ಸಮಾಜಕ್ಕೆ ಬೇಕಿರುವುದು ಶಿಕ್ಷಣ ಸಂಸ್ಥೆಗಳು
ಸಂಜೆವಾಣಿ ನ್ಯೂಸ್
ಮೈಸೂರು: ಆ.17:- ಪ್ರಸ್ತುತ ಸಮಾಜಕ್ಕೆ ಬೇಕಾಗಿರುವುದು ಶಿಕ್ಷಣ ಸಂಸ್ಥೆಗಳೇ ಹೊರತು ದೇವಸ್ಥಾನಗಳಲ್ಲ ಎಂದು ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ, ಸಾಹಿತಿ ಡಾ.ಎಸ್.ಶಿವರಾಜಪ್ಪ ಹೇಳಿದರು.
ಜನಪರ ಸಾಹಿತ್ಯ ಪರಿಷತ್ತು ನಗರದ ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ.ಎಸ್.ದತ್ತೇಶ್ ಕುಮಾರ್ ಅವರ ಸಾಂಸ್ಕೃತಿಕ ಚಿಂತನೆಗಳು ಮತ್ತು ಮಾನಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದ ಅವರು, ಶಿಕ್ಷಣದಿಂದ ಮನುಷ್ಯನ ಸರ್ವಾಂಗಿಣ ಅಭಿವೃದ್ಧಿ ಸಾಧ್ಯ ಎಂದರು.
ಶಿಕ್ಷಣದ ಮಹತ್ವ ಅರಿತಿರುವ ಡಾ.ಎಸ್.ದತ್ತೇಶ್ ಕುಮಾರ್ ಅವರು ಕೊಳ್ಳೇಗಾಲದಲ್ಲಿ ಮಾನಸ ಶಿಕ್ಷಣ ಸಂಸ್ಥೆಯನ್ನು ಕಳೆದ ಮೂರು ದಶಕಗಳಿಂದ ಕಟ್ಟಿ ಬೆಳೆಸಿದ್ದಾರೆ. ಇದಕ್ಕೆ ಸಹೋದರ ನಾಗರಾಜು, ರಾಣಿ ನಾಗರಾಜು, ರೂಪಾ ದತ್ತೇಶ್, ಸಂಸ್ಥೆಯ ಆಡಳಿತ ಮಂಡಳಿ, ಅಧ್ಯಾಪಕರು, ಅಧ್ಯಾಪಕೇತರರು ಬೆನ್ನೆಲುಬಾಗಿ ನಿಂತಿದ್ದಾರೆ. ಈವರೆಗೆ 40 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತಯಾರಾಗಿದ್ದು,. ದೇಶ- ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದ ಸಿಗುತ್ತಿರುವ ಗೌರವ ಯಾವುದೇ ಹಣ ಸಂಪಾದನೆ, ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣ, ಕಾರುಗಳಲ್ಲಿ ಓಡಾಡುವುದರಿಂದ ಸಿಗುವುದಿಲ್ಲ ಎಂದರು.
ದತ್ತೇಶ್ ಅವರು ಕೇವಲ ಸಾಂಸ್ಕೃತಿಕವಾಗಿ ಮಾತ್ರವಲ್ಲದೇ ಸಾಹಿತ್ಯಕ, ಸಾಮಾಜಿಕ, ಧಾರ್ಮಿಕವಾಗಿಯೂ ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷ ನಡೆಸುವ ಮಾನಸೋತ್ಸವ ಇದಕ್ಕೆ ನಿದರ್ಶನ. ಇದಲ್ಲದೇ ಪ್ರತಿನಿತ್ಯ ಹತ್ತಾರು ಬಡವರಿಗೆ ಬೇರೆ ಬೇರೆ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಅಕ್ಷರದ ಜೊತೆಗೆ ಪ್ರತಿನಿತ್ಯ ನೂರಾರು ಮಂದಿಗೆ ಉಚಿತವಾಗಿ ದಾಸೋಹದ ವ್ಯವಸ್ಥೆಯನ್ನು ಕೂಡ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಕಿಂಗ್ ಮೇಕರ್ ಆಗಿದ್ದಾರೆ ಎಂದು ಅವರು ಶ್ಲಾಘಿಸಿದರು.
ದತ್ತೇಶ್ ಅವರು ತಮಗೆ ಸನ್ಮಾನ ಮಾಡುವ ಬದಲು ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಿಸಿ ಎಂದು ಹೇಳಿರುವುದು ಅವರ ಔದಾರ್ಯ, ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಡಾ.ಎಸ್.ಬಿ.ಅಪ್ಪಾಜಿಗೌಡ, ಮೈಸೂರು ಡಿಡಿಪಿಐ ಎಸ್.ಟಿ. ಜವರೇಗೌಡ. ಮೈಸೂರು ತಾ.ಬಿಇಒ ಎಂ.ವಿವೇಕಾನಂದ- ಶಿಕ್ಷಣ, ಮಹದೇಶ್ವರ ಬೆಟ್ಟ ಪ್ರಾಧಿಕಾರದ ಇಒ ಎ.ಇ. ರಘು, ವಾಣಿಜ್ಯತೆರಿಗೆ ಸಹಾಯಕ ಆಯುಕ್ತ ಎಂ. ಶಿವಣ್ಣ- ಆಡಳಿತ, ಪ್ರಾಧ್ಯಾಪಕರಾದ ಸಿ.ಎಸ್. ವೀರಭದ್ರಸ್ವಾಮಿ- ಭಾಷೆ ಕಲಿಕೆ, ಡಾ.ಸಿ.ಡಿ. ಪರಶುರಾಮ, ಯುವ ಸಾಹಿತಿ ಸ್ವಾಮಿ ಪೆÇನ್ನಾಚಿ- ಸಾಹಿತ್ಯ, ಡಾ.ಪಿ. ಮಣಿ- ಭಾಷಾಂತರ, ನಂಜನಗುಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಬಿ. ಜಗದೀಶ್- ಅರ್ಥಶಾಸ್ತ್ರ, ಖ್ಯಾತ ನೃತ್ಯಗಾರ್ತಿ ಕೆ. ಉಮಾ ಮಹೇಶ್ವರಿ- ನೃತ್ಯ, ಶಾಂತಾ ರಾಮಕೃಷ್ಣ- ಸಂಘಟನೆ ಅವರಿಗೆ ಮಾನಸ ಶ್ರೀ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪ್ರದಾನ ಮಾಡಿದರು.
ಜನಪರ ಸಾಹಿತ್ಯ ಪರಿಷತ್ಚಿನ ರಾಜ್ಯಾಧ್ಯಕ್ಷ ಡಾ.ಎಂ. ಮಹೇಶ್ ಚಿಕ್ಕಲ್ಲೂರು- ಪ್ರಾಸ್ತಾವಿಕ, ಎಸ್. ರಾಮನಾಥ ರಂಗಾಯಣ- ಆಶಯ ಭಾಷಣ ಮಾಡಿದರು. ಜನಪರ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಡಾ.ಡಿ. ರವಿ, ಪ್ರಧಾನ ಕಾರ್ಯದರ್ಶಿ ಸಿ. ವೆಂಕಟೇಶ್ ಕಬ್ಬಾಳ್ ಮುಖ್ಯ ಅತಿಥಿಗಳಾಗಿದ್ದರು. ಗೌರವ ಸಲಹೆಗಾರ ಡಾ.ಆರ್. ನಾಗಭೂಷಣ್ ಕಾರ್ಯಕ್ರಮ ನಿರೂಪಿಸಿದರು. ಡಾ.ಹರದನಹಳ್ಳಿ ನಂಜುಂಡಸ್ವಾಮಿ ಸ್ವಾಗತಿಸಿದರು. ಜನಪದ ಕೈಲಾಸಮೂರ್ತಿ, ಟಿ.ಎಸ್. ಪುಟ್ಟರಾಜು ಗಾಯನ ನಡೆಸಿಕೊಟ್ಟರು. ಡಾ.ವಿ.ಯೋಗೀಂದ್ರ ವಂದಿಸಿದರು.