ಕೃಷಿಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರ ಸಾವು
(ಸಂಜೆವಾಣಿ ವಾರ್ತೆ)
ಜಗಳೂರು :- ತಾಲ್ಲೂಕಿನ ಅಸಗೋಡು ವಡ್ಡರಹಟ್ಟಿ ಗ್ರಾಮದಲ್ಲಿ ಜಮೀನಿನಲ್ಲಿ ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದು, ಮತ್ತೊಬ್ಬ ಬಾಲಕಿಯನ್ನು ರಕ್ಷಿಸಲಾಗಿದೆ.
ಗ್ರಾಮದ ಕೂಲಿ ಕಾರ್ಮಿಕರಾದ ತಿಮ್ಮಪ್ಪ ಅವರ ಪುತ್ರಿ ತನುಜಾ (೧೧), ರಾಮಚಂದ್ರಪ್ಪ ಅವರ ಪುತ್ರಿ ಗಂಗೋತ್ರಿ (೧೧) ಮೃತಪಟ್ಟವರು. ಮತ್ತೊಬ್ಬ ಬಾಲಕಿ ಖುಷಿ ನೀರಲ್ಲಿ ಮುಳುಗುತ್ತಿದ್ದಾಗ ಗ್ರಾಮಸ್ಥರು ರಕ್ಷಿಸಿದ್ದಾರೆ.ಶಾಲೆಯಿಂದ ಮನೆಗೆ ಮರಳಿದ್ದ ಈ ಬಾಲಕಿಯರು ಸಮೀಪದಲ್ಲೇ ಇದ್ದ ಜಮೀನೊಂದರಲ್ಲಿನ ಕೃಷಿ ಹೊಂಡದಲ್ಲಿ ಆಟವಾಡಲು ತೆರಳಿದ್ದರು.
ಕೃಷಿ ಹೊಂಡ ಭರ್ತಿಯಾಗಿತ್ತು. ಕೃಷಿ ಹೊಂಡದ ಮೇಲೆ ಕುಳಿತು ಆಟ ಆಡುತ್ತಿದ್ದಾಗ ಕಾಲು ಜಾರಿ ಮೂವರೂ ನೀರಲ್ಲಿ ಬಿದ್ದಿದ್ದಾರೆ.ಮಕ್ಕಳು ಕಿರುಚಿದಾಗ ಕೆರೆಯತ್ತ ಧಾವಿಸಿದ ಗ್ರಾಮಸ್ಥರು ಒಬ್ಬಳನ್ನು ಮಾತ್ರ ರಕ್ಷಿಸಿದ್ದಾರೆ.
ಅಷ್ಟು ಹೊತ್ತಿಗಾಗಲೇ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿದ್ದರು. ಪಾಲಕರು ಹೊಟ್ಟೆಪಾಡಿಗಾಗಿ ಗುಳೆ ಹೋಗಿದ್ದರಿಂದ ಈ ಬಾಲಕಿಯರು ಸಂಬಂಧಿಕರ ಮನೆಯಲ್ಲಿದ್ದರು ಎನ್ನಲಾಗಿದೆ.
.