ಯದುವೀರ್ ಕಚೇರಿ ಉದ್ಘಾಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.16:- ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಕಚೇರಿಯನ್ನು ಆರಂಭಿಸಲಾಯಿತು. ಬುಧವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಹೋಮಗಳನ್ನು ಮಾಡಿ ಧಾರ್ಮಿಕ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ನಂತರ, ಮೂರು ಗಂಟೆಗೆ ಮೈಸೂರು ನಗರದ ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು ಸಂಸದರೊಡನೆ ಸೇರಿ ಟೇಪ್ ಕತ್ತರಿಸಿ ಉದ್ಘಾಟಿಸಿದರು. ನಂತರ ಚಾಮುಂಡೇಶ್ವರಿ, ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ತಮ್ಮ ಆಸನದಲ್ಲಿ ಕುಳಿತರು. ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಚಿವರಾದ ಎಸ್.ಎ.ರಾಮದಾಸ್, ಸಾ.ರಾ.ಮಹೇಶ್, ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಸಮಿತಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮಾಜಿ ಮೇಯರ್ ಎಸ್.ಸತೀಶ್ ಸ್ವಾಮಿ, ಶಿವಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಸತೀಶ್, ಬಿ.ವಿ.ಮಂಜುನಾಥ್, ಪ್ರಶಾಂತ್ ಗೌಡ, ಸೌಮ್ಯ ಉಮೇಶ್, ಪ್ರಮೀಳಾ ಭರತ್, ಆರ್.ರವೀಂದ್ರ, ಜಯರಾಮ್, ಜಗದೀಶ್, ವೇದಾವತಿ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಹೇಮಾ ನಂದೀಶ್, ಬಿಜೆಪಿ ಮುಖಂಡ ನಾಗರಾಜ್ ಮಲ್ಲಾಡಿ, ವಿ.ಸೋಮಸುಂದರ್, ಎಚ್.ಜಿ.ಗಿರಿಧರ್, ಮಹೇಶ್ ರಾಜೇ ಅರಸ್ ಮೊದಲಾದ ಮುಖಂಡರು ಹೂಗುಚ್ಛ ನೀಡಿ ಶುಭ ಕೋರಿದರು.
ಕಚೇರಿಯಲ್ಲೆ ಇರುವೆ: ಮೈಸೂರಿನಲ್ಲಿ ಇದ್ದಾಗ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತೇನೆ ಎಂದು ಯದುವೀರ್ ಹೇಳಿದರು. ಕಾರ್ಯಕ್ರಮಗಳು ಇದ್ದಾಗ ಇರುವುದಿಲ್ಲ. ಒಂದು ವೇಳೆ ಸಂಜೆ ಕಾರ್ಯಕ್ರಮ ಇಲ್ಲದಿದ್ದರೆ ಭೇಟಿ ಮಾಡುವೆ ಎಂದು ಹೇಳಿದರು.
ಸಾರ್ವಜನಿಕರು ಯಾವುದೇ ಕೆಲಸ ಕಾರ್ಯಗಳಿಗೆ ಸಂಪರ್ಕ ಮಾಡಬಹುದು. ಮೊದಲು ಅರಮನೆ ಕಚೇರಿ ಸಾರ್ವಜನಿಕ ಕಟ್ಟಡದಲ್ಲಿ ಇತ್ತು. ಈಗ ಅದೇ ಕಟ್ಟಡದಲ್ಲಿ ಕಚೇರಿ ತೆರೆಯಲಾಗಿದೆ. ಸಂಸದರ ಕಚೇರಿ ಸಾರ್ವಜನಿಕರ ಕಚೇರಿಯಾಗಿರುತ್ತದೆ. ಬರುವುದಕ್ಕೆ ಯಾವ ಸಮಯ ನಿಗದಿ ಇಲ್ಲ. ಯಾವಾಗ ಬೇಕಾದರೂ ಭೇಟಿ ಮಾಡಬಹುದು ಎಂದು ತಿಳಿಸಿದರು.
ಸರ್ಕಾರದ ಹಸ್ತಕ್ಷೇಪ ಸಲ್ಲದು: ಚಾಮುಂಡಿಬೆಟ್ಟ ಪ್ರಾಧಿಕಾರ ರಚನೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ದೇವಸ್ಥಾನಗಳ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದೆ ಮುಕ್ತವಾಗಿ ಇರುವಂತೆ ಬಿಡಬೇಕು. ಸರ್ಕಾರ ಪ್ರಾಧಿಕಾರ ರಚನೆ ಮಾಡಿರುವುದಕ್ಕೆ ನ್ಯಾಯಾಲಯ ತಡೆ ನೀಡಿರುವುದರಿಂದ ಮತ್ತೆ ಮಾತನಾಡುವುದು ಬೇಡ. ಪ್ರಾಧಿಕಾರ ರಚನೆಗೆ ವಿರೋಧ ಇದೆ ಎಂದು ಹೇಳಿದರು.
ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಆಗಿರುವ ತೀರ್ಮಾನದಂತೆ ದಸರಾ ನಡೆಯಲಿದೆ. ಅರಮನೆಯಲ್ಲಿ ಎಂದಿನಂತೆ ಶಾಸ್ತ್ರೋಕ್ತವಾಗಿ ನಡೆಯುವ ಕಾರ್ಯಕ್ರಮ ಜರುಗಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು. ಮುಡಾದಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ ನಡೆಸುವಂತೆ ನಡೆಸಿದ ಪಾದಯಾತ್ರೆ ಸಫಲವಾಗಿದೆ. ಬಿಜೆಪಿಯಲ್ಲಿ ನಡೆದಿರುವ ಭಿನ್ನಮತೀಯ ಚಟುವಟಿಕೆಗಳು ನನಗೆ ಗೊತ್ತಿಲ್ಲ. ಸಭೆಗೆ ಯಾರು ಹೋಗಿದ್ದಾರೋ ಅವರನ್ನೇ ಕೇಳಬೇಕು. ಪಕ್ಷದಲ್ಲಿ ಒಡಕು ಇಲ್ಲದೆ ಒಗ್ಗಟ್ಟು ಕಾಪಾಡಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡಲಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಬಾರದು. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಗೆದ್ದಿರುವ ಕಾಂಗ್ರೆಸ್ ಪಕ್ಷ ಯೋಜನೆಗಳನ್ನು ಮುಂದುವರಿಸಬೇಕು. ಜನರು ಗ್ಯಾರಂಟಿ ಯೋಜನೆಗಳಿಗಾಗಿ ಕಾಂಗ್ರೆಸ್‍ಗೆ ಅಧಿಕಾರ ನೀಡಿರುವಾಗ ಯೋಜನೆಗಳು ನಿಲ್ಲಬಾರದು ಎಂದರು.
ರಾಜ್ಯದಲ್ಲಿ ಕಾಲ ಕಾಲಕ್ಕೆ ಡ್ಯಾಮ್‍ಗಳ ಪರಿಶೀಲನೆಯಾಗಬೇಕು. ಇದು ಸರ್ಕಾರಗಳ ಜವಾಬ್ದಾರಿಯಾಗಿದೆ. ಪರಿಶೀಲನೆ ನಡೆಸಿ ಆಗಾಗ ದುರಸ್ತಿ ಕೆಲಸ ಮಾಡಬೇಕು. ನೂರಾರು ವರ್ಷಗಳ ಹಳೆಯ ಡ್ಯಾಮ್ ಗಳನ್ನು ಪರಿಶೀಲಿಸಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಹಾಗೆಯೇ ಕೆಆರ್‍ಎಸ್ ಜಲಾಶಯವನ್ನು ಕೂಡ ಪರಿಶೀಲಿಸಬೇಕು. ನಾಳೆ ಕೆಆರ್‍ಎಸ್ ಡ್ಯಾಮ್ ಪರಿಶೀಲಿಸಲು ತೆರಳುತ್ತಿದ್ದೇನೆ. ಪರಿಶೀಲನೆ ಬಳಿಕ ಮಾಹಿತಿ ಗೊತ್ತಾಗಲಿದೆ. ನೂರಾರು ವರ್ಷದ ಹಳೆಯ ಡ್ಯಾಮ್ ಆಗಿರುವ ಕಾರಣ ಪರಿಶೀಲಿಸಬೇಕಿದೆಎಂದರು.
ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ವೀಸಾ ತಪ್ಪಿರುವ ಬಗ್ಗೆ ಕೇಳಿದಕ್ಕೆ ಈ ಬಗ್ಗೆ ಮಾಹಿತಿ ಗೊತ್ತಾಗಿದೆ. ಯಾವ ಕಾರಣಕ್ಕಾಗಿ ವೀಸಾ ಕೈ ತಪ್ಪಿದೆ ಎನ್ನುವುದರ ಬಗ್ಗೆ ಮಾಹಿತಿ ಪಡೆಯುವೆ. ನಂತರ ಕೇಂದ್ರ ವಿದೇಶಾಂಗ ಸಚಿವರು ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜೊತೆಗೆ ಸಮಾಲೋಚನೆ ಮಾಡುವೆ ಎಂದು ಹೇಳಿದರು.