ಹಿಂಸಾ ಪ್ರವೃತ್ತಿಯವರು ಕವಿಗಳಾಗಲು ಸಾಧ್ಯವಿಲ್ಲ : ಪ್ರೊ.ಮಾಸಿಮಾಡೆ
ಬೀದರ: ಆ.16 : ಭಾರತ ಹಿಂದೆಂದಿಗಿಂತಲೂ ಬಹಳಷ್ಟು ಬದಲಾವಣೆಯನ್ನು ಕಂಡಿದೆ, ಕವಿಯ ಒಳಮನಸ್ಸು ಎಲ್ಲವನ್ನು ಚಂದಗೊಳ್ಳಲು ಬಯಸುತ್ತದೆ, ಯಾವುದು ಮನುಷ್ಯನಿಗೆ ಹಿತವನ್ನು ನೀಡುತ್ತದೋ ಅದೇ ನಿಜವಾದ ಸಾಹಿತ್ಯ. ಕಾವ್ಯಕ್ಕೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ. ಹೀಗಾಗಿ ವಿಧ್ವಂಸಕ ಕೃತ್ಯ ಮಾಡುವವರು, ಹಿಂಸಾಪ್ರವೃತ್ತಿಯವರು ಕವಿಗಳಾಗಲು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಪ್ರೊ.ಸಿದ್ರಾಮಪ್ಪ ಮಾಸಿಮಾಡೆಯವರು ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಬಹುಭಾಷಾ ಕವಿಗೋಷ್ಟಿ ಹಾಗೂ ಗೀತ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು ಕಾವ್ಯ ಮನುಷ್ಯನನ್ನು ಎತ್ತರಕ್ಕೆ ಬೆಳೆಸುತ್ತದೆ, ಸಾಹಿತ್ಯವು ಸರಳವಾಗಿ ವಿವರಣೆಗೆ ಸಿಗುವಂತಹದ್ದಲ್ಲ, ಯುದ್ಧ ನಿಲ್ಲಿಸುವ ಶಕ್ತಿಯೂ ಕಾವ್ಯಕ್ಕಿದೆ. ಕಾವ್ಯವು ಪ್ರತಿ ಜೀವಿಯೂ ಬದುಕಲಿ ಎಂದು ಆಶಿಸುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ.ಸಿದ್ದು ಯಾಪಲಪರವಿ ಅವರು ಮನುಷ್ಯನ ಸ್ವಭಾವವು ಆಯಾಯ ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ ಆಗುತ್ತದೆ. ಎಲ್ಲ ಭಾಷೆಯಲ್ಲಿ ಸಾಹಿತ್ಯದ ಉಗಮ ಕಾವ್ಯದಿಂದಲೇ ಆಗುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಗೆ ಒಂದು ಪರಂಪರೆ ಇದೆ. ಆದರೆ ಗುಣಮಟ್ಟದ ಬಗ್ಗೆ ತಕರಾರುಗಳಿವೆ. ಕಾವ್ಯದ ಸಂದರ್ಭದಲ್ಲಿ ನಿರಂತರ ಕೃಷಿ ನಡೆಯಬೇಕು. ಉರ್ದುವಿನಿಂದ ಬಂದ ಗಜಲ್ ಪ್ರಭಾವ ಕನ್ನಡದ ಮೇಲೂ ಆಯಿತು. ನಮ್ಮ ಭಾಗದಲ್ಲಿನ ಸಾಹಿತ್ಯದ ಮೇಲೆ ವಚನಗಳ ಪ್ರಭಾವ ಜಾಸ್ತಿಯಾಗಿದೆ. ಅಕ್ಕನ ವಚನಗಳಲ್ಲಿ ಕಾವ್ಯಾತ್ಮಕ ಗುಣಗಳಿವೆ. ಬಸವಣ್ಣನವರು ಸರಳವಾಗಿ ವಚನಗಳನ್ನು ಬರೆದರೆ ಅಲ್ಲಮಪ್ರಭು ಗಂಭೀರಾರ್ಥಗಳಲ್ಲಿ ಬರೆದರು, ಸಾಹಿತ್ಯ ಮತ್ತು ಸಂಗೀತಕ್ಕೆ ನಮ್ಮನ್ನು ಕ್ರಿಯಾಶೀಲಗೊಳಿಸುವ ಶಕ್ತಿ ಇದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪಾರ್ವತಿ ಸೋನಾರೆಯವರು ಮಾತನಾಡಿ, ಬೀದರ ಜಿಲ್ಲೆ ಬಹುಭಾಷಿಕರು ವಾಸಿಸುವ ಜನ, ಬಹುಸಂಸ್ಕ್ರತಿಯ ಜನ. ಜಗತ್ತಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳು ಮನಕಲುಕುತ್ತಿವೆ. ಸಾಹಿತ್ಯ ಕ್ಷೇತ್ರವೂ ಇಂತಹ ಹೇಯ ಕೃತ್ಯಗಳಿಗೆ ತನ್ನ ಸ್ಪಂದನೆ ನೀಡಬೇಕು ಎಂದರು.
ಆಶಯ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿಯವರು ಕನ್ನಡ ಕಾರ್ಯಕ್ರಮಗಳಿಗಾಗಿ ಕನ್ನಡ ಭವನವನ್ನು ಜಿಲ್ಲೆಯ ಸಂಘ-ಸಂಸ್ಥೆಗಳವರು ಬಳಸಿಕೊಳ್ಳಬಹುದು, ಕನ್ನಡಿಗರ ಬಹುದಿನಗಳ ಕನಸಾದ ಕನ್ನಡ ಭವನದಲ್ಲಿ ಇನ್ನು ಮುಂದೆ ನಿರಂತರವಾಗಿ ಕನ್ನಡ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದೆಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪರಮೇಶ್ವರ ಬಿರಾದಾರ ಮತ್ತು ಭಾರತೀಯ ಶಿಕ್ಷಣ ಮಂಡಲದ ಅಧ್ಯಕ್ಷರಾಗಿ ಆಯ್ಕೆಯಾದ ಸಂತೋಷಕುಮಾರ ಮಂಗಳೂರೆ ಅವರನ್ನು ಗೌರವಿಸಲಾಯಿತು.
ಶ್ರೀಮತಿ ರೇಖಾ ಅಪ್ಪಾರಾವ ಸೌದಿಯವರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಆರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿ ಗೌರವ ಕಾರ್ಯದರ್ಶಿ ಪ್ರೊ.ಶಿವಕುಮಾರ ಕಟ್ಟೆ ಅವರು ಸರ್ವರನ್ನು ಸ್ವಾಗತಿಸಿದರು. ಮಹಿಳಾ ಪ್ರತಿನಿಧಿ ಜಯದೇವಿ ಯದಲಾಪುರೆ ನಿರೂಪಿಸಿದರೆ ತಾಲೂಕು ಕಸಾಪ ಗೌ.ಕಾರ್ಯದರ್ಶಿ ಸಿದ್ಧಾರೂಢ ಭಾಲ್ಕೆ ವಂದಿಸಿದರು.
ಕವಿಗೋಷ್ಠಿ :
ನಂತರ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಪ್ರೊ.ಸಿದ್ದು ಯಾಪಲಪರವಿ, ಪಾರ್ವತಿ ವಿ.ಸೋನಾರೆ, ಮಾಣಿಕ ನೇಳಗೆ (ಕಾಲಿಕ್ಕಿದೆ ಸ್ವಾತಂತ್ರ್ಯ), ರೆಹಮತ್ ಉಲ್ಲಾ ರಹಮತ್ (ಉರ್ದು : ಸುಫನ್ ಕಿ ಮಿಟ್ಟಿ), ಪ್ರೊ. ಮಾರುತಿ ಭೀಮಣ್ಣ (ಹಿಂದಿ : ಭಾರತ ಕಾ ಭವ್ಯ ಇತಿಹಾಸ), ಸಂಗಮೇಶ ಜಾಂತೆ ( ನಾನು ಸ್ವಾಭಿಮಾನಿ), ಮೊಹ್ಮದ್ ಯೂಸುಫ್ ರಹೀಮ್ (ಉರ್ದು :ಹಮೀಸೆ ಹೈ ಆಜಾದಿ), ಎಸ್.ಎಸ್.ಹೊಡಮನಿ (ನೇಸರ), ವೀರಶೆಟ್ಟಿ ಚೌಕನಪಳ್ಳಿ (ಸ್ವಾತಂತ್ರ್ಯ), ರವಿ ಕಾಂಬಳೆ (ಮರಾಠಿ: ಸರ್ವಶ್ರೇಷ್ಠ ವಿದ್ಯಾದಾನ), ಶಿವಕುಮಾರ ಕಟ್ಟೆ (ಕಾವ್ಯ-ಕನಸು), ಎಂ.ಎಸ್.ಮನೋಹರ (ಕೋಮು ಸೌಹಾರ್ದತೆ), ಮಹಾನಂದ ಪಾಟೀಲ (ಜನಗಣಮನ), ಜಯದೇವಿ ಯದಲಾಪುರೆ (ಅವನು ಅವಳಾದಳು) ಮುಂತಾದವರು ಕವನ ವಾಚನ ಮಾಡಿದರು.