ಬಂಜಾರಾ ಶ್ರೀಮಂತ ಸಂಸ್ಕೃತಿ:ದರ್ಶನಾ
ವಿಜಯಪುರ,ಅ,1: ಬಂಜಾರಾ ಸಮುದಾಯದ ಸಂಸ್ಕೃತಿ ಅತ್ಯಂತ ಶ್ರೀಮಂತ ಸಂಸ್ಕೃತಿಯಾಗಿದ್ದು, ಸದ್ಯ ಈ ಸಮಾಜದ ಉಡುಪುಗಳಿಗೆ ಜಗತ್ತಿನಾದ್ಯಂತ ಉತ್ತಮ ಬೇಡಿಕೆ ಇದೆ. ಬಂಜಾರಾ ಸಮುದಾಯದ ಮಹಿಳೆಯರು ಕರಕುಶಲ ಕೌಶಲದಲ್ಲಿ ಪರಿಣತಿ ಸಾಧಿಸಿರುತ್ತಾರೆ ಎಂದು ಧಾರವಾಡದ ಕರಕುಶಲ ಸೇವಾ ಕೇಂದ್ರದ ಅಧಿಕಾರಿ ದರ್ಶನಾ ಹೇಳಿದರು.
ವಿಜಯಪುರ ತಾಲ್ಲೂಕಿನ ಮಖಣಾಪುರ ಎಲ್.ಟಿ 01 ತಾಂಡಾದಲ್ಲಿ ಕೇಂದ್ರ ಸರ್ಕಾರದ ಜವಳಿ ಸಚಿವಾಲಯ, ಕರಕುಶಲ ಸೇವಾ ಕೇಂದ್ರ ಧಾರವಾಡ, ಆಲ್ ಇಂಡಿಯಾ ಬಂಜಾರಾ ಸೇವಾ ಸಂಘ ವಿಜಯಪುರ ಸಹಯೋಗದಲ್ಲಿ ಶನಿವಾರ ನಡೆದ 60 ದಿನ ಕಸೂತಿ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ ಹಾಗೂ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಳ್ಳಿಯ ಮಹಿಳೆಯರು ಕೇವಲ ಮನೆ, ಹೊಲದ ಕೆಲಸಕ್ಕೆ ಸೀಮಿತರಾಗದೆ, ಸರ್ಕಾರದಿಂದ ಬರುವ ಯೋಜನೆಗಳ ಸದುಪಯೋಗ ಪಡೆದುಕೊಂಡು ಉನ್ನತ ಸ್ಥಾನಕ್ಕೆ ಏರಲು ಪ್ರಯತ್ನಿಸಬೇಕು. ಸರ್ಕಾರದ ತರಬೇತಿ ಯೋಜನೆಗಳನ್ನು ಪಡೆದು ತಮ್ಮ ಕೌಶಲ ಹೆಚ್ಚಿಸಿಕೊಳ್ಳುವ ಮೂಲಕ ಸದೃಢರಾಗಬೇಕು ಎಂದು ಸಲಹೆ ನೀಡಿದರು.
ಸದÀ್ಯ ತರಬೇತಿಯಲ್ಲಿ 30 ಮಹಿಳೆಯರು ಸಕ್ರಿಯರಾಗಿ ಕಸೂತಿ ತರಬೇತಿ ಪಡೆದುಕೊಂಡಿದ್ದು, ತರಬೇತಿ ಸಂದರ್ಭದಲ್ಲಿ ನೀಡಿರುವ ಗೌರವಧನವನ್ನು ಉತ್ತಮ ಕೆಲಸಕ್ಕೆ ವಿನಿಯೋಗಿಸಿಕೊಳ್ಳಬೇಕು. ತರಬೇತಿಗೆ ಹಾಜರಾದ ಕೆಲ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಇಲಾಖೆಯಿಂದ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದರು.
ಆಲ್ ಇಂಡಿಯಾ ಬಂಜಾರಾ ಸೇವೆ ಸಂಘದ ಯುವ ಘಟಕದ ಜಿಲ್ಲಾಧ್ಯಕ್ಷ ರವಿ ಲಮಾಣಿ ಮಾತನಾಡಿ, ಕರ ಕುಶಲ ತರಬೇತಿ ಪಡೆದ ಮಹಿಳೆಯರು ತಮ್ಮದೇಯಾದ ಒಂದು ಗುಂಪು ಮಾಡಿ ಬಂಜಾರಾ ಕಸೂತಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಉದ್ಯಮ ಪ್ರಾರಂಭಿಸಬೇಕು, ಕೇಂದ್ರ ಸರ್ಕಾರದಿಂದ ಮುದ್ರಾ ಯೋಜನೆಯ ಸಹಾಯ ಕೂಡ ಇದಕ್ಕೆ ದೊರೆಯಲಿದೆ ಎಂದು ಸಲಹೆ ನೀಡಿದರು.
ಬಂಜಾರಾ ಸಮುದಾಯ ಹಿಂದುಳಿದ ಸಮಾಜ ಎನ್ನುವ ಹಣೆಪಟ್ಟಿ ಕಳಚಿ ಹಾಕಲು ಮಹಿಳೆಯರು ಮುಂದಾಗಬೇಕು. ಬಂಜಾರಾ ಸಂಸ್ಕೃತಿಯ ಶ್ರೀಮಂತಿಕೆ ಪ್ರತೀಕವಾದ ಬಂಜಾರಾ ಕಸೂತಿ ಉಡುಪುಗಳು ಎಲ್ಲೆಡೆ ಖ್ಯಾತಿ ಪಡೆಯುವಂತಾಗಬೇಕು ಎಂದರು.
ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಬಾಬು ಪವಾರ, ಶಾರದಾ ಲಮಾಣಿ, ಸುನೀಲ, ತರಬೇತಿದಾರ ಜಯಶ್ರೀ ಲಮಾಣಿ, ಕರಕುಶಲ ಸೇವಾ ಕೇಂದ್ರದ ಸಹಾಯಕ ಅಧಿಕಾರಿ ಖುμïಮಿಸ್, ಸೇವು ಗೋಪು ಲಮಾಣಿ, ಲೋಕು ಚಹ್ವಾಣ, ಪರಶುರಾಮ ಪವಾರ, ವಾಲು ಪೂಜಾರಿ, ಗಣಪತಿ ಪೂಜಾರಿ ಇದ್ದರು.