ಭಾರತ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ:ಶಾಸಕ ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.16: ಸ್ವಾತಂತ್ರ್ಯ ಪಡೆದ ನಂತರ ಭಾರತವು ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲ್ಲೂಕು ಕ್ರೀಡಾಂಗಣದಲ್ಲಿ 78 ನೇ ಸ್ವಾತಂತ್ರ?ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತ ಸ್ವಾತಂತ್ರ್ಯ ಪಡೆಯಲು ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ತ್ಯಾಗ ಬಲಿದಾನಗಳ ಸಂಕೇತವೇ ಸ್ವಾತಂತ್ರ್ಯವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಹಲವಾರು ಜನ ಸ್ವಾತಂತ್ರ?ಯ ಚಳುವಳಿಯಲ್ಲಿ ಭಾಗವಹಿಸಿದ್ದರು ಇದರ ನೆನಪಿಗಾಗಿ ಮದ್ದೂರಿನ ಶಿವಪುರದ ಸತ್ಯಾಗ್ರಹಸೌಧ ನಿರ್ಮಾಣ ಮಾಡಲಾಗಿದೆ. ತಾಲ್ಲೂಕಿನ ಹೊಸಹೊಳಲಿನ ಗೋವಿಂದೇಗೌಡ, ಗೋವಿಂದಶೆಟ್ಟರು, ಬಳ್ಳೇಕೆರೆಯ ಪುಟ್ಟಸ್ವಾಮೀಗೌಡ, ಶೀಳನೆರೆಯ ಕೆ.ಎಸ್.ಬೋರೇಗೌಡ, ಮಡುವಿನಕೋಡಿ ಹಾಲೇಗೌಡ, ಸಿದ್ದೇಗೌಡ, ಕಿಕ್ಕೇರಿಯ ನರಸೇಗೌಡ, ಬಿದರಹಳ್ಳಿಯ ಶಿವರಾಮಯ್ಯ ಸೇರಿದಂತೆ ಹಲವಾರು ಗ್ರಾಮಗಳ ಹೋರಾಟಗಾರರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಹೋರಾಟಗಾರರ ಹೋರಾಟದ ಹೆಜ್ಜೆಗುರುತುಗಳನ್ನು ಸ್ಮರಿಸಿದರು. ನಮ್ಮ ತಾಲ್ಲೂಕು ಸಾಹಿತ್ಯ, ಕೃಷಿ, ಮುಂತಾದ ಕ್ಷೇತ್ರಗಳಲ್ಲಿ ಹೆಸರು ಮಾಡಿದೆ. ಇಂದಿನ ಯುವಕರು ಉತ್ತಮ ಕೆಲಸ ಮಾಡುವ ಮೂಲಕ ನಾಡಿಗೆ ಕೀರ್ತಿ ತರುವ ಕೆಲಸ ಮಾಡಬೇಕು
ನಮ್ಮ ಹಿರಿಯರು ತೋರಿಸಿದ ಹಾದಿಯಲ್ಲಿ ನಾವೆಲ್ಲರೂ ಸಾಗಿ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗೋಣ, ದೇಶ ಕಾಯುವ ಸೈನಿಕರು, ಅನ್ನ ಕೊಡುವ ರೈತರನ್ನು ಗೌರವಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಭಾರತ ದೇಶವು ವಿಜ್ಞಾನ, ತಂತ್ರಜ್ಞಾನ, ಕೃಷಿ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಜಗತ್ತಿನ ಗುರುವಾಗುವ ಹಂತಕ್ಕೆ ಬಂದು ನಿಂತಿದೆ. ಇಷ್ಟಾದರೂ ನಮ್ಮೊಳಗಿನ ಅಸಮಾನತೆ ತೊಲಗಿಲ್ಲ. ಜಾತೀಯತೆ ಮತ್ತು ಧರ್ಮಾಂದತೆ ದುರ್ಬಲವಾಗಿಲ್ಲ. ನಾವೆಲ್ಲರೂ ಜಾತ್ಯಾತೀತ ಪರಿಕಲ್ಪನೆಯನ್ನು ಬೆಳೆಸಿಕೊಂಡು ದೇಶ ಮೊದಲು ಎನ್ನುವ ಸಿದ್ದಾಂತದ ಅಡಿ ಮುನ್ನಡೆಯಬೇಕಿದೆ ಎಂದರು.
ಧ್ವಜಾರೋಹಣ ಮಾಡಿ ಧ್ವಜ ಸಂದೇಶ ನೀಡಿದ ತಹಸೀಲ್ದಾರ್ ಆದರ್ಶ ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಸದ್ಬಳಕೆ ಮಾಡಿಕೊಂಡು ಬಲಿಷ್ಠ ಭಾರತವನ್ನು ನಿರ್ಮಿಸಲು ನಾವೆಲ್ಲರೂ ಕೈ ಜೋಡಿಸಬೇಕೆಂದರು.
ದಿನಾಚರಣೆಯ ಅಂಗವಾಗಿ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಶಾಸಕ ಮಂಜು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಕ್ರೀಡಾಂಗಣವನ್ನು ತಲುಪಿದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಮಾಡಲಾಯಿತು. ನೂರಾರು ಶಾಲಾ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು. ಸ್ವಾತಂತ್ರ್ಯ ದಿನದ ಮಹತ್ವದ ಕುರಿತು ಕೆಪಿಎಸ್ ಶಾಲೆಯ ಶಿಕ್ಷಕ ಗುರುಲಿಂಗೇಗೌಡ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಇಓ ಸುಷ್ಮ, ಎಂಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಹೆಚ್.ಕೆ.ಅಶೋಕ್, ಪುರಸಭಾ ಮುಖ್ಯಾಧಿಕಾರಿ ರಾಜು, ಸದಸ್ಯರಾದ ಗಿರೀಶ್, ತಿಮ್ಮೇಗೌಡ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವರಾಮೇಗೌಡ, ಸಿಡಿಪಿಓ ಅರುಣ್‍ಕುಮಾರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ಜಯಕರ್ನಾಟಕ ಸಂಘಟನೆಯ ಸೋಮಶೇಖರ್, ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಜರಿದ್ದರು.