ಒಕ್ಕಲಿಗ ಸಮುದಾಯ ದೇಶ ಕಟ್ಟುವ ಕೆಲಸ ಮಾಡಲಿ
ಸಂಜೆವಾಣಿ ನ್ಯೂಸ್
ಮೈಸೂರು: ಆ.16:- ಒಕ್ಕಲಿಗ ಸಮುದಾಯ ದೇಶ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಉದ್ಯಮಿ ಒಕ್ಕಲಿಗ ಸಂಸ್ಥೆ ಆಶ್ರಯದಲ್ಲಿ ಬುಧವಾರ ನಗರದ ಖಾಸಗಿ ಹೋಟೆಲಿನಲ್ಲಿ ಆಯೋಜಿಸಿದ್ದ ಪ್ರತಿನಿಧಿಗಳ ಹಾಗೂ ಹೂಡಿಕೆದಾರರ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಮಗೆ ಭದ್ರತೆ ಮತ್ತು ಸುರಕ್ಷತೆ ಕೊಟ್ಟಿರುವುದು ಈ ದೇಶ ಆದ್ದರಿಂದ ನಮ್ಮ ಸಮುದಾಯ ದೇಶ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದ ಅವರು, ಇಡೀ ಜಗತ್ತನ್ನು ಬಹಳ ವರ್ಷಗಳ ಕಾಲ ಆಳಿದವರು ಯಹೂದಿಗಳು. ಆದರೆ, ಅವರು ಕೇವಲ ಶೇ.2ರಷ್ಟು ಜನ ಇದ್ದಾರೆ. ಜಗತ್ತು ಬದಲಾಗುವ ಈ ಕಾಲಘಟ್ಟದಲ್ಲಿ ಸಮುದಾಯ ಆರ್ಥಿಕವಾಗಿ ಸಬಲರಾಗಬೇಕು. ಇದು ಸಮುದಾಯದ ಅಸ್ಮಿತೆ ಕೂಡ ಎಂದು ಸೂಕ್ಷ್ಮವಾಗಿ ನುಡಿದರು.
ಒಕ್ಕಲಿಗರು ಒಂದು ಕಾಲದಲ್ಲಿ ಖಡ್ಗ ಹಿಡಿದು ರಾಜ್ಯವಾಳಿದ್ದಾರೆ. ನೇಗಿಲು ಹಿಡಿದು ವ್ಯವಸಾಯ ಮಾಡುತ್ತಿದ್ದವರು ಖಡ್ಗ ಹಿಡಿದು ರಾಜ್ಯವಾಳಿದರು. ಗಂಗ ಸಾಮ್ರಾಜ್ಯದ ಸ್ಥಾಪನೆ ಮಾಡಿದ್ದು ಒಕ್ಕಲಿಗರು. ಸಾಹಿತ್ಯ ಕ್ಷೇತ್ರದಲ್ಲಿ ಒಕ್ಕಲಿಗರ ಕೊಡುಗೆ ಅಪಾರವಾಗಿದೆ. ಹೊಯ್ಸಳರ ಕಾಲದಲ್ಲೂ ಒಕ್ಕಲಿಗ ಸಮುದಾಯದ ಶಾಂತಲೆಯ ಸಾಧನೆ ಅಪ್ರತಿಮವಾದುದು. ಕಾಲಾನಂತರದಲ್ಲಿ ಮತ್ತೆ ಒಕ್ಕಲಿಗ ಸಮುದಾಯ ನೇಗಿಲು ಹಿಡಿದು ವ್ಯವಸಾಯ ಮಾಡುವ ಮೂಲಕ ಒಕ್ಕಲಿಗ ಎಲ್ಲಾ ಸಮಾಜಕ್ಕೂ ಅನ್ನ ನೀಡುತ್ತಾ ಬಂದಿದ್ದಾನೆ. ಒಕ್ಕಲಿಗ ಸಮುದಾಯ ಸಮಾಜದ ವಿವಿಧ ವಲಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇಶ ಕಟ್ಟುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸಮುದಾಯದ ಜನ ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು. ಇಂದು ಶೇ.99 ಜನ ಅವರ ಕುಟುಂಬದ ನಾಲ್ಕು ಜನರಿಗಾಗಿ ಬದುಕಿದ್ದಾರೆ. ಆದರೆ, ನಾವೆಲ್ಲರೂ ಒಟ್ಟಿಗೆ ಬದುಕಬೇಕು. ನಾವು, ನಮ್ಮವರು ಒಂದಾಗಬೇಕು ಎಂಬ ಕಲ್ಪನೆ ಅವರಿಗೆ ಬರಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉದ್ಯಮಿ ಒಕ್ಕಲಿಗ ಸಂಸ್ಥೆ ಅಧ್ಯಕ್ಷ ಜಯರಾಮ್ ರಾಯಪುರ, ಸಮಾಜ ಬೆಳೆಯುವ ವೇಳೆ ನಾಯಕತ್ವ ಬೇಕಿದೆ. ಅದರಂತೆಯೇ ನಮ್ಮ ಸಮಾಜ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು. ಒಕ್ಕಲಿಗರಲ್ಲಿ ಜಾತಿಯ ಬೇಧಭಾವ ಯಾವತ್ತೂ ಇಲ್ಲ. ಆದರೂ, ಈ ಸಮಾಜಕ್ಕೆ ನಾಯಕತ್ವ ಕೊಡಬೇಕು. ನಾವು ರೈತ ಕೆಲಸ ಹೊರತುಪಡಿಸಿ ಉದ್ಯಮದಲ್ಲಿ ತೊಡಗಿಸಿಕೊಳ್ಳದಿದ್ದಲ್ಲಿ ನಾಯಕತ್ವ ಸೊರಗಲಿದೆ ಎಂದರು.
ಸಮುದಾಯ ಆರ್ಥಿಕವಾಗಿ ಸಬಲವಾಗಬೇಕು. ಅದು ಸಾಧ್ಯವಾಗದಿದ್ದರೆ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಯಲು ಕಷ್ಟ ಆಗಲಿದೆ. ಹಣ ಇದ್ದರೆ ಸರ್ಕಾರವನ್ನೇ ಕೊಂಡುಕೊಳ್ಳಬಹುದು ಎಂಬ ವಾತಾವರಣ ಇಂದು ಸೃಷ್ಟಿಯಾಗಿದೆ. ಇದು ಆತಂಕಕಾರಿ ಬೆಳವಣಿಗೆ ಎಂದ ಅವರು, ನಮ್ಮ ಅಸ್ತಿತ್ವ ಬಳಸಿಕೊಂಡು ನಾವು ಬೆಳೆಯಬೇಕು. ಆಗ ಮಾತ್ರ ನಮ್ಮ ಸಮುದಾಯಕ್ಕೆ ನಾಯಕತ್ವ ಸಿಗಲಿದೆ. ಆ ಗುಣ ಇರುವುದು ನಮ್ಮ ಸಮುದಾಯಕ್ಕೆ ಮಾತ್ರ ಎಂದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾಮಠದ ಸೋಮನಾಥ ಸ್ವಾಮೀಜಿ, ಶಾಸಕರಾದ ಜಿ.ಟಿ.ದೇವೇಗೌಡ, ಹರೀಶ್ ಗೌಡ, ಐಪಿಎಸ್ ಅಧಿಕಾರಿ ಪ್ರಕಾಶ್‍ಗೌಡ, ಜಯರಾಮ್ ರಾಯಪುರ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಮಾಜಿ ಮೇಯರ್ ಮೋದಾಮಣಿ, ಜಿಕೆವಿಕೆ ವಿಸಿ ಸುರೇಶ್, ಎಫ್ಕೆಸಿಸಿಐ ಅಧ್ಯಕ್ಷ ಬಾಲಕೃಷ್ಣ, ಕಾಸಿಯಾ ಅಧ್ಯಕ್ಷ ರಾಜಗೋಪಾಲ್, ಒಕ್ಕಲಿಗರ ಸಂಘದ ನಿರ್ದೇಶಕ ಗಂಗಾಧರಗೌಡ, ಮಂಜೇಗೌಡ, ಉದ್ಯಮಿ ಒಕ್ಕಲಿಗ ಅಧ್ಯಕ್ಷ ನಂದೀಶ್, ಮುಡಾ ಮಾಜಿ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.