ಗ್ರಾಮೀಣ ಪ್ರದೇಶಗಳಲ್ಲಿ  ರಂಗಮಂದಿರಗಳನ್ನು ನಿರ್ಮಿಸಲಿ: ಟಿ ಹೆಚ್ ಎಂ ಬಸವರಾಜ
(ಸಂಜೆವಾಣಿ ವಾರ್ತೆ)
ಬಳ್ಳಾರಿ ಅ, 1 :ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರ ರಂಗಮಂದಿರಗಳನ್ನು ಹೆಚ್ಚಾಗಿ  ನಿರ್ಮಿಸಲೆಂದು ಕರ್ನಾಟಕ ಇತಿಹಾಸ ಅಕಾಡೆಮಿಯ  ಜಿಲ್ಲಾಧ್ಯಕ್ಷ ಟಿ. ಹೆಚ್. ಎಂ. ಬಸವರಾಜ ಹೇಳಿದ್ದಾರೆ.
ಅವರು ನಿನ್ನೆರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಧನಸಹಾಯ ಯೊಜನೆಯಡಿ. ನಗರದ ಅಭಿನಯ ಕಲಾ ಕೇಂದ್ರದಿಂದ ಜಿಲ್ಲೆಯ ಕುರುಗೋಡು ತಾಲೂಕು ಸೋಮ ಸಮುದ್ರ ಗ್ರಾಮದ ಕೊಟ್ಟೂರು ಸ್ವಾಮಿ ಶಾಖಾ ಮಠದಲ್ಲಿ ಏರ್ಪಡಿಸಿದ “ಗ್ರಾಮೀಣ ಕಲಾ ಸಂಗಮ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಸ್ತುತ ಸ್ಥಳೀಯ ಮಠಗಳಲ್ಲಿ, ದೇವಸ್ಥಾನಗಳಲ್ಲಿ, ರಸ್ತೆಗಳಲ್ಲಿ  ಕಾರ್ಯಕ್ರಮವನ್ನು ಮಾಡಬೇಕಾಗುತ್ತಿದೆ. ದಕ್ಕಾಗಿ ಪ್ರತಿ ಗ್ರಾಮದಲ್ಲಿ  ಬಯಲು ರಂಗ ಮಂದಿರ ನಿರ್ಮಿಸಬೇಕು ಎಂದರು.
ಸೇರಿರುವ ಜನರನ್ನ ನೋಡಿದರೆ ತುಂಬಾ ಸಂತೋಷವಾಗುತ್ತದೆ. ನಗರಗಳಲ್ಲಿ ಜನರನ್ನು ಸೇರಿಸುವುದೇ ಒಂದು ಸಮಸ್ಯೆ. ಆದಕಾರಣ ಇನ್ನು ಮುಂದೆ ಎಲ್ಲಾ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳು ಹಳ್ಳಿಗಳಲ್ಲಿ ನಡೆಯಲಿ ಎಂದರು.
ಕೊಟ್ಟೂರು ಸ್ವಾಮಿ  ಶಾಖಾ ಮಠದ ಬಸವಲಿಂಗ ಸ್ವಾಮಿಗಳು ಮಾತನಾಡಿ,  ಹಳ್ಳಿಗಳಲ್ಲಿ ಯಾವ ಬೇಧ ಭಾವ ಜಾತಿ ಅಸಮಾನತೆ ಇರುವುದಿಲ್ಲ. ಹಳ್ಳಿಯ ಜನ ಮುಗ್ಧರು ಕಲಾವಿದರನ್ನು ಪೋಷಿಸಿ ಬೆಳೆಸುತ್ತಾರೆಂದರು.
ಶ್ರೀಧರಗಡ್ಡೆ ಶಾಖಾ ಮಠದ ಮರಿಕೊಟ್ಟೂರ ದೇವರು, ಅಭಿನಯ ಕಲಾ ಕೇಂದ್ರದ ಅಧ್ಯಕ್ಷ ಕೆ. ಜಗದೀಶ್, ಕೂಡ್ಲಿಗಿ ಜ್ಯೋತಿ, ವೀರಯ್ಯಸ್ವಾಮಿ, ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು , ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೇಣುಕಾ ಭಾವಳ್ಳಿ ಅವರಿಂದ ರಂಗಗೀತೆಗಳು, ದೊಡ್ಡ ಬಸವ ಗವಾಯಿಗಳಿಂದ ವಚನ ಗಾಯನ, ಕೆ ಹೊನ್ನೂರ ಸ್ವಾಮಿ  ತಂಡದವರಿಂದ ತೊಗಲುಗೊಂಬೆ ಪ್ರದರ್ಶನ ನಡೆಯಿತು. ನಂತರ ದಕ್ಷಿಣ ಮೂರ್ತಿ ತಂಡದವರಿಂದ ವಿಶ್ವಗುರು ಬಸವಣ್ಣ ನಾಟಕ ಎಲ್ಲರನ್ನೂ ರಂಜಿಸಿ ಮಂತ್ರಮುಗ್ಧರನ್ನಾಗಿ ಮಾಡಿತು.  ದಾಸೋಹಿ ವೀರೇಶ ಸ್ವಾಮಿ ಸ್ವಾಗತಿಸಿ ನಿರೂಪಿಸಿದರು.