ಸೈನಿಕರಂತೆ ಕೆಲಸ ಮಾಡಿ: ರವಿಂದ್ರ ಕರಲಿಂಗಣ್ಣವರ್
ಕಲಬುರಗಿ,ಆ.15-ನಾವು ಕೂಡಾ ಗಡಿ ಕಾಯುವ ಸೈನಿಕರ ಹಾಗೆ ಗ್ರಾಹಕರಿಗೆ ವಿದ್ಯುತ್ ಅವಘಡಗಳಿಂದ ಯಾವುದೇ ತೊಂದರೆ ಆಗದ ಹಾಗೆ ಕೆಲಸ ಮಾಡೋಣ ಎಂದು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕಲಬುರಗಿಯ ವ್ಯವಸ್ಥಾಪಕ ನಿರ್ದೇಶಕರಾದ ರವೀಂದ್ರ ಕರಲಿಂಗಣ್ಣವರ್ ಅವರು ಜೆಸ್ಕಾಂನ ಅಧಿಕಾರಿಗಳಿಗೆ ಕರೆ ನೀಡಿದರು.
ಜೆಸ್ಕಾಂ ನಿಗಮ ಕಚೇರಿಯಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಬ್ರಿಟಿಷ್‍ರ ಕೈವಶವಾಗಿದ್ದ ನಮ್ಮ ದೇಶವನ್ನು ಸ್ವತಂತ್ರ್ಯಗೊಳಿಸಲು ಹಲವಾರು ರಾಜಕೀಯ ನಾಯಕರು, ರೈತರು, ಧಾರ್ಮಿಕ ಗುರುಗಳು ಹಾಗೂ ಇನ್ನಿತರರ ಪರಿಶ್ರಮ ಬಹಳ ಇದೆ. ಕ್ವಿಟ್ ಇಂಡಿಯಾ ಚಳವಳಿ, ಉಪ್ಪಿನ ಸತ್ಯಾಗ್ರಹ, ಪೂರ್ಣ ಸ್ವರಾಜ್ಯ ಹೀಗೆ ಹಲವಾರು ಚಳವಳಿಗಳು ಮತ್ತು ಬಲಿದಾನಗಳ ಪ್ರತಿಫಲವಾಗಿ ಇಂದು ನಾವು ಸ್ವತಂತ್ರರಾಗಿದ್ದೇವೆ. ನಮ್ಮ ದೇಶ ಜಗತ್ತಿನ ಅತ್ಯಂತ ಪ್ರಭಲ ರಾಷ್ಟ್ರವನ್ನಾಗಿಸುವುದು ರಾಷ್ಟ್ರ ನಾಯಕರ ಕನಸಾಗಿತ್ತು. ಎಲ್ಲ ರಂಗದಲ್ಲಿಯೂ ಭಾರತ ಮುಂದೆ ಬಂದು ವಿಶ್ವ ಮಾನ್ಯವನ್ನು ಪಡೆಬೇಕು ಎಂದು ಹೇಳಿದ್ದರು. ನಮ್ಮ ದೇಶ ಸಾಮಾಜಿಕವಾಗಿ ಆರ್ಥಿಕವಾಗಿ ಪ್ರಭಲವಾಗಿದ್ದು, ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದೇವೆ.
ರಾಷ್ಟ್ರ ನಿರ್ಮಾಣದಲ್ಲಿ ಇಂಧನ ಇಲಾಖೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ದೇಶದ ಮುಂದವರಿದ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿಕೊಂಡಿದೆ. ಜನರ ಕತ್ತಲೆಯನ್ನು ತೊಡೆದು ಹಾಕಲಿಕ್ಕಾಗಿ ಇಂಧನ ಇಲಾಖೆ ಇರುವಂತದ್ದು, ಜನರಿಗಾಗಿ ಒಳ್ಳೆಯ ಗುಣಮಟ್ಟದ ವಿದ್ಯುತ್ ಸರಬರಾಜನ್ನು ಮಾಡುವ ಧ್ಯೇಯ್ಯವನ್ನು ತೆಗೆದುಕೊಳ್ಳಬೇಕು. 2 ದಶಕಗಳ ಅವಧಿಯಲ್ಲಿ ಜೆಸ್ಕಾಂ ಉತ್ತಮವಾಗಿ ಕಾರ್ಯನಿವಹಿಸುತ್ತಾ ಬಂದಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ, ಜೆಸ್ಕಾಂ ವ್ಯಾಪ್ತಿಯಲ್ಲಿ 23 ಲಕ್ಷ ಜನರು ಇದರ ಲಾಭ ಪಡೆದುಕೊಂಡಿದ್ದಾರೆ. ರೈತರಿಗೆ 7 ಗಂಟೆ ವಿದ್ಯುತ್ ನೀಡುವಲ್ಲಿ ಯಶಸ್ವಿಯಾಗಿದ್ದೆವೆ. ಅದೇ ರೀತಿ ಸಂಪನ್ಮೂಲಗಳನ್ನು ಬಳಸಿಕೊಂಡು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಹಾಗೂ ಕಂಪನಿಯ ಆರ್ಥಿಕತೆ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಹೇಳಿದರು.
ಈ ವೇಳೆ ಕಾರ್ಯಕ್ರಮದಲ್ಲಿ ತಾಂತ್ರಿಕ ನಿರ್ದೇಶಕರಾದ ಎನ್.ಆರ್.ನಾಗರಾಜನ್, ಆರ್ಥಿಕ ಸಲಹೆಗಾರ ಸಂತೋಷ ಹೆಬಾರೆ, ಜನರಲ್ ಮ್ಯಾನೇಜರ್ ಆಶಪ್ಪ, ಮುಖ್ಯ ಅಭಿಯಂತರ ವೆಂಕಟೆಶ್ ಪ್ರಸಾದ್ ಹಾಗೂ ಪೆÇೀಲೀಸ್ ಅಧೀಕ್ಷಕರಾದ ಕರುಣಾಕರಶೆಟ್ಟಿ ಹಾಗು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಜೆಸ್ಕಾಂನ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.