ದೇಶದ ನವಯುವಕರು ಸೈನ್ಯದಲ್ಲಿ ಸೇರಿಕೊಂಡು ದೇಶ ಸೇವೆ ಮಾಡಬೇಕು:ನರೇಂದ್ರಕುಮಾರ
ಬೀದರ:ಆ.16: ದೇಶದ ಯುವ ಜನತೆಯು ಸೈನ್ಯದಲ್ಲಿ ಸೇರಿಕೊಂಡು ದೇಶ ಸೇವೆ ಮಾಡುವುದಕ್ಕೆ ಪ್ರಥಮ ಆದ್ಯತೆ ನೀಡ ಬೇಕೆಂದು ಮಾಜಿ ಸೈನಿಕ ನರೇಂದ್ರಕುಮಾರ ಬಿಜಲೆಯವರು ಯುವಕರಿಗೆ ಕರೆ ನೀಡಿದರು.
ಬೀದರನ ಬಸವ ನಗರದಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟ ಹಾಗೂ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯಿಂದ ಏರ್ಪಡಿಸಿದ 78ನೇ ಸ್ವಾತಂತ್ರೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮುಂದುವರೆದು ಮಾತನಾಡುತ್ತಾ, ಭಾರತ ದಲ್ಲಿರುವ ಅಕ್ಕಪಕ್ಕದ ದೇಶಗಳ ಸೈನಿಕ ಶಕ್ತಿಯು ಹೆಚ್ಚುತ್ತಿದೆ. ಅದಕ್ಕೆ ಪ್ರತಿಯಾಗಿ ನಾವು ಕೂಡ ನಮ್ಮ ಸೈನ್ಯವನ್ನು ಸುಸ್ಥಿತಿಯಲ್ಲಿ ಇಡುವುದಕ್ಕಾಗಿ ಇಂದಿನ ನವಯುವಕರು ಹೆಚ್ಚಿನ ಪ್ರಮಾಣದಲ್ಲಿ ಸೈನ್ಯದಲ್ಲಿ ಸೇರಿ, ದೇಶ ಸೇವೆಯನ್ನು ಮಾಡಬೇಕೆಂದು ಅವರು ಆಗ್ರಹಿಸಿದ್ದರು. ತಾನು 22 ವರ್ಷಗಳ ಕಾಲ ಐಟಿಬಿಪಿಯಲ್ಲಿದ್ದುಕೊಂಡು, ಭಾರತ- ಚೀನಾ ಗಡಿ ಕಾಯುತ್ತಿ ದ್ದಾಗ, -20 ಡಿಗ್ರಿ ತಾಪಮಾನದಲ್ಲಿ ತಿಂಗಳುಗಟ್ಟಲೆ ಸ್ನಾನವಿಲ್ಲದೆ, ಸಿಕ್ಕಿದ್ದನ್ನುತಿಂದು, ಮಂಜುಗಡ್ಡೆ ಒಡೆದು ತಯಾರಿಸಲಾದ ನೀರನ್ನು ಕುಡಿದು, ದೇಶ ಸೇವೆ ಮಾಡಿರುವುದನ್ನು ನೆನಪಿಸಿದರು. ತಮ್ಮ ಜೊತೆ ಸೇವೆಯಲ್ಲಿರುವ 8-10 ಜನ ಸೈನಿಕರ ಸಹಪಾಟಿಗಳು ವೀರ ಮರಣ ಹೊಂದಿರುವುದರಿಂದ ಅವರ ಶೌರ್ಯ ತನವನ್ನು ಸ್ಮರಿಸಿದರು. 3 ವರ್ಷ ಜಮ್ಮು ಕಾಶ್ಮೀರ, 2 ವರ್ಷ್ ಛತ್ತಿಸಗಡ, ದೇಶ ಕಂಡ ಅಪ್ರತಿಮ ವಿಜ್ಞಾನಿ ಎ ಪಿ ಜೆ ಅಬ್ದುಲ್ ಕಲಾಂರವರ ಭದ್ರತಾ ಕವಚದಲ್ಲಿ ಸೇವೆ ಸಲ್ಲಿಸಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಿಗೆ ಗೌರವಿಸಿ ಸನ್ಮಾನಿಸಲಾಯಿತು. ಅಖಿಲ ಭಾರತ ವಿಶ್ವ ವಿದ್ಯಾಲಯಗಳ ನೌಕರರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾದ ವೀರಭದ್ರಪ್ಪ ರವರು ಮಾತನಾಡಿ, ತಮ್ಮ ಜೀವವನ್ನು ಪಣಕ್ಕಿಟ್ಟು, ದೇಶಕ್ಕಾಗಿ ಹೋರಾಡಿ ದೇಶದ ಗಡಿ ಭಾಗವನ್ನು ಸುರಕ್ಷಿತವಾಗಿಟ್ಟಿರುವ ನಮ್ಮ ಸೈನಿಕರಿಗೆ ಗೌರವ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ನಾಗರಿಕ ಸೇವೆಯಲ್ಲಿರುವರು ದೇಶ ಸೇವೆಯನ್ನು ಮಾಡುತ್ತಾರೆ. ಆದರೆ ಸೈನಿಕರು ಮಾಡುವ ಸೇವೆಯು ಅದಕ್ಕಿಂತ ಶ್ರೇಷ್ಠ ವಾಗಿದೆ ಎಂದು ಅವರು ನುಡಿದರು.
ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಅವರು ಮಾತನಾಡಿ, ದೇಶದ ವಿಷಯ ಬಂದಾಗ ಎಲ್ಲರೂ ಜಾತಿ, ಮತ, ಪಂಥಗ ಳೆನ್ನುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ,ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಮೂಡಿಸಿ, ದೇಶದ ಸುರಕ್ಷತೆ ಹಾಗೂ ಅಭಿವೃದ್ಧಿಯ ಬಗ್ಗೆ ಮಾತ್ರ ಚಿಂತಿಸಬೇಕೆಂದು ನುಡಿದರು. ನಿವೃತ್ತ ಶಿಕ್ಷಕಿ ಶ್ರೀಮತಿ ಮಂದಾಕಿನಿ ಉಪ್ಪಿನರವರು ಮಾತನಾಡಿ, ನನ್ನ ವಿದ್ಯಾರ್ಥಿಯಾಗಿ ನಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ನರೇಂದ್ರಕುಮಾರ ರವರು 22 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಸುರಕ್ಷಿತವಾಗಿ ತಮ್ಮ ಮನೆಗೆ ವಾಪಸು ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಶಿಕ್ಷಕಿ ಇಂದುಮತಿ, ಮಾಲಾಶ್ರೀ, ನಾಗರಾಜ, ಸಂತೋಷ, ಶಿವಾoಶ, ವಿಜಯ್, ಸತೀಶ ಮುಂತಾದವರು ಪಾಲ್ಗೊಂಡಿದ್ದರು.