ಮನೆ ಬೀಗ ಮುರಿದು 3.55 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ನಗದು ಹಣ ಕಳವು
ಕಲಬುರಗಿ,ಆ.16-ಮನೆ ಬೀಗ ಮುರಿದು 3.55 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ನಗದು ಹಣ ಕಳವು ಮಾಡಿರುವ ಘಟನೆ ದೇವಾ ನಗರದ ಓಂಕಾರ್ ರೆಸಿಡೆನ್ಸಿಯಲ್ಲಿ ನಡೆದಿದೆ.
ಮಲ್ಲಿಕಾರ್ಜುನ ಉಡಗಿ ಎಂಬುವವರ ಮನೆ ಬೀಗ ಮುರಿದು 60 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ನಾಣ್ಯ, 1.50 ಲಕ್ಷ ರೂ.ಮೌಲ್ಯದ 5 ಗ್ರಾಂ.ಬಂಗಾರದ 6 ಸುತ್ತುಂಗರ, 30 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಚೈನ್, 25 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಉಂಗುರ, 90 ಸಾವಿರ ರೂ.ನಗದು ಸೇರಿ 3.55 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಲಾಗಿದೆ.
ಇವರು ಮನೆಗೆ ಬೀಗ ಹಾಕಿಕೊಂಡು ಪತ್ನಿ ಜೊತೆಗೆ ಮಹಾರಾಷ್ಟ್ರದ ಪುನಾ ನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿನ ಸೀಮಂತ ಕಾರ್ಯಕ್ರಮಕ್ಕೆ ಹೋದ ವೇಳೆ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಮಲ್ಲಿಕಾರ್ಜುನ ಉಡಗಿ ಅವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.