ಟಿ.ಬಿ.ಬಡಾವಣೆಯ ಜಾಗವನ್ನು ರಕ್ಷಿಸುವಂತೆ ಸದಸ್ಯರ ಆಗ್ರಹ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.16: ಪಟ್ಟಣದ ನಿವೇಶನ ರಹಿತ ಕಡು ಬಡವರಿಗೆ ಹಂಚಿಕೆ ಮಾಡುವ ಸದುದ್ದೇಶದಿಂದ ಪುರಸಭೆ 1976-77 ರ ಅವಧಿಯಲ್ಲಿ ಭೂಸ್ವಾದೀನ ಮಾಡಿಕೊಂಡಿರುವ ಟಿ.ಬಿ.ಬಡಾವಣೆಯ ಜಾಗವನ್ನು ಸರ್ವೆ ಇಲಾಖೆಯಿಂದ ಅಳತೆ ಮಾಡಿಸಿ ತಂತಿ ಬೇಲಿ ಹಾಕಿಸುವಂತೆ ಪುರಸಭಾ ಸದಸ್ಯರು ಆಗ್ರಹಿಸಿದರು.
ಶಾಸಕ ಹೆಚ್.ಟಿ.ಮಂಜು ಉಪಸ್ಥಿತಿಯಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯ ಕೆ.ಸಿ.ಮಂಜುನಾಥ್ ಟಿ.ಬಿ ಬಡಾವಣೆಯ ಬಗ್ಗೆ ವಿಷಯ ಪ್ರಸ್ತಾಪಿಸಿದರು.
ಬಡವರ ನಿವೇಶನ ಹಂಚಿಕೆಯ ಉದ್ದೇಶದಿಂದ ಸ್ವಾಧೀನ ಪಡಿಸಿಕೊಂಡ ಟಿ.ಬಿ.ಬಡಾವಣೆಯ 17.21 ಎಕರೆ ಭೂ ಪ್ರದೇಶ ಅತಿಕ್ರಮಣಕ್ಕೆ ಒಳಗಾಗಿದೆ. ಪುರಸಭೆ ಟಿ.ಬಿ.ಬಡಾವಣೆಯಲ್ಲಿ ಇದುವರೆಗೂ ಬಡವರಿಗೆ ಒಂದೇ ಒಂದು ನಿವೇಶನ ಹಂಚಿಕೆ ಮಾಡಿಲ್ಲ. ಪುರಸಭೆಯ ಆಸ್ತಿ ಮೂಲ ಉದ್ದೇಶಕ್ಕೆ ಬಳಕೆಯಾಗದೆ ಅತಿಕ್ರಮಣಕ್ಕೆ ಒಳಗಾಗಿದ್ದರೂ ಪುರಸಭೆ ತನ್ನ ಆಸ್ತಿ ರಕ್ಷಣೆಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ಟಿ.ಬಿ.ಬಡಾವಣೆಯ ಆಸ್ತಿ ಸರ್ವೆ ಮಾಡಿಕೊಡುವಂತೆ ತಾಲೂಕು ಭೂ ಮಾಪನ ಇಲಾಖೆಗೆ ಪತ್ರ ಬರೆದಿದ್ದರೂ ಸರ್ವೆ ಇಲಾಖೆ ಇದುವರೆಗೂ ಸರ್ವೆ ಕಾರ್ಯ ಮಾಡಿ ಪುರಸಭೆ ಆಸ್ತಿಯ ಹದ್ದುಬಸ್ತು ಮಾಡುತ್ತಿಲ್ಲ. ಪುರಸಭೆಯ ಆಡಳಿತಾಧಿಕಾರಿಗಳಾಗಿರುವ ಪಾಂಡವಪುರ ಉಪ ವಿಭಾಗಧಿಕಾರಿಗಳು ಟಿ.ಬಿ.ಬಡಾವಣೆಯ ಸರ್ವೆ ಕಾರ್ಯ ಮಾಡಿಸಿ ಆಸ್ತಿ ರಕ್ಷಣೆ ಮಾಡಬೇಕು ಎಂದು ಕೆ.ಸಿ.ಮಂಜುನಾಥ್ ಆಗ್ರಹಿಸಿದರು.
ಅಂಬೆಡ್ಕರ್ ಪ್ರತಿಮೆ ವಿವಾದ:- ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡುವಂತೆ ಸದಸ್ಯರಾದ ಡಿ.ಪ್ರೇಂಕುಮಾರ್, ಯೋಗೇಶ್ ಮತ್ತು ಕಲ್ಪನಾ ಆಗ್ರಹಿಸಿದರು. ಪ್ರವಾಸಿ ಮಂದಿರ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಿಸಲು ಒಕ್ಕಲಿಗರ ಸಂಘಟನೆಗಳು, ಧರ್ಮಧಜ ಸ್ಥಾಪನೆಗೆ ಅವಕಾಶ ನೀಡುವಂತೆ ಹಿಂದೂಪರ ಸಂಘಟನೆಗಳು ಈಗಾಗಲೇ ಅರ್ಜಿ ಕೊಟ್ಟಿವೆ. ಸುಪ್ರಿಂಕೋರ್ಟ್ ನಿರ್ದೇಶನದಂತೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶ ಇಲ್ಲ. ಪ್ರವಾಸಿ ಮಂದಿರ ವೃತ್ತದಲ್ಲಿ ಪೆÇಲೀಸ್ ಚೌಕಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದ ಸಭಾಧ್ಯಕ್ಷ ಉಪ ವಿಭಾಗಾಧಿಕಾರಿ ನಂದೀಶ್ ಪ್ರತಿಮೆ ವಿವಾದಕ್ಕೆ ಅಂತ್ಯ ಹಾಕುವ ಪ್ರಯತ್ನ ಮಾಡಿದರು. ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಹೇಮಾವತಿ ಬಡಾವಣೆ: ಪಟ್ಟಣದ ಹೇಮಾವತಿ ಬಡಾವಣೆಯ ಉಳಿದ 582 ನಿವೇಶನಗಳ ಸಕ್ರಮಾತಿಗೆ ಕ್ರಮ ವಹಿಸುವಂತೆ ಸಭಾನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸುವಂತೆ ಸದಸ್ಯರು ಸಭೆಯಲ್ಲಿ ಮನವಿ ಮಾಡಿದರು.
ಸಮುದಾಯ ಭವನಗಳಿಗೆ ಹಣಕಾಸಿನ ನೆರವಿಗೆ ವಿರೋದ: ಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಸಮುದಾಯಗಳ ಸಮುದಾಯ ಭವನಗಳಿಗೆ ಹಣ ನೀಡುತ್ತಾ ಹೋದರೆ ಪುರಸಭೆಯ ಅಭಿವೃದ್ದಿಗೆ ಹಣ ಎಲ್ಲಿಂದ ತರುತ್ತೀರಿ. ಸಮುದಾಯ ಭವನಗಳಿಗೆ ಶಾಸಕರ ನಿಧಿ, ಸಂಸದರ ನಿಧಿ ಮುಂತಾದ ಕಡೆಯಿಂದ ಹಣಕಾಸಿನ ನೆರವು ದೊರಕುತ್ತದೆ. ಪುರಸಭೆಯ ಸಬಾ ಭವನದಲ್ಲಿಯ ಖುರ್ಚಿಗಳು ಕಿತ್ತು ಹೋಗಿವೆ. ಸದಸ್ಯರು ಕಿತ್ತು ಹೋಗಿರುವ ಖುರ್ಚಿಗಳಲ್ಲಿ ಸಭೆ ನಡೆಸಬೇಕಾದ ಹೀನಾಯ ಸ್ಥಿತಿಯಿದೆ. ಮೊದಲು ಸಭಾಂಗಣಕ್ಕೆ ಹೊಸ ಖುರ್ಚಿಗಳನ್ನು ಹಾಕಿಸಿ ಎಂದು ಸದಸ್ಯರು ಆಗ್ರಹಿಸಿದರು.
ಸಭಾ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಪುರಸಭೆಯ ಅಭಿವೃದ್ದಿ ಕಾರ್ಯಗಳಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಸದಸ್ಯರು ಪಕ್ಷಾತೀತವಾಗಿ ಒಗ್ಗೂಡಿ ಶಾಶ್ವತ ಕಾಮಗಾರಿಗಳ ಬಗ್ಗೆ ಯೋಜಿಸಿ. ಬಂದ ಅನುದಾನವನ್ನು ವಾರ್ಡುವಾರು ಹಂಚಿಕೆ ಮಾಡಿಕೊಂಡರೆ ಶಾಶ್ವತ ಕಾಮಗಾರಿಗಳಿಗೆ ಹಣಕಾಸಿನ ಅಡಚಣೆಯಾಗುತ್ತದೆ ಎಂದರು. ಪುರಸಭೆಯ ಮುಖ್ಯಾಧಿಕಾರಿಗಳು ಮತ್ತು ಸಿಬ್ಬಂಧಿಗಳು ಪೂರ್ವ ಸಿದ್ದತೆಯಿಲ್ಲದೆ ಸಭೆಗೆ ಬರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಹೇಮಾವತಿ ಬಡಾವಣೆಯ 582 ನಿವೆಶನಗಳ ಸಕ್ರಮಾತಿಯ ಬಗ್ಗೆ ಕ್ರಮ ವಹಿಸಲಾಗಿದೆ ಎಂದರು. ಪಾಂಡವಪುರ ಉಪ ವಿಭಾಗಧಿಕಾರಿ ನಂದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಧಿಕಾರಿ ರಾಜು ವಠಾರ, ಸ್ಥಾಯಿ ಸಮಿತಿಯ ಅಧ್ಯಕ್ಷ ಹೆಚ್.ಆರ್.ಲೋಕೆಶ್ ಸೇರಿದಂತೆ ಹಲವು ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.