ಸ್ವಾತಂತ್ರ್ಯ ಹೋರಾಟಗಾರರು ದೇಶದ ಆಸ್ತಿ: ಸಚಿವ ಎಂ.ಬಿ. ಪಾಟೀಲ
ವಿಜಯಪುರ,ಆ.16: ಸ್ವಾತಂತ್ರ್ಯ ಹೋರಾಟಗಾರರು ದೇಶದ ಆಸ್ತಿ. ಅವರನ್ನು ಯಾವುದೇ ಜಾತಿ ಮತ್ತು ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಗುರುವಾರ ಬಬಲೇಶ್ವರ ತಾಲೂಕಿನ ದದಾಮಟ್ಟಿಯಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೊಳ್ಳಿ ರಾಯಣ್ಣ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ಸಂಸ್ಥಾನ ಉಳಿವಿಗಾಗಿ ರಾಣಿ ಚನ್ನಮ್ಮರ ಜೊತೆ ಹೋರಾಟ ಮಾಡಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಬಹಳಷ್ಟಿದೆ. ಸ್ವಾತಂತ್ರ್ಯ ದಿನಾಚರಣೆ ದಿನದಂದೇ ರಾಯಣ್ಣರ ಜನ್ಮದಿನ ಇರುವುದು ಅರ್ಥಪೂರ್ಣವಾಗಿದೆ. ಕಿತ್ತೂರು ರಾಣಿಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರು ದೇಶದ ಆಸ್ತಿಯಾಗಿದ್ದಾರೆ. ಅವರ ಸೇವೆ ಸದಾ ಸ್ಮರಣೀಯವಾಗಿದೆ ಎಂದು ಅವರು ಹೇಳಿದರು.
ಜುಮನಾಳ, ತೊನಶ್ಯಾಳ, ಹೊನಗನಹಳ್ಳಿ ಭಾಗಕ್ಕೆ ಶ್ರೀ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಯಡಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಈ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಯೋಜನೆಯಿಂದ ಈ ಭಾಗದಲ್ಲಿ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಸಚಿವರು ಹೇಳಿದರು.
ದದಾಮಟ್ಟಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿμÁ್ಠಪನೆಗೆ ಭೂಮಿದಾನ ಮಾಡಿದ ಗೌರವ್ವ ಮುಕಾರ್ತಿಹಾಳ ಅವರ ಜನಪರ ಕಾಳಜಿಯನ್ನು ಎಂ. ಬಿ. ಪಾಟೀಲ ಅವರು ಶ್ಲಾಘಿಸಿದರು.
ಇದೇ ವೇಳೆ, ಸಚಿವರು ಸನ್ಮಾನಕ್ಕೆ ಹಾರ, ಶಾಲು, ತುರಾಯಿ ಬೇಡ ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಸಂಘಟಕರು ಸನ್ಮಾನಕ್ಕೆ ಬಳಸುವ ರೂ.5000 ಹಣವನ್ನು ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ನೋಟ್ ಬುಕ್ ಖರೀದಿಗೆ ದೇಣಿಗೆಯಾಗಿ ನೀಡುವ ಮೂಲಕ ಗಮನ ಸೆಳೆದರು.
ಈ ಸಂದರ್ಭದಲ್ಲಿ ಹನಮಂತ ಪೂಜಾರಿ, ಶಿವಪಟ್ಟ ಕಾಳಗಿ, ಮಡಿವಾಳಯ್ಯ ಸ್ವಾಮಿ, ರವಿಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.
ಮುಖಂಡರಾದ ಸದಾಶಿವ ಚಿಕರೆಡ್ಡಿ, ಸೋಮನಾಥ ಕಳ್ಳಿಮನಿ, ವಿ.ಎಸ್. ಪಾಟೀಲ, ರಾಜು ದೇಸಾಯಿ, ಸುಭಾಸ ಅಸ್ಕಿ, ಚಂದ್ರಾಮ ಫತ್ತೇಪೂರ, ಶ್ರೀಶೈಲ ಕಾಳಗಿ, ಮಹಾದೇವ ಗರಸಗಿ, ಕಟ್ಟೆಪ್ಪ ಕಣಬೂರ, ಭೀಮಣ್ಣ ಮುಕರ್ತಿಹಾಳ, ಪರಸಪ್ಪ ಕಾಳಗಿ, ಶಾಂತು ಕಾಳಗಿ, ಚಂದು ವಾಲಿ, ತಿಪ್ಪಣ್ಣ ಗುಗದಡ್ಡಿ ಮುಂತಾದವರು ಉಪಸ್ಥಿತರಿದ್ದರು.