ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಸಚಿವರಿಗೆ ಮನವಿ
ಬೀದರ:ಅ.1: 27ನೇ ಆಗಷ್ಟ 2024 ರಂದು ರೈತ ಸಂಘದ ವತಿಯಿಂದ ಹೆಸರು, ಉದ್ದು ಮತ್ತು ಸೋಯಾಬಿನ್ ಖರೀದಿ ಕೇಂದ್ರ ಪ್ರಾರಂಭ ಮಾಡಿ ಎಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಕೊಡಲಾಗಿತ್ತು. ಆದರೆ ಇಲ್ಲಿಯವರೆಗೆ ಖರೀದಿ ಕೇಂದ್ರ ಪ್ರಾರಂಭವಾಗಿರುವುದಿಲ್ಲ. ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ರೈತ ಮುಖಂಡರು ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿದರು.
ಈಗಾಗಲೆ ಸುಮಾರು ಶೇ.80% ಪ್ರತಿ ಶತ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಯಲ್ಲಿ ಬಂದ ಬೆಲೆಗೆ ಮಾರಾಟ ಮಾಡಿದ್ದಾರೆ. ಈಗಲಾದರೂ ಆದಷ್ಟು ಬೇಗ ಖರೀದಿ ಕೇಂದ್ರ ಪ್ರಾರಂಭ ಮಾಡಿದರೆ ಉಳಿದ ರೈತರಿಗೆ ಅನುಕೂಲವಾಗುತ್ತದೆ. ಪ್ರಸಕ್ತ ಸಾಲಿನ ಕಬ್ಬಿನ ದರ ಪ್ರತಿ ಟನ್ನಿಗೆ ರೂ. 3 ಸಾವಿರ ನಿಗದಿ ಪಡಿಸಬೇಕು. ನರೇಗಾ ಯೋಜನೆಯಡಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ಕೆಲಸ ಕರ್ಯಗಳನ್ನು ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು.ಅಗಷ್ಟ ತಿಂಗಳಲ್ಲಿ ಕೊನೆಯ ವಾರ ಮತ್ತು ಸಪ್ಟೆಂಬರ್ ತಿಂಗಳಲ್ಲಿ ಮೊದಲಿನ 3 ವಾರಗಳು ಸತತವಾಗಿ ಅತಿವೃಷ್ಟಿಯಿಂದ ಉದ್ದಿನ ಬೆಳೆ ಸಂಪೂರ್ಣವಾಗಿ ಮೊಳಕೆ ಒಡೆದು ಹಾನಿಯಾಗಿದೆ. ಅದಕ್ಕೆ ತಾವುಗಳು ಜಿಲ್ಲೆಯ ಕೃಷಿ ಅಧಿಕಾರಿಗಳಿಗೆ ಸಮೀಕ್ಷೆ ಮಾಡಲು ಹೇಳಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಭಾಲೇಶ್ವರ ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬಿನ ಬಿಲ್ಲು ಇಲ್ಲಿಯವರೆಗೆ ಸಂಪೂರ್ಣವಾಗಿ ರೈತರ ಖಾತೆಗೆ ಜಮಾ ಮಾಡದೇ ಇರುವುದು ಬಹಳ ಖೇದಕರ ಸಂಗತಿ. ರೈತರ ಕಬ್ಬು ಲಾಗೋಡಿ ಹಾಕಿ ಕಷ್ಟ ಪಟ್ಟು ಬೆಳೆಸಲು ಒಂದು ವರ್ಷ ಬೇಕಾಗುತ್ತದೆ. ಆದರೆ ಕಾರ್ಖಾನೆಯವರು ಬಿಲ್ಲು ಪಾವತಿಸಲು ಒಂದು ವರ್ಷ ಮಾಡಿದರೆ ರೈತ ಹೇಗೆ ಬದುಕುತ್ತಾನೆ?. ಆದಕಾರಣ ತಾವುಗಳು ಒಂದು ವಾರದಲ್ಲಿ ಭಾದ್ಧೇಶ್ವರ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ ಬಾಕಿ ಬಿಲ್ಲು ಪಾವತಿಸಲು ಅನುವು ಮಾಡಿಕೊಟ್ಟು ರೈತರ ಹಿತ ಕಾಪಾಡಬೇಕು.
ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲಿ ಸುಮಾರು 17-18 ಲಕ್ಷ ಮೇಟ್ರಿಕ್ ಟನ್ ಕಬ್ಬು ಬೆಳೆಯುತ್ತಿದ್ದು, ಈಗಾಗಲೇ ಬಿ.ಎಸ್.ಎಸ್.ಕೆ ಕಾರ್ಖಾನೆ ಮುಚ್ಚಲ್ಪಟ್ಟಿದೆ. ಮತ್ತು ಚಿಂಚೋಳಿ ಕಾರ್ಖಾನೆ ಪ್ರಾರಂಭಿಸಲು / ಜಾರಿ ಮಾಡಲು ಸರ್ಕಾರ ಅನುಮತಿ ಕೊಡುತ್ತಿಲ್ಲ. ಆದಕಾರಣ ಜಿಲ್ಲೆಯಲ್ಲಿ ಉಳಿದ ಕಾರ್ಖಾನೆಗಳಿಗೆ 17-18 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲು ಸಾಧ್ಯವಿಲ್ಲ. ಅದಕಾರಣ, ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಕಾರ್ಖಾನೆಗಳು ಅಕ್ಟೋಬರ್ ತಿಂಗಳಿಂದಲೇ ಕಬ್ಬು ನುರಿಸುವ ಪ್ರಕ್ರಿಯೇ ಪ್ರಾರಂಭಿಸಬೇಕು. ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಅಮರ ಖಂಡ್ರೆಯವರು ಅಧ್ಯಕ್ಷರು ಆದ ನಂತರ ರೈತರಿಗೆ ಯಾವುದೇ ಪ್ರಕಾರದ ಸಾಲ ಸೌಲಭ್ಯ ಸಿಗುತ್ತಿಲ್ಲ. ಅದಕ್ಕೆ ತಾವುಗಳು ರೈತರಿಗೆ ಸಾಲ ಸೌಲಭ್ಯ ಒದಗಿಸಲು ಅನುಕೂಲ ಮಾಡಿಕೊಡಬೇಕು.
ಈ ಮೇಲ್ಕಂಡ ಬೀದರ ಜಿಲ್ಲೆಯ ರೈತರ ಸಮಸ್ಯಗಳು ತಾವುಗಳು ಗಂಭೀರವಾಗಿ ಪರಿಗಣಿಸಿ ಅತಿ ಶೀಘ್ರದಲ್ಲಿ ಬಗೆ ಹರಿಸಿ ರೈತರ ಹಿತ ಕಾಪಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಬಿದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಜವಾಬ್ದಾರರು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೀದರ ವತಿಯಿಂದ ಜಿ. ಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ
ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಕಾರ್ಯಾದಕ್ಷ ಶ್ರೀಮಂತ ಬಿರಾದಾರ, ರಾಜ್ಯ ಪ್ರತಿನಿಧಿ ಶೇಷರಾವ್ ಕಣಜಿ, ಸುಭಾಷೆ ರಗಟೆ, ವಿಶ್ವನಾಥ ಧರಣೆ, ನಾಗಯ್ಯಾ ಸ್ವಾಮಿ, , ಬಾಬುರಾವ ಜೋಳದಾಬಕೆ, ಪ್ರಕಾಶ ಬಾವಗೆ, ಶಿವಾನಂದ ಹುಡುಗೆ, ಪ್ರಭುದಾಸ, ಬಾಬುರಾವ ಬೆಟ್ಟದ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.