ಕಾಮಗಾರಿ ಜಾಣ ಕುರುಡು ತೋರುತ್ತಿರುವ ನಗರಸಭೆ ಅಂಧಾಧಿಕಾರಿಗಳು
ಸಂಜೆವಾಣಿ ವಾರ್ತೆ
ಹನೂರು.ಆ.17:- ಚಾಮರಾಜನಗರಕ್ಕೆ ಶಾಪಗ್ರಸ್ತ ಜಿಲ್ಲೆ ಹಣೆಪಟ್ಟಿ ಅಂಟಿರುವುದು ಭಾಗಶಃ ಪಟ್ಟಣದ ಅಭಿವೃದ್ಧಿ ಹೊಂದುತ್ತಿರುವ ವೇಗವನ್ನು ನೋಡಿ ಎಂದಾದರೆ ತಪ್ಪಾಗಲಾರದು.
ಪಟ್ಟಣದ ಮೂಲ ಆಡಳಿತ ಯಂತ್ರವಾದ ನಗರಸಭೆಯ ಆಮೆಗತಿಯ ಕಾರ್ಯ ವೈಖರಿ ನಗರದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ.
ನಗರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರ ಆಯ್ಕೆ ಆಗದೆ ಆಡಳಿತಾಧಿಕಾರಿಗಳ ಹಾಗೂ ಪೌರಾಯುಕ್ತರ ಹಿಡಿತದಲ್ಲಿ ಅಭಿವೃದ್ಧಿಯ ರೈಲು ಹಳಿ ತಪ್ಪಿದೆ.
ನಗರಸಭೆಗೆ ನಗರೋತ್ಥಾನ ಕಾಮಗಾರಿಗಳು ನಿರ್ಗಮಿತ ಅಧ್ಯಕ್ಷರಾದ ಆಶಾರವರ ಅಧಿಕಾರಾವಧಿಯಲ್ಲಿ ಕ್ರಿಯಾ ಯೋಜನೆ ತಯಾರಾಗಿ 31 ವಾರ್ಡ್ ಗಳ ಸಮಗ್ರ ಅಭಿವೃದ್ಧಿಗಾಗಿ 30 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಕಾಮಗಾರಿಗಳ ಅನುಮೋದನೆ ನೀಡಿತು.
ಸದರಿ ಅಧ್ಯಕ್ಷರು ಅಧಕಾರಾವಧಿ ಮುಗಿಸಿ 15 ತಿಂಗಳಾದರೂ ಸಹ ಕಾಮಗಾರಿಗಳು ಕೇವಲ ಒಂದೆರಡು ವಾರ್ಡ್ ಗಳಲ್ಲಿ ಮಾತ್ರ ಪೂರ್ಣಗೊಂಡಿದೆ. ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದರೂ ಸಹ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ವಾಸವಿದ್ದರೂ ಕೂಡ ಖುದ್ದು ಜಿಲ್ಲಾಧಿಕಾರಿ ನಿವಾಸದೆದುರಿನ ಎರಡು ರಸ್ತೆಗಳು ಹಾಗೂ ನ್ಯಾಯಾಧೀಶರ ನಿವಾಸದ ರಸ್ತೆಗಳು ಡಾಂಬರು ಕಾಣದಿರುವುದು ವಿಪರ್ಯಾಸವೆ ಸರಿ.
ಹಾಗಾದರೆ ನಗರಕ್ಕೆ ಮುಖ್ಯಮಂತ್ರಿಗಳ ಆಗಮನಕ್ಕೆ ಮಾತ್ರ ಸೀಮಿತವಾಗಿರುವ ಡಾಂಬರು ಹಾಕುವ ಯಂತ್ರಗಳಿಗೆ ಪಟ್ಟಣದ ಅಭಿವೃದ್ಧಿಗೆ ಬಾರದಿರಲು ಕಾರಣವಾದರೂ ಏನು…..? ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ವಾಸಿಸುತ್ತಿರುವ ಈ ಪ್ರದೇಶಗಳಲ್ಲಿ ಕಾರ್ಯ ಸಾಧಿಸದ ಸ್ಥಳೀಯ ಆಡಳಿತ ದೀನದಲಿತರ , ಹಿಂದುಳಿದ ವರ್ಗಗಳ ವಾರ್ಡ್ ಗಳಲ್ಲಿ ಯಾವ ಪರಿ ಅಭಿವೃದ್ಧಿ ಮಾಡುವರು… ? ಇದು ಇವರ ಜಡ್ಡುಗಟ್ಟಿದ ಆಡಳಿತಕ್ಕೆ ಹಿಡಿದ ಸ್ಪಷ್ಟ ಕೈಗನ್ನಡಿ.
ನಿಜಕ್ಕೂ ಪಟ್ಟಣಕ್ಕೆ ಹಿಡಿದ ಗ್ರಹಣ ಆಡಳಿತ ಯಂತ್ರದ್ದೆ ಹೊರತು.,ಜಾನಪದ ಕಲೆಗಳ ತವರೂರಾದ ಮಹದೇಶ್ವರರಂತಹ ಪವಾಡ ಪುರುಷರ ಈ ನಾಡಿಗೆ ಅಧಿಕಾರಿಗಳ ಮನೋಬಲ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ನಗರಕ್ಕೆ ಶಾಪಗ್ರಸ್ತ ಜಿಲ್ಲೆಯ ಕಳಂಕ ಅಂಟಿಕೊಂಡಿದೆ.
ನಗರದ ಮಹದೇಶ್ವರ ಕಾಲೋನಿ ರಸ್ತೆ ,ಅಂಬೇಡ್ಕರ್ ಭವನದಿಂದ ಕರಿನಂಜನಪುರ ರಸ್ತೆ ,ನ್ಯಾಯಾಲಯದ ಮುಂಭಾಗದ ರಸ್ತೆ, ಬುದ್ದ ನಗರದ ಕೆಲವು ರಸ್ತೆಗಳು ಮತ್ತು ಇನ್ನಿತರ ಹಲವು ಬಡಾವಣೆಗಳ ರಸ್ತೆಗಳು ಇನ್ನೂ ಸಹ ನಿರ್ಮಾಣವಾಗದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಹಾಗಾದರೆ ಹೆಸರು ಸೂಚಿಸುವಂತೆ ನಗರೋತ್ಥಾನದ ಅವನತಿಗೆ ಕಾರಣಕರ್ತರಾರು ಜಿಲ್ಲಾಡಳಿತ ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳಲು ಹಿಂಜರಿಯುತ್ತಿರುವುದೇಕೆ…?
ಅನ್ಯ ಇಲಾಖೆಯ ಪೌರಾಯುಕ್ತರ ಆಡಳಿತ ವೈಖರಿ ಬಗ್ಗೆ ತಿಳಿದಿದ್ದೂ ಸಹ ಸ್ಥಳೀಯ ಶಾಸಕರು ನಗರದ ಅಭಿವೃದ್ಧಿಯ ಕಡೆಗಣಿಸಿ ಕೊಳ್ಳೇಗಾಲದ ಶಾಸಕರಂತೆ ಓರ್ವ ಕೆ.ಎಂ.ಎಸ್ ಅಧಿಕಾರಿಯನ್ನು ನೇಮಿಸಲು ಸಾಧ್ಯವಾಗದೆ ಇರುವುದು ಝಣ ಝಣ ಕಾಂಚಾಣದ ಮಹಿಮೆ ಅಲ್ಲದೆ ಏನನ್ನಬಹುದು.
ಜಿಲ್ಲಾ ಉಸ್ತುವಾರಿ ಸಚಿವರಿಗಾಗಲಿ , ಸ್ಥಳೀಯ ಸಂಸದರಿಗಾಗಲಿ , ಪೌರಾಡಳಿತ ಸಚಿವರಿಗಾಗಲಿ ಕಳೆದೆರಡು ವರ್ಷಗಳಿಂದ ಚಾಮರಾಜನಗರ ನಗರಸಭೆಗೆ ಖಾಯಂ ಪೌರಾಯುಕ್ತರ ಇಲ್ಲದಿರುವುದು ತಿಳಿದಿಲ್ಲವೆ,ಅಥವಾ ಈ ಭ್ರಷ್ಟ ಕೂಟಕ್ಕೆ ಇವರೂ ಸಹ ಕುರುಡು ಕಾಂಚಾಣದ ನೃತ್ಯಕ್ಕೆ ಮಣಿದಿರುವರೆ..?
ಇನ್ನಾದರು ಜನಪ್ರತಿನಿಧಿಗಳು ಎಚ್ಚೆತ್ತು ಚಾಮರಾಜನಗರಕ್ಕೆ ಅಂಟಿರುವ ಕಳಂಕವನ್ನು ತೊಡೆದು ಹಾಕಿ. ಅಧಿಕಾರಿಗಳ ಅಂಧ ದರ್ಬಾರ್ ಅನ್ನು ಕೊನೆಗಾಣಿಸಿ.