ಚಾಮುಂಡಿ ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದು
ಸಂಜೆವಾಣಿ ನ್ಯೂಸ್
ಮೈಸೂರು: ಆ.17:- ಚಾಮುಂಡೇಶ್ವರಿ ದೇಗುಲ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರತಿಪಾದಿಸಿದರು.
ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟ ಅರಣ್ಯ ಇಲಾಖೆ, ಗ್ರಾಮಪಂಚಾಯತಿ, ಪ್ರವಾಸೋದ್ಯಮ ಇಲಾಖೆಗಳ ವ್ಯಾಪ್ತಿಗೆ ಒಳಪಟ್ಟಿದೆ. ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ಒಟ್ಟು 45.7 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಚಾಮುಂಡೇಶ್ವರಿ ದೇವಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಕಳೆದ ಜುಲೈ 1ರಂದು ಗೆಜೆಟ್ ನಲ್ಲಿ ಆದೇಶ ಪ್ರಕಟಿಸಿದೆ. ಇದಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ, ಜೆಡಿಎಸ್ ನಾಯಕರು ಹೇಳಿಕೆಗಳನ್ನು ನೀಡುವ ಮೂಲಕ ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ರಾಜಮನೆತನವನ್ನು ಕೆಣಕುತ್ತಾರೆಂದು ಎಚ್.ವಿಶ್ವನಾಥ್ ಹೇಳಿಕೆ ನೀಡಿದ್ದು, ಅವರ ಹೇಳಿಕೆಯನ್ನು ಖಂಡಿಸುತ್ತೇವೆ. ಮಾತ್ರವಲ್ಲ, ಶಾಸಕ ಜಿ.ಟಿ.ದೇವೇಗೌಡ, ಎಚ್.ವಿಶ್ವನಾಥ್ ಈ ಹಿಂದೆ ಪ್ರಾಧಿಕಾರ ರಚನೆ ಸ್ವಾಗತಾರ್ಹ ಎಂದಿದ್ದರು. ಇದೀಗ ಇವರು ನೀಡಿರುವ ಹೇಳಿಕೆಗಳನ್ನು ಖಂಡಿಸುತ್ತೇವೆ ಎಂದರು.
ಪ್ರಾಧಿಕಾರ ರಚನೆ ಮಾಡಿದರೆ ಏನೆಲ್ಲಾ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ. ಪ್ರಾಧಿಕಾರ ರಚನೆ ಆದರೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ.
ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಮೈಸೂರಿನ ರಾಜವಂಶಸ್ಥರು ಶಾಶ್ವತ ಸದಸ್ಯರಾಗಿರುತ್ತಾರೆ.
ಪ್ರಾಧಿಕಾರಕ್ಕೆ ಯಾವುದೇ ಸದಸ್ಯರನ್ನು ನಾಮನಿರ್ದೇಶನ ಮಾಡುವುದಿಲ್ಲ. ಯಾವುದೇ ಜನಪ್ರತಿನಿಧಿಗಳನ್ನು ನೇಮಕ ಮಾಡುವುದಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬಿಜೆಪಿ, ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ನಾವು ಸುಮ್ಮನೆ ಕುಳಿತಿದ್ದೇವೆ. ನಿನ್ನೆ-ಮೊನ್ನೆ ಗೆದ್ದಂತಹ ಶಾಸಕ ಶ್ರೀವತ್ಸ ಸಿದ್ದರಾಮಯ್ಯ ಅವರು ಜೈಲಿನಲ್ಲಿ ಕುಳಿತು ಅಧಿಕಾರ ಮಾಡುತ್ತಾರೆ ಎಂದಿದ್ದಾರೆ. ನಿಮಗೆ ತಾಕತ್ತು, ಧಮ್ಮು ಇದ್ದರೇ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸಿ ನೋಡೋಣ ಎಂದು ನಿಂದಿಸಿದರು.
ರಾಜಕೀಯ ತೆವಲಿಗೋಸ್ಕರ ಈ ರೀತಿ ಮಾತನಾಡೋದಲ್ಲ. ಕೆಲ ಬಿಜೆಪಿಯವರು ಇದನ್ನೇ ಟ್ರೋಲ್ ಮಾಡುತ್ತಾರೆ. ಈ ರೀತಿ ಟ್ರೋಲ್ ಮಾಡೋರಿಗೆ ಯಾವುದರಲ್ಲಿ ಹೊಡಿಯಬೇಕು. ಈ ರೀತಿಯಾದ ಟ್ರೋಲ್ ಮಾಡುವವರ ವಿರುದ್ಧ ಸೈಬರ್ ಕ್ರೈಮ್‍ಗೆ ದೂರು ಕೊಡುತ್ತೇವೆ ಎಂದರು.
ಶೀಘ್ರದಲ್ಲೇ ತಡೆಯಾಜ್ಞೆ ತೆರವು:
ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಲು ಚಾಮುಂಡಿಬೆಟ್ಟ ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಸ್ವಾಗತಿಸಿದ್ದವರು ಈಗ ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದೀರಿ ಎಂದು ಪ್ರಶ್ನಿಸಿದ ಅವರು, ಚಾಮುಂಡಿಬೆಟ್ಟ ಮೈಸೂರು ರಾಜಮನೆತನಕ್ಕೆ ಸೇರಿದೆ ಎಂದು ಪ್ರಮೋದಾದೇವಿ ಒಡೆಯರ್ ನೀಡಿರುವ ಹೇಳಿಕೆಯಲ್ಲೂ ಸ್ಪಷ್ಟತೆಯಿಲ್ಲ.
ಆದ್ದರಿಂದ ಪ್ರಾಧಿಕಾರ ರಚನೆಗೆ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ಶೀಘ್ರದಲ್ಲೇ ತೆರವುಗೊಳಿಸುತ್ತೇವೆ ಎಂದು ತಿಳಿಸಿದರು.