ಎಐಡಿಎಸ್‌ಓ ದಿಂದ ವಿದ್ಯಾರ್ಥಿಗಳ ಸಂಕಲ್ಪ ದಿನಾಚರಣೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಅ,16- ಎಐಡಿಎಸ್‌ಓ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ 77 ನೇ ಸ್ವಾತಂತ್ರ್ಯ ವರ್ಷಾಚಾರಣೆ‌ ಹಿನ್ನಲೆ  ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದು ಮಡಿದ ಎಲ್ಲಾ ಹುತಾತ್ಮರಿಗೆ ಗೌರವ ನಮನಗಳನ್ನು ಸಲ್ಲಿಸುತ್ತಾ, ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿಯವರ ಕನಸಿನ ಭಾರತವನ್ನು ನಿರ್ಮಿಸಲು ಇಂದು ವಿದ್ಯಾರ್ಥಿಗಳ ಸಂಕಲ್ಪ ದಿನವನ್ನು ಆಚರಿಸಲಾಯಿತು.
ಸ್ವಾತಂತ್ರ್ಯ ದೊರೆತು 77 ವರ್ಷಗಳು ಕಳೆದಿವೆ. ಈ ಅಭೂತಪೂರ್ವ ಹೋರಾಟದಲ್ಲಿ  ನವೋದಯದ ಹರಿಕಾರರಿಂದ ಹಿಡಿದು ಸಾವಿರಾರು ಮಹಾನ್ ಕ್ರಾಂತಿಕಾರಿಗಳು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಮುಡಿಪಿಟ್ಟಿದ್ದಾರೆ.
ವಿಶೇಷವಾಗಿ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮುಂತಾದವರು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಿ ಹೊಂದಿ, ಹಸಿವಿನಿಂದ ಯಾವುದೇ ಮಗು ಸಾಯದಿರುವ ದೇಶಕ್ಕಾಗಿ, ಪ್ರತಿಯೊಬ್ಬ ಮಹಿಳೆ ಸುರಕ್ಷಿತವಾಗಿರಲೆಂದು, ಪ್ರತಿಯೊಬ್ಬ ಯುವಕನಿಗೆ ಉದ್ಯೋಗ ಮತ್ತು ಸಮ ಸಮಾಜಕ್ಕಾಗಿ ಹೋರಾಡಿದರು – ಆದರೆ ಅವರ ಉದಾತ್ತ ಕನಸು ನನಸಾಗಿದೆಯೇ ಎಂದು ನಾವು ಪ್ರಶ್ನಿಸಬೇಕಾಗಿದೆ. ಮಹಿಳೆಯರ ಮೇಲಿನ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕೋಲ್ಕತ್ತಾದಲ್ಲಿ ವೈದ್ಯರ ಮೇಲೆ ನಡೆದ ಅತ್ಯಂತ ಘೋರ ಅಪರಾಧವನ್ನು ನಾವು ನೋಡಿದ್ದೇವೆ! ಶಿಕ್ಷಣವು ವ್ಯಾಪಾರದ ಸರಕಾಗಿ ಮಾರ್ಪಟ್ಟಿದೆ. ನಿರುದ್ಯೋಗ ಸಮಸ್ಯೆ ಉತ್ತುಂಗದಲ್ಲಿದೆ, ಜನರು ಹಸಿವಿನಿಂದ ಸಾಯುತ್ತಿದ್ದಾರೆ! ಈ ವ್ಯವಸ್ಥೆ ಹದಗೆಟ್ಟಿರುವುದರಿಂದ ಯುವಕರು ಮತ್ತು ವಿದ್ಯಾರ್ಥಿಗಳು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅಶ್ಲೀಲ ಸಿನಿಮಾ, ಸಾಹಿತ್ಯ ಎಲ್ಲೆಡೆ ಹರಡುತ್ತಿದೆ. ಇಂತಹ ಹಲವು ಸಮಸ್ಯೆಗಳಿಂದ ದೇಶ ನಲುಗಿ ಹೋಗುತ್ತಿದೆ. ಈ ದಿನ ಆಗಸ್ಟ್ 15 ರಂದು, ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಮಹಾನ್ ವ್ಯಕ್ತಿಗಳ ಮೌಲ್ಯಗಳು ಮತ್ತು ಆದರ್ಶಗಳನ್ನು ಬೆಳೆಸುವುದು ಪ್ರಸ್ತುತ ಸಾಂಸ್ಕೃತಿಕ ಅವನತಿಗೆ ಏಕೈಕ ಪರ್ಯಾಯವಾಗಿದೆ ಎಂದು ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯು ನಂಬುತ್ತದೆ. ಮತ್ತು ಈ ಮೂಲಕ ವಿದ್ಯಾರ್ಥಿ ಯುವಜನರಲ್ಲಿ  ಸ್ವಾತಂತ್ರ್ಯದ ನೈಜ ಅರ್ಥವನ್ನು ಪಸರಿಸಲು ಶ್ರಮಿಸುತ್ತಿದೆ.
ಈ‌ ಸಂದರ್ಭದಲ್ಲಿ ಈ ದೇಶದ ವಿದ್ಯಾರ್ಥಿಗಳಾದ ನಾವು, ಹಿಂದಿನ ಎಲ್ಲಾ ಮಹಾನ್ ವ್ಯಕ್ತಿಗಳನ್ನು ಸ್ಫೂರ್ತಿಯಿಂದ ಸ್ಮರಿಸುತ್ತೇವೆ. ವಿದ್ಯಾಸಾಗರರು ಎತ್ತಿಹಿಡಿದ ವೈಜ್ಞಾನಿಕ ಮನೋಧರ್ಮದೊಂದಿಗೆ, ಕೆಚ್ಚೆದೆಯ ಖುದೀರಾಂನ ಮನದಲ್ಲಿ ನೆನೆಯುತ್ತ, ನೊಂದವರಿಗೆ ಮಿಡಿಯುವ ಶರತ್ ಚಂದ್ರರ ಸಾಹಿತ್ಯದ ಶ್ರೇಷ್ಠ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತ, ತುಳಿತಕ್ಕೆ ಒಳಗಾದವರ ಬಗೆಗಿನ ಉದಾತ್ತ ಭಾವನೆಯನ್ನೇ ದೇಶಪ್ರೇಮ ಎಂದು ಬಣ್ಣಿಸಿದ ವಿವೇಕಾನಂದರನ್ನು ನೆನೆಯುತ್ತಾ, ನೇತಾಜಿಯವರ ಧರ್ಮನಿರಪೇಕ್ಷತೆಯೊಂದಿಗೆ, ಹುತಾತ್ಮಭಗತ್ ಸಿಂಗ್ ಮತ್ತು ಮುಂತಾದ ಕ್ರಾಂತಿಕಾರಿಗಳು ಕನಸುಕಂಡ ‘ಯಾವ ಕಂದನೂ ಹಸಿವೆಯಿಂದ ನರಳದ, ಯಾವ ಹೆಣ್ಣು ಕೂಡ ಅಭದ್ರತೆಯಿಂದ ರೋಧಿಸದ, ಎಲ್ಲರಿಗೂ ಶಿಕ್ಷಣ-ಉದ್ಯೋಗ-ಆರೋಗ್ಯವನ್ನು ಒದಗಿಸಿ, ಸಂತಸದ ಬದುಕನ್ನು ನನಸಾಗಿಸುವ, ಮಾನವ ಜನಾಂಗವು ಹೆಮ್ಮೆಯಿಂದ ತಲೆಯೆತ್ತಿ ಮುನ್ನಡೆಯುವ ಸಮಾಜವಾದಿ ಭಾರತ’ವನ್ನು ನಿರ್ಮಿಸುವ ಸಂಕಲ್ಪ ತೊಡುತ್ತೇವೆ. ಈ ಮೂಲಕ, ಸ್ವಾತಂತ್ರ್ಯ ಸಂಗ್ರಾಮದ ಎಲ್ಲ ಹುತಾತ್ಮರಿಗೆ ನಮ್ಮಗೌರವ ಸಲ್ಲಿಸುತ್ತೇವೆ. ಎಂದು
ಜಿಲ್ಲೆಯ ವಿವಿಧ ಶಾಲಾ, ಕಾಲೇಜು, ಮೈದಾನ ಮತ್ತು ಉದ್ಯಾನವನಗಳಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರನ್ನು ಒಳಗೊಂಡು ಸಮ ಸಮಾಜವನ್ನು ನಿರ್ಮಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಯಿತು.