ಸ್ವಾತಂತ್ರ್ಯದ ನಂದಾದೀಪ ವಿಶ್ವರೂಪ ತಾಳಲಿ: ಹಾರಕೂಡ ಶ್ರೀ
ಬೀದರ್: ಆ.16:ಭಾರತ ಪ್ರಣತಿಯಲ್ಲಿ ಅಪ್ಪಟ ರಾಷ್ಟ್ರಪ್ರೇಮದ ತೈಲ ಸುರಿಯುತ್ತಾ ಸ್ವಾತಂತ್ರ್ಯದ ನಂದಾದೀಪ ವಿಶ್ವರೂಪವಾಗಿ ಸದಾ ಬೆಳಗುವಂತೆ ಸರ್ವರೂ ಪ್ರಯತ್ನ ಶೀಲರಾಗಬೇಕಿರುವುದು ಅತ್ಯಂತ ಅವಶ್ಯವಾಗಿದೆ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು. ತಾಲೂಕಿನ ಹಾರಕೂಡ ಸಂಸ್ಥಾನ ಸಂಚಾಲಿತ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಆಯೋಜಿಸಿದ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಅಸಂಖ್ಯಾತ ರಾಷ್ಟ್ರಭಕ್ತರ ತ್ಯಾಗ ಮತ್ತು ಬಲಿದಾನಗಳಿಂದ ದೀರ್ಘಕಾಲದ ನಿರಂತರ ಹೋರಾಟದಿಂದ ಗಾಂಧೀಜಿರವರ ಸತ್ಯ, ಅಹಿಂಸೆ, ಸತ್ಯಾಗ್ರಹ ಹೀಗೆ ವಿಭಿನ್ನ ತರಹದ ಯಜ್ಞೋಪಾದಿಯ ಹೋರಾಟದಿಂದ ದೊರೆತ ಸ್ವತಂತ್ರ್ಯದ ರಥ ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಪ್ರತಿ ನಾಗರಿಕನು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ.
ಸ್ವಾತಂತ್ರ್ಯವೆಂಬುದು ಪ್ರತಿ ಭಾರತೀಯನ ಆತ್ಮ ವಿದ್ದಂತೆ, ಹೃದಯದ ಪ್ರತಿ ಬಡಿತವು ದೇಶಕ್ಕಾಗಿ ಮಿಡಿಯಬೇಕು.
ನಮ್ಮ ರಾಷ್ಟ್ರ ನಾಯಕರ ಆದರ್ಶ ಪರಂಪರೆಯಲ್ಲಿ ಮುನ್ನಡೆಯಬೇಕು.
ದೇಶದ ಅಖಂಡತೆ, ಐಕ್ಯತೆ, ಹಾಗೂ ಸಮಗ್ರ ಪ್ರಗತಿಯಲ್ಲಿ ತರುಣರು ತಮ್ಮನ್ನು ರಚನಾತ್ಮಕವಾಗಿ ತೊಡಗಿಸಿಕೊಳ್ಳಬೇಕು.
ನಮ್ಮ ಉನ್ನತ ರಾಷ್ಟ್ರೀಯ ಮೌಲ್ಯಗಳ ಭೂಮಿಕೆಯ ಮೇಲೆ ಇಂದಿನ ಯುವಕರು ತಮ್ಮ ಭವ್ಯ ಬದುಕನ್ನು ರೂಪಿಸಿಕೊಂಡು ದೇಶದ ದಿವ್ಯತೆಯ ಸಾಧನೆಗಾಗಿ ಪ್ರಾಮಾಣಿಕ ಶ್ರಮ ಹರಿಸಬೇಕು.
ಬಾನೆತ್ತರದಲ್ಲಿ ಹಾರಾಡುವ ನಮ್ಮ ತಿರಂಗಾದ ಅಡಿಯಲ್ಲಿ ನಾವೆಲ್ಲರೂ ಒಂದು ಎಂಬ ಸಹೋದರ ಭಾವ ತಳೆದು ದೇಶದ ಒಳತಿನಲ್ಲಿ ನಮ್ಮ ಒಳಿತು ಎಂಬ ಧೋರಣೆ ನಮ್ಮದಾಗಲಿ, ಸರ್ವರಿಗೂ ಭಾರತಮಾತೆ ಸೌಖ್ಯ ನೀಡಲಿ ಎಂದು ಶುಭ ಹಾರೈಸಿದರು.
ಶಿವಶರಣಯ್ಯ ಕಂಬಳಿಮಠ, ವಿಜಯಕುಮಾರ ಸಂಗೋಳಗೆ, ಪಂಡಿತರಾವ ದೇಗಾಂವ, ಬಸವಣ್ಣಪ್ಪ ಗಿಲಕಿ, ಡಾ. ರಾಜಶೇಖರ ಮದರಿ, ಹೂಗಾರ ಸಮಾಜದ ಅಧ್ಯಕ್ಷ ವಿಠ್ಠಲ ಹೂಗಾರ ಶಾಲೆಯ ಆಡಳಿತ ಅಧಿಕಾರಿ ಐ.ಜಿ, ಮಠಪತಿ, ಪಂಡಿತ ಪೂಜಾರಿ, ಪರಮೇಶ್ವರ ಹೊಳಕುಂದೆ, ಅಲ್ಲಮಪ್ರಭು ಹಿರೇಮಠ, ಸುಭಾಸ ರೆಡ್ಡಿ ಎದಲೆ, ಕಮಲಾಕರ ಧನ್ನುರೆ, ಪಂಡಿತ ಬಿರಾದಾರ, ಪ್ರಹ್ಲಾದ್ ಚೌವ್ಹಾಣ, ಶೋಭಾ ಟೊಣಪೆ, ಶಿವಾನಂದ ತಡಕಲ್, ಭೀಮಶ ಜೋಜನ, ಮಂಜುಳಾ ಹರಕೆ, ಲಲಿತಾ ಬೊಂಬಲೆ, ಸುರೇಖಾ ಜಮಾದಾರ, ಜ್ಯೋತಿ ಕೆರಗೋಟೆ, ಅಂಜನಾ ಜಮಾದಾರ, ಭವಾನಿ ಬೊಂಬಲೆ, ಭಾಗ್ಯಶ್ರೀ ಉಪಾರ, ಪವಿತ್ರಾ ಘಾಳೆ, ದಾನಮ್ಮ ಜೋಜನ ಮುಂತಾದವರು ಉಪಸ್ಥಿತರಿದ್ದರು.
ಪಂಡಿತ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು,
ಕಾರ್ತಿಕ ಸ್ವಾಮಿ ಯಲದಗುಂಡಿ ಮತ್ತು ಶರಣಪ್ಪ ಸುಂಠಾಣ ಸಂಗೀತ ಸೇವೆ ಸಲ್ಲಿಸಿದರು.
ಶ್ರೀ ಗುರುಲಿಂಗ ಶಿವಾಚಾರ್ಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳು ಭಾಷಣ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಶಿವಾನಂದ ಪೂಜಾರಿ ವಂದಿಸಿದರು.