ಶಿವಾಚಾರ್ಯ ಸ್ವಾಮಿಗಳು ಎಲ್ಲ ದೀಕ್ಷಾರ್ಥಿಗಳಿಗೆ ಲಿಂಗ ಮತ್ತು ಮಂತ್ರೋಪದೇಶವನ್ನು ನೀಡಿದರು. ವಿಜಯಪುರದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಉಪಸ್ಥಿತರಿದ್ದರು.