ದಾಸೋಹಕ್ಕಾಗಿ ಮಾಡುವ ಕೆಲಸವೇ ಕಾಯಕ
ಕಲಬುರಗಿ:ಆ.15:ಶರಣಬಸವೇಶ್ವರ ಸಂಸ್ಥಾನ ಕಾಯಕ ಮತ್ತು ದಾಸೋಹಕ್ಕಾಗಿ ಬಹಳ ಮಹತ್ವ ನೀಡುತ್ತಾ ಬಂದಿದೆ ಎಂದು ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಶ್ರೀಮತಿ ಶ್ರೀದೇವಿ ಹರವಾಳ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಗುರುವಾರ ಕಾಯಕದ ಮಹತ್ವ ವಿಷಯ ಕುರಿತು ಮಾತನಾಡಿದರು.
ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ತಮ್ಮ ದಾಸೋಹ ಸೂತ್ರದಲ್ಲಿ ದಾಸೋಹಕ್ಕಾಗಿ ಮಾಡುವ ಕೆಲಸವೇ ಕಾಯಕವಾಗಿದೆ, ತಾನಿಲ್ಲದೆ ಮನದಿಂದ ದೇವರನ್ನು ಧ್ಯಾನಿಸುವುದೇ ಮಂತ್ರ, ತಾನಿಲ್ಲದೆ ಕಾಯಕದಿಂದ ದೇವರಿಗೆ ಪ್ರಾರ್ಥಿಸುವ ಕೆಲಸವೆಲ್ಲ ಕಾಯಕವಾಯಿತು ಎಂದು ಪೂಜ್ಯರು ಹೇಳಿದ್ದಾರೆ. ದಾಸೋಹಕ್ಕಾಗಿ ದಾಸೋಹಭಾವದಿಂದ ಮಾಡುವ ಕೆಲಸಗಳು ಮಾತ್ರ ಕಾಯಕದಿಂದ ಬಂದ ಪಡಿದಾರ್ಥಗಳು ಪ್ರಸಾದವಾಗುತ್ತವೆ. ಕಾಯಕ ಮತ್ತು ದಾಸೋಹ ಒಂದು ನಾಣ್ಯದ ಎರಡು ಮುಖಗಳು.
ಶರಣಬಸವೇಶ್ವರ ಸಂಸ್ಥಾನ ಮತ್ತು ಕಾಯಕ ದಾಸೋಹ ತತ್ವಗಳಿಗೆ ಅವಿನಾವ ಸಂಬಂಧ ಇದೆ. ಶರಣಬಸವರು ದಾಸೋಹ ಮಾಡುವ ಕಾಯಕವನ್ನು ಇಡೀ ತಮ್ಮ ಜೀವನದುದ್ದಕ್ಕೂ ಮಾಡಿದರು. ಅದರಂತೆ ಪೂಜ್ಯ ದೊಡ್ಡಪ್ಪ ಅಪ್ಪ ಅವರು ದಾಸೋಹ , ಕೃಷಿಗೆ ಬಹಳ ಮಹತ್ವ ನೀಡಿದ್ದರು. ಕಾಯಕ ಸಾರ್ಥಕವಾಗುವುದೇ ದಾಸೋಹದಲ್ಲಿ ಆದ್ದರಿಂದ ಸೋಹಂ ಎಂದೆನಿಸದೆ ದಾಸೋಹ ಎಂದೆನಿಸಯ್ಯ ಎಂದು ಶರಣರು ಹೇಳಿದರು.
ಶರಣಬಸವೇಶ್ವರರು ಶ್ರಮಿಸಿದ್ದು ಸರ್ವರ ಒಳಿತಿಗಾಗಿ ಮತ್ತು ಅವರ ಹಿತಕ್ಕಾಗಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಹೆಣ್ಣುಮಕ್ಕಳ ಬೆಳವಣಿಗೆಗಾಗಿ ಅವಿರತವಾಗಿ ಶ್ರಮಿಸಿ ಅವರಿಗಾಗಿಯೇ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿ ಜ್ಞಾನದಾಸೋಹದ ಬೀಜವನ್ನು ನೆಟ್ಟರು. ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಪೂಜ್ಯ ದೊಡ್ಡಪ್ಪ ಅಪ್ಪ ಅವರು ನೆಟ್ಟ ಜ್ಞಾನದ ಬೀಜವನ್ನು ಹೆಮ್ಮರವಾಗಿ ಬೆಳೆಸಿ ಇಲ್ಲಿ ಕಲಿತ ಹೆಣ್ಣು ಮಕ್ಕಳ ತಮ್ಮ ಕುಟುಂಬಗಳ ಶ್ರೇಯಸ್ಸಿಗೆ ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನು ನೀಡುವುದಕ್ಕಾಗಿ ಅತ್ಯಂತ ದಿಟ್ಟ ಹೆಜ್ಜೆಗಳನ್ನು ಇಟ್ಟು ಮುನ್ನಡೆದಿದ್ದಾರೆ. ಪೂಜ್ಯ ಡಾ.ದಾಕ್ಷಾಯಣಿ ಅವ್ವ ಅವರು ಮತ್ತು ಶರಣಬಸವೇಶ್ವರ ಸಂಸ್ಥೆಯ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಅವರು ಈ ನಾಡಿನ ಏಳ್ಗೆಗಾಗಿ ಶಿಕ್ಷಣ ಸಂಸ್ಥೆಯ ಬೆಳವಣಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.