ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸುಸ್ಥಿರ ಅಭಿವೃದ್ಧಿ ನೀತಿ ಪಾಲನೆ ಅಗತ್ಯ: ಪ್ರೊ. ತುಳಸಿಮಾಲ
ವಿಜಯಪುರ,ಆ.16: ದೇಶದ ಅಭಿವೃದ್ಧಿಯ ಗುರಿ ತಲುಪಲು ಶಿಕ್ಷಣ ಕ್ಷೇತ್ರದ ಪ್ರಗತಿ ಅನಿವಾರ್ಯ. ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಸುಸ್ಥಿರ ಅಭಿವೃದ್ಧಿ ನೀತಿಯನ್ನು ಪಾಲಿಸುವುದು ಅಗತ್ಯ ಎಂದು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆಡಳಿತ ಭವನದ ಸಭಾಂಗಣದಲ್ಲಿ 78ನೇ ಸ್ವಾತ್ರಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದೆಲ್ಲೆಡೆ 2047ರ ಭಾರತದ ಅಭಿವೃದ್ಧಿಯ ಮುನ್ನೋಟದ ಕುರಿತು ಚರ್ಚೆ ನಡೆಯುತ್ತಿದೆ. ಈ ಗುರಿಯನ್ನು ತಲುಪಬೇಕಾದರೆ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಯ ಅಗತ್ಯವಿದೆ. ಭಾರತದಲ್ಲಿ ಉನ್ನತ ಶಿಕ್ಷಣದ ದಾಖಲಾತಿ ಅನುಪಾತ ಕಡಿಮೆ ಇದೆ. ಈ ಅನುಪಾತವನ್ನು ಹೆಚ್ಚಿಸಲು ಕೌಶಲ ಆಧಾರಿತ ಹಾಗೂ ಉದ್ಯೋಗಾಧಾರಿತ ಪಠ್ಯಕ್ರಮಗಳನ್ನು ರಚಿಸಬೇಕಾಗಿದೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಹೇಳಿದರು.
ವಿಶ್ವದಲ್ಲೇ ಬೃಹತ್ ಶಿಕ್ಷಣ ವ್ಯವಸ್ಥೆ ನಮ್ಮ ಭಾರತದಲ್ಲಿದೆ. ಭಾರತದ ಸುಸ್ಥಿರ ಅಭಿವೃದ್ಧಿಗೆ ವಿಶ್ವವಿದ್ಯಾಲಯಗಳ ಪಾತ್ರ ಬಹುಮುಖ್ಯವಾಗಿದೆ. ಭಾರತದಲ್ಲಿ ಒಟ್ಟು ದಾಖಲಾತಿ ಅನುಪಾತ ಶೇ.28 ಇದ್ದು, ಇದನ್ನು ಹೆಚ್ಚಿಸುವ ಅನಿವಾರ್ಯತೆ ಇದೆ. ಈಗಾಗಲೇ ಭಾರತದಲ್ಲಿ 10114 ವಿಶ್ವವಿದ್ಯಾನಿಲಯಗಳಿವೆ. ಚೀನಾವನ್ನು ಹೊರತು ಪಡಿಸಿದರೆ ಭಾರತ ಅತಿ ಹೆಚ್ಚು ಶೈಕ್ಷಣಿಕ ದಾಖಲಾತಿ ಪ್ರವೇಶವನ್ನು ಪಡೆದುಕೊಂಡಿದೆ. ಒಟ್ಟು ದಾಖಲಾತಿ ಅನುಪಾತ ವಿಕಸಿತ ಭಾರತದ ಗುರಿಯಲ್ಲಿ ಶೇ.50ರಷ್ಟು ಮಾಡುವ ಯೋಜನೆಯನ್ನು ಹೊಂದಬೇಕಾಗಿದೆ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಮಾಣದ ಹೂಡಿಕೆ ಹಾಗೂ ಬಂಡವಾಳದ ಅವಶ್ಯಕತೆ ಇದೆ ಎಂದರು.
ವಿಶ್ವವಿದ್ಯಾನಿಲಯ ಹಾಗೂ ಮಹಾವಿದ್ಯಾನಿಲಯಗಳ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ಬಹುಶಿಸ್ತೀಯ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವು ಕೂಡ ಇದೆ. ಇದಲ್ಲದೆ ನುರಿತ ಬೋಧನಾ ಸಿಬ್ಬಂಧಿಗಳ ಅವಶ್ಯಕತೆ ಇದೆ. ಸಂಶೋಧನೆ ಹಾಗೂ ನಾವೀನ್ಯತೆಗೆ ದಕ್ಷಿಣ ಕೋರಿಯಾ ರಾಷ್ಟ್ರದಲ್ಲಿ ಶೇ. 41 ರಷ್ಟು ಹಣವನ್ನು ಹೂಡಿಕೆ ಮಾಡಲಾಗುತ್ತದೆ. ಭಾರತದಲ್ಲಿ ಇದೇ ಮಾದರಿಯ ಪದ್ಧತಿಯನ್ನು ಅಳವಡಿಸಿಕೊಂಡು ಇದಕ್ಕಾಗಿ ಹಣಕಾಸು ಸಚಿವಾಲಯ ಸಹಾಯ ಮಾಡಬೇಕಾಗಿದೆ. ಸಂಶೋಧನಾ ವಿಶ್ವವಿದ್ಯಾನಿಲಯಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಭಾರತೀಯ ಜ್ಞಾನಪರಂಪರೆ ಕ್ಷೇತ್ರದಲ್ಲಿ ಬಹುಶಿಸ್ತೀಯ ಅಧ್ಯಯನ ಮಾಡುವುದು ಅಗತ್ಯವಿದೆ ಎಂದರು.
ವೇದಿಕೆಯ ಮೇಲಿದ್ದ ಗಣ್ಯರು ಮಹಾತ್ಮ ಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಮಾರಂಭದಲ್ಲಿ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದ ಕುರಿತಾದ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಅಗಸ್ಟ್ ಕ್ರಾಂತಿ ಟ್ರಸ್ಟ್ ವತಿಯಿಂದ ವಿವಿಯ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಎನ್.ಎಸ್.ಎಸ್ ಕೋಶ ಹಮ್ಮಿಕೊಂಡಿದ್ದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ವಿತರಿಸಲಾಯಿತು.
ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ.ಚಂದ್ರಶೇಖರ್, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಸಕ್ಪಾಲ್ ಹೂವಣ್ಣ, ಮಹಿಳಾ ವಿವಿಯ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕೋತ್ತರ ವಿದ್ಯಾರ್ಥಿನಿಯರು, ಪದವಿ ವಿದ್ಯಾರ್ಥಿನಿಯರು ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರದರ್ಶಕ ಕಲೆ ಮತ್ತು ಸಂಗೀತ ವಿಭಾಗದ ವಿದ್ಯಾರ್ಥಿನಿಯರು ರಾಷ್ಟ್ರಗೀತೆ, ವಂದೇಮಾತರಂ ಗೀತೆ ಮತ್ತು ರಾಷ್ಟ್ರೀಯ ಭಾವೈಕ್ಯೆತೆಯ ಗೀತೆಗಳನ್ನು ಹಾಡಿದರು.