ಮಹಿಳಾ ವೈದ್ಯೆಯ ಕೊಲೆ ಖಂಡಿಸಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.16:- ಕೋಲ್ಕತ್ತಾದ ಆರ್.ಜೆ.ಕರ್ ವೈದ್ಯಕೀಯ ಕಾಲೇಜಿನಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಗಂಧದಗುಡಿ ಫೌಂಡೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಕಾರರು ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆರ್.ಜೆ.ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯನ್ನು ಕಿಡಿಕೇಡಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಕಂಡು ಬಂದಿದೆ. ಆದರೆ, ಅಪರಾಧಿಗಳ ಬಂಧನವಾಗಿಲ್ಲ. ಈ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಘಟನೆಯಿಂದ ರಾತ್ರಿ ಕರ್ತವ್ಯ ಮತ್ತು ತುರ್ತು ವಿಭಾಗದ ಕರ್ತವ್ಯ ನಿರ್ವಹಿಸುವ ಮಹಿಳಾ ವೈದ್ಯರ ಸುರಕ್ಷತೆಯ ಆತಂಕ ತಂದಿದೆ. ಸುರಕ್ಷಿತ ಕೆಲಸದ ವಾತಾವರಣ ಸೃಷ್ಟಿಸುವುದು ಆಯಾ ಸರ್ಕಾರಗಳ ಜವಾಬ್ದಾರಿ. ಇದರಲ್ಲಿ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಬಿಐ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದು, ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ಮನವಿ ಮಾಡಿದರು.
ಗಂಧದಗುಡಿ ಫೌಂಡೇಷನ್‍ನ ಗೌರವಾಧ್ಯಕ್ಷ ನಾಗೇಂದ್ರ ಪ್ರಸಾದ್, ರಾಜ್ಯಾಧ್ಯಕ್ಷ ಆರ್ಯನ್ ಗಂಧದಗುಡಿ, ರಾಜ್ಯ ಉಪಾಧ್ಯಕ್ಷ ಮನೋಹರ್ ಗೌಡ, ಸಂಚಾಲಕ ರತನ್ ಚಿಕ್ಕು, ಜಿಲ್ಲಾ ಉಪಾಧ್ಯಕ್ಷ ಗೌತಮ್, ಮಹದೇವ್ ಶೆಟ್ಟಿ, ಆರ್.ಯಶೋಧ ಸೇರಿದಂತೆ ಹಲವರು ಭಾಗವಹಿಸಿದ್ದರು.