ಕಾಳಗಿ ತಾಲೂಕು ಆಡಳಿತದಿಂದ ಕಾಟಾಚಾರದ ಸ್ವಾತಂತ್ರೋತ್ಸವ
ಕಾಳಗಿ:ಆ.೧೬:ದೇಶದ ದೊಡ್ಡ ಹಬ್ಬವಾಗಿ ಕಂಗೊಳಿಸಬೇಕಾದ ೭೮ನೇ ಸ್ವಾತಂತ್ರೋತ್ಸವ ಸಮಾರಂಭವು ಇಲ್ಲಿಯ ತಾಲೂಕು ಆಡಳಿತದ ಸಂಪೂರ್ಣ ನಿರ್ಲಕ್ಷ ಧೋರಣೆಯಿಂದ ಅವ್ಯವಸ್ಥೆಯ ಆಗರವಾಗಿ, ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಯಿತು.
ತಾಲೂಕು ಕೇಂದ್ರವಾಗಿರುವ ಕಾಳಗಿಯಲ್ಲಿ ತುಂಬಾ ಅಚ್ಚುಕಟ್ಟಾಗಿ ನಡೆಸಬೇಕಾಗಿರುವ ೭೮ನೇ ಸ್ವಾತಂತ್ರೋತ್ಸವ ದಿನವನ್ನು ಗ್ರೇಡ್-೧ಹಸೀಲ್ದಾರ ಘಮವತಿ ರಾಠೋಡ ಅವರು, ಪಟ್ಟಣದ ನಾಗರಿಕರಿಗೆ ಹಾಗೂ ಹಾಲಿ ಮಾಜಿ ಜನಪ್ರತಿನಿಧಿಗಳ ಗಮನಕ್ಕೆ ತರದೇ ಸ್ವಾತಂತ್ರೋತ್ಸವ ಆಚರಣೆ ಇದ್ದರೂ… ಸಹ ಸರ್ವಾಧಿಕಾರಿಯಂತೆ ವರ್ತನೆಗೈದು, ಕಾಟಾಚಾರದ ಧ್ವಜಾರೋಹಣ ಮಾಡಿ ಕೈತೊಳೆದುಕೊಂಡರು.
ಗುರುವಾರ ತಹಸೀಲ್ದಾರ್ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರೋತ್ಸವದ ಸಾರ್ವಜನಿಕ ಸಭೆಯಲ್ಲಿ ಚಿಕ್ಕವೇದಿಕೆಯಲ್ಲಿಯೇ ತಮಗೆ ಬೇಕಾಗಿರುವ ವ್ಯಕ್ತಿಗಳನ್ನು ಹಾಗೂ ಸರ್ಕಾರಿ ಸೇವೆಯಲ್ಲಿರುವ ಕೆಲ ನೌಕರರಿಗೆ ಮಾತ್ರ ಕರೆಯಿಸಿಕೊಂಡು ವೇದಿಕೆಯಲ್ಲಿಯೇ ಗಿಜಿ-ಗಿಜಿಯಾಗಿ ನಿಲ್ಲುತ್ತಾ ಒಬ್ಬರು ಭಾಷಣ ಮಾಡುತ್ತಿದ್ದರೆ ಮತ್ತೊಬ್ಬರು ಮಾತನಾಡುತ್ತಾ ಕಾಲ ಕಳೆದರು.
ಪಟ್ಟಣದ ನಾಗರಿಕರು ವೇದಿಕೆಯ ಮುಂಭಾಗದಲ್ಲಿ ನಿಂತರೂ ಕೂಡ ಕುಳಿತುಕೊಳ್ಳಲು ಆಸನಗಳಿಲ್ಲದೇ ಪರದಾಡಿ, ರೊಚ್ಚಿಗೆದ್ದ ನಾಗರಿಕರು ಜಾಗ ಖಾಲಿ ಮಾಡಿದರು.
ನಾಗರಿಕರು, ನೊಂದುಕೊAಡು ಹೊದ ನಂತರ ತರಾತುರಿಯಲ್ಲಿ ಆಸನಗಳ ವ್ಯವಸ್ಥೆ ಮಾಡಲಾರಂಭಿಸಿದರು.
ತಹಸೀಲ್ದಾರ್ ವಿರುದ್ಧ ಧಿಕ್ಕಾರ ಹಾಕಿದ ಕುರುಬ ಸಮಾಜ:
ರಾಷ್ಟ್ರೀಯ ಹಬ್ಬಗಳ ಬಗ್ಗೆಯಾಗಲಿ, ಮಹಾತ್ಮರ ಜಯಂತೋತ್ಸವಗಳಾಗಲಿ ಯಾವುದೇ ಪ್ರಕಾರದ ಸಾರ್ವಜನಿಕ ಸಭೆ ಸಮಾರಂಭ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಗಳಾಗಲಿ ಜನರಿಗೆ ವಿಷಯ ತಿಳಿಸುವುದು ಎಂದರೆ ಕಾಳಗಿ ತಹಸೀಲ್ದಾರ ಅವರಿಗೆ ತುಂಬಾ ಕಷ್ಟದ ಕೆಲಸವಾಗಿದೆ. ಎಂದು ಕಾಳಗಿ ತಾಲೂಕು ಕುರುಬ ಸಮಾಜ ತಹಸೀಲ್ದಾರ್ ವಿರುದ್ಧ ಧಿಕ್ಕಾರ ಕೂಗಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಬಗ್ಗೆಯೂ ಸಹ ತಾಲೂಕಿನ ಯಾರೊಬ್ಬ ಮುಖಂಡರಿಗೂ ಗಮನಕ್ಕೆ ತರದೆ ಸೌಜನ್ಯಕ್ಕಾದರೂ ಸಹ ಮೂರ್ನಾಲ್ಕು ಜನರಿಗೆ ಮಾಹಿತಿ ನೀಡಬೇಕಾಗಿತ್ತು. ಎಂದು ಕಾಳಗಿ ತಾಲೂಕು ಕುರುಬ ಸಮಾಜ ಮುಖಂಡರು ತಹಸೀಲ್ದಾರ್ ವಿರುದ್ಧ ರೊಚ್ಚಿಗೆದ್ದರು.
ಸ್ವಾತಂತ್ರೋತ್ಸವ ದಿನವನ್ನೇ ಕಾಟಾಚಾರಕ್ಕಾಗಿ ಆಚರಣೆ ಮಾಡುವ ತಹಸೀಲ್ದಾರ್ ಸಂಗೋಳ್ಳಿ ರಾಯಣ್ಣ ಜಯಂತಿ ಎಲ್ಲಿ ಅರ್ಥಪೂರ್ಣವಾಗಿ ಮಾಡಿದಿರಿ ಎಂದು ಕಿಡಿಕಾರಿದರು.
ಮಹೇಶ್ ಪೂಜಾರಿ ಸುಂಠಾಣ, ರೇವಣಸಿದ್ದ ಪೂಜಾರಿ ಸೂಗೂರ(ಕೆ), ಕಿರಣ ಪೂಜಾರಿ, ಸಿದ್ದು ಸಾಲಹಳ್ಳಿ, ಹೊನ್ನಪ್ಪ ಮಗಿ, ಅಶೋಕ ಹೂಗೊಂಡ ಚಿಂಚೋಳಿ (ಎಚ್), ಮಾಳಪ್ಪ ಗಡಿಕೇಶ್ವಾರ ಇದ್ದರು.
ನಮ್ಮ ಪೂರ್ವಜರು ಪ್ರಾಣವನ್ನೇ ಪಣಕ್ಕಿಟ್ಟು ತಮಗೆ ಸ್ವಾತಂತ್ರ‍್ಯವನ್ನು ದೊರಕಿಸಿಕೊಟ್ಟಿದ್ದಾರೆ.
ಆದರೆ ಇಂದು ಸ್ವಾತಂತ್ರ‍್ಯ ಹೋರಾಟಗಾರರನ್ನು ಸ್ಮರಿಸುವುದಕ್ಕೂ ಸಮಯವಿಲ್ಲದಂತೆ ವರ್ತಿಸುವ ಅಧಿಕಾರಿಗಳ ನಡೆ ತುಂಬಾ ಬೇಸರವನ್ನುಂಟು ಮಾಡಿದೆ. ಎಂದು ಕಾಳಗಿ ತಾಲೂಕು ಆಡಳಿತದಿಂದ ಕಾಟಾಚಾರಕ್ಕೆ ಸ್ವಾತಂತ್ರೋತ್ಸವ ಮಾಡಿ ಕೈತೊಳೆದುಕೊಂಡ ಕಾಳಗಿ ತಹಸೀಲ್ದಾರ ವಿರುದ್ಧ ಅಸಮಾಧಾನ ಹೊರಹಾಕಿದ ಯುವನಾಯಕ.
-ಪ್ರವೀಣ ಪೂಜಾರಿ ಮಲಘಾಣ
ಅಧ್ಯಕ್ಷರು, ತಾಲೂಕು ಸಂಗೊಳ್ಳಿ ರಾಯಣ್ಣ ಸಮಿತಿ ಕಾಳಗಿ