ಸತ್ಕಾರ್ಯಗಳಿಗೆ ಒಳ್ಳೆಯ ಫಲ: ಹಾವಗಿಲಿಂಗೇಶ್ವರ ಶ್ರೀ
ಬೀದರ್: ಆ.16:ಜೀವನದಲ್ಲಿ ಸತ್ಕಾರ್ಯಗಳಿಗೆ ಒಳ್ಳೆಯ ಫಲ ಸಿಕ್ಕೇ ಸಿಗುತ್ತದೆ ಎಂದು ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.
ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಮಂಗಳವಾರ ನಡೆದ ಶ್ರಾವಣ ನಿಮಿತ್ತ ಹಮ್ಮಿಕೊಂಡ ‘ಶ್ರೀ ರೇಣುಕ ವಿಜಯ’ ಪ್ರವಚನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾಜದ ಉನ್ನತಿಯ ಕಾರ್ಯ ಹಾಗೂ ಪರರ ಮೊಗದಲ್ಲಿ ಮಂದಹಾಸ ಕಂಡು ಸಂತಸ ಪಡುವ ಉದಾರತೆ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬೇರೆಯವರಿಗೆ ಕೆಡಕು ಉಂಟು ಮಾಡುವ, ಬೆಳಗುವ ಜ್ಯೋತಿ ನಂದಿಸುವ, ಬೇರೆಯವರ ಅನ್ನದ ಮೇಲೆ ಕಲ್ಲು ಹಾಕುವ, ಮನೆ ಹಾಳು ಮಾಡುವ ಕೆಲಸ ಯಾವತ್ತೂ ಮಾಡಬಾರದು ಎಂದು ತಿಳಿಸಿದರು.
ದೇವರು ಕರುಣಿಸಿದ ಮಾನವ ಜನ್ಮ ಬಹಳ ಅಮೂಲ್ಯವಾಗಿದೆ. ಸತ್ಯ, ನ್ಯಾಯ, ನೀತಿ, ಧರ್ಮದ ಮಾರ್ಗದಲ್ಲಿ ನಡೆದು ಅದನ್ನು ಸಾರ್ಥಕ ಮಾಡಿಕೊಳ್ಳಬೇಕು. ಶ್ರಾವಣದಲ್ಲಿ ದಾನ, ಧರ್ಮ ಸೇರಿದಂತೆ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಮೂಲಕ ಪರಮಾತ್ಮನ ಒಲುಮೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸದಸ್ಯ ನಾಗೇಶ ಪ್ರಭಾ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನಿರಗುಡೆ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿಬಾಯಿ ಶಿವಪಾಲಸಿಂಗ್ ಠಾಕೂರ್ ಅಧ್ಯಕ್ಷತೆ ವಹಿಸಿದ್ದರು. ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ, ದಾಸೋಹಿ ಮಾಣಿಕ ಬಿರಾದಾರ, ಶಿಕ್ಷಕ ಮಾರುತಿ ಸರ್ ಇದ್ದರು. ಚೇತನ್ ನಿರೂಪಿಸಿದರು.