ಬಿಬಿಎಂಪಿ ಮಾದರಿಯಲ್ಲಿ ಪಾಲಿಕೆ ಪರಿವರ್ತಿಸಬೇಕು
ಸಂಜೆವಾಣಿ ನ್ಯೂಸ್
ಮೈಸೂರು: ಆ.16:- ನಗರವನ್ನು ಬಿಬಿಎಂಪಿ ಮಾದರಿಯಲ್ಲಿ ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಬೇಕಿದ್ದು, ಇದಕ್ಕಾಗಿ ಅಗತ್ಯವಾಗಿರುವ ಸುಮಾರು ಎರಡು ಸಾವಿರ ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ನಗರಕ್ಕೆ ಹೊಂದಿಕೊಂಡಿರುವ ಬಹುತೇಕ ಬಡಾವಣೆಗಳು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಇದರ ಪರಿಣಾಮ ಅಲ್ಲಿನ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಮುಖವಾಗಿ ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ಇದರ ಜತೆಗೆ ಒಳಚರಂಡಿ, ರಸ್ತೆಗಳು, ಉದ್ಯಾನವನಗಳು ಸುಸಜ್ಜಿತವಾಗಿ ನಿರ್ಮಾಣವಾಗಿಲ್ಲ. ಈ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯನ್ನು ಬಿಬಿಎಂಪಿ ಮಾದರಿಯಲ್ಲಿ ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಬೇಕಿದೆ. ಅಲ್ಲದೇ ಇದಕ್ಕೆ ಅಗತ್ಯವಾಗಿರುವ 2 ಸಾವಿರ ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ನೀಡಬೇಕು ಎಂದರು.
ಶೀಘ್ರವೇ ದುರಸ್ತಿ ಮಾಡಲಿ:
ತುಂಗಭದ್ರ ಜಲಾಶಯದ ದುರಸ್ತಿ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರ ತುಂಗಭದ್ರ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿಗೆ ತ್ವರಿತವಾಗಿ ಕ್ರಮಕೈಗೊಳ್ಳಬೇಕಿದೆ. ಜಲಾಶಯದ ಕ್ರಸ್ಟ್ ಗೇಟ್ ಕಳಚಿ ಬಿದ್ದಿರುವುದರ ಪರಿಣಾಮ ಅಪಾರ ಪ್ರಮಾಣದ ನೀರು ಪೆÇೀಲಾಗುತ್ತಿದೆ. ಹೀಗಾಗಿ ವಿದೇಶಿ ತಜ್ಞರನ್ನು ಕರೆಸಿ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿ ಮಾಡಿಸಬೇಕಿದ್ದು, ವಿದೇಶದಲ್ಲಿ ನೀರಿನೊಳಗೆ ತೆರಳಿ ದುರಸ್ತಿ ಮಾಡುವ ತಜ್ಞರಿದ್ದಾರೆ. ಹೀಗಾಗಿ ಅಂತಹ ನುರಿತ ತಜ್ಞರನ್ನು ರಾಜ್ಯಕ್ಕೆ ಕರೆಸಿ ಆದಷ್ಟು ಬೇಗ ಕ್ರಸ್ಟ್ ಗೇಟ್ ದುರಸ್ತಿ ಮಾಡಿಸಬೇಕು ಎಂದ ಅವರು, ಅಂತೆಯೇ ರಾಜ್ಯದ ಎಲ್ಲಾ ಜಲಾಶಯಗಳ ಸಮರ್ಪಕ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ದೇವಸ್ಥಾನ ರಾಜರ ಆಸ್ತಿ
ಮೈಸೂರಿನ ಚಾಮುಂಡಿಬೆಟ್ಟದ ಮಹಾರಾಜರ ಆಸ್ತಿ ವಿಷಯದಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಹೇಳಿಕೆಗೆ ಶಾಸಕ ಜಿ.ಟಿ. ದೇವೇಗೌಡ ಬೆಂಬಲ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಚಾಮುಂಡಿಬೆಟ್ಟದ ದೇಗುಲವನ್ನು ರಾಜ್ಯ ಸರ್ಕಾರ ನಿರ್ವಹಣೆ ಮಾಡುತ್ತಿದೆ ಅಷ್ಟೇ, ಆದರೆ ಚಾಮುಂಡಿಬೆಟ್ಟದ ದೇಗುಲ ಮಹಾರಾಜರಿಗೆ ಸೇರಿದ ಆಸ್ತಿಯಾಗಿದೆ. ಚಾಮುಂಡಿಬೆಟ್ಟದ ಪ್ರಾಧಿಕಾರವನ್ನು ರಾಜ್ಯ ಸರ್ಕಾರ ಯಾವ ಮಾದರಿಯಲ್ಲಿ ರಚನೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.