ಬಬಲೇಶ್ವರದ ಶ್ರೀ ಗುರುಪಾದೇಶ್ವರ ಬೃಹನ್ಮಠದಲ್ಲಿ ವೀರವಿರಾಗಿಣಿ ಅಕ್ಕಮಹಾದೇವಿ ದೇವಸ್ಥಾನದ ಉದ್ಘಾಟನೆ
ವಿಜಯಪುರ,ಆ.15:ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಪ.ಪೂಜ್ಯ ವಚನಾನಂದ ಅವರಿಂದ ಬಬಲೇಶ್ವರದ ಶ್ರೀ ಗುರುಪಾದೇಶ್ವರ ಬ್ರಹನ್ಮಠದಲ್ಲಿ ವೀರ ವಿರಾಗಿಣಿ ದೇವಸ್ಥಾನದ ಉದ್ಘಾಟನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಪೂಜ್ಯ ವಚನಾನಂದ ಶ್ರೀಗಳು ಮಾತನಾಡಿ, ಅಕ್ಕಮಹಾದೇವಿ ಮಹಾಯೋಗಿಣಿಯಾಗಿ ಕವಿಯತ್ರಿಯಾಗಿ ತಪಸ್ಸುಗೈದು ಶ್ರೀ ಚೆನ್ನಮಲ್ಲಿಕಾರ್ಜುನನ್ನು ಒಲಿಸಿಕೊಂಡಳು. ನಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ಆರೋಗ್ಯವಂತ ದೇಹ ಮನಸ್ಸನ್ನು ಪಡೆಯಬಹುದೆಂದು ಹೇಳಿ ಎಲ್ಲರಿಗೂ ಯೋಗ ಹೇಳಿಕೊಟ್ಟರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಅಲಗೂರ ಪಂಚಮಸಾಲಿ ಪೀಠದ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಜನರು ಅಧ್ಯಾತ್ಮದತ್ತ ಒಲವು ಕಡಿಮೆಯಾಗಿದೆ. ನಾವು ಧರ್ಮದಿಂದ ನಡೆದಾಗ ಮಾತ್ರ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ. ಶ್ರೀಮಠದಲ್ಲಿ ಅಕ್ಕಮಹಾದೇವಿ ದೇವಸ್ಥಾನ ಲೋಕಾರ್ಪಣೆಗೊಂಡಿದೆ. ಶ್ರದ್ದೆ, ಭಕ್ತಿಯಿಂದ ದೇವರನ್ನು ಕಾಣಲು ಸಾಧ್ಯ ಎಂದು ಹೇಳಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಇಂಥಹ ಪುಣ್ಯಮಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಪುಣ್ಯ ಎಂದು ನುಡಿದರು.
ವಿಜಯಪುರದ ಜ್ಞಾನ ಯೋಗಾಶ್ರಮದ ಪ.ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು ಹಾಗೂ ಬುರಣಾಪುರದ ಪೂಜ್ಯ ಶ್ರೀ ಯೋಗೇಶ್ವರಿ ಮಾತಾ ಸಾನ್ನಿಧ್ಯ ವಹಿಸಿದ್ದರು.
ಗ್ರಾಮದ ಸದ್ಭಕ್ತರು ಶ್ರೀ ಮಠದಲ್ಲಿ ಭಕ್ತರ ಅನುಕೂಲಕ್ಕಾಗಿ 1 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ಮಂಗಲ ಭವನಕ್ಕೆ ಮನವಿ ಅರ್ಪಿಸಿದರು. ಸಂಸದರು ಸರ್ಕಾರದ ನಿಧಿಯಲ್ಲಿ ಹಣ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಲೀಲಾದೇವಿ ಆರ್. ಪ್ರಸಾದರವರು ಮಾತನಾಡಿ, ನಾನು ಅಕ್ಕಮಹಾದೇವಿ ಜನ್ಮಸ್ಥಳದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದಾಗಿ ತಿಳಿಸಿ ತಾಳಗುಪ್ಪ ಬೆಂಗಳೂರು ಇಂಟರ್ಸಿಟಿ ಎಕ್ಸಪ್ರೆಸ್ ರೈಲಿಗೆ ಶ್ರೀ ಅಕ್ಕಮಹಾದೇವಿ ಹೆಸರಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು.
ಅಕ್ಕಮಹಾದೇವಿಯ ಜೀವನ ಚರಿತ್ರೆಯ ಸುಮಾರು 500 ಪುಟಗಳ ಸಮಗ್ರ ಸಂಪುಟವನ್ನು ರಚಿಸಿದ್ದೇನೆ. ಆ ಗ್ರಂಥವನ್ನು ಪಿ.ಎಚ್.ಡಿ. ಕಲಿಯುವ ವಿದ್ಯಾರ್ಥಿಗಳಿಗಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕಳಿಸಿಕೊಟ್ಟು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ನುಡಿದರು.
ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ, ನಮಗೂ ಶ್ರೀಮಠಕ್ಕೂ ಅವಿನಾಭಾವ ಸಂಬಂಧವಿದೆ. ಗುರುಗಳ ಅಶೀರ್ವಾದ ನಮ್ಮ ಮೇಲಿದೆ. ಪೂಜ್ಯರ ಅನುಮತಿಯಂತೆ ಶ್ರೀಮಠದ ಅಭಿವೃದ್ದಿಗೆ ಶ್ರಮಿಸುವುದಾಗಿ ನುಡಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಕುಲಪತಿ ಬಿ.ಕೆ. ತುಳಸಿಮಾಲಾ ಅವರು ಮಾತನಾಡಿ, ಅಕ್ಕನಬಳಗದ ಎಲ್ಲ ಮಹಿಳೆಯರು ಸೇರಿ ಅಕ್ಕಮಹಾದೇವಿ ದೇವಸ್ಥಾನ ನಿರ್ಮಿಸಿದ್ದು ಪ್ರಶಂಸನೀಯ. ಮಹಿಳೆಯರು ಉನ್ನತ ವ್ಯಾಸಂಗದಿಂದ ವಂಚಿತರಾಗಬಾರದೆಂದು ವಿಶ್ವವಿದ್ಯಾಲಯ ತೆರೆದಿದೆ. ತಾವೆಲ್ಲ ಅದರ ಸದುಪಯೋಗ ಪಡೆದುಕೊಳ್ಳಬೇಕು. ಮಹಿಳಾ ವಿಶ್ವವಿದ್ಯಾನಿಲಯವನ್ನು ಅಂತರಾಷ್ಟ್ರಿಯ ವಿಶ್ವವಿದ್ಯಾನಿಲಯದ ಮಟ್ಟಿಗೆ ತೆಗೆದುಕೊಂಡು ಹೋಗುವಲ್ಲಿ ಸತತ ಪ್ರಯತ್ನಿಸುವುದಾಗಿ ತಿಳಿಸಿದರು.
ಜಿ.ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ದೇವಸ್ಥಾನಕ್ಕೆ ದೇಣಿಗೆ ಸಲ್ಲಿಸಿದರು.
ವೇದಿಕೆಯ ಮೇಲೆ ಬಿ.ಎಲ್.ಡಿ.ಇ. ನಿರ್ದೇಶಕÀ ವಿ.ಎಸ್. ಪಾಟೀಲ, ವಿಜುಗೌಡ ಪಾಟೀಲ ಇದ್ದರು. ನಿವೃತ್ತ ವೈದ್ಯಾಧಿಕಾರಿ ಡಾ. ಜಿ.ಆರ್. ತಮಗೊಂಡ ದೇವಸ್ಥಾನಕ್ಕೆ ಪರಸಿ ಹಾಗೂ ಸ್ಟೀಲ್‍ಗ್ರಿಲ್ ಕೊಡಿಸಿದರು. ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ವಿವಿಧ ಸೇವೆ ಸಲ್ಲಿಸಿದ ಭಕ್ತರನ್ನು ಸನ್ಮಾನಿಸಲಾಯಿತು.
ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಎಸ್. ಬಿರಾದಾರ, ನೇತ್ರ ತಜ್ಞ ಡಾ. ಸುನೀಲ ಬಿರಾದಾರ, ಬನುದೇವಿ ಅವರಾದಿ, ಬಸವರಾಜ ಯಾದವಾಡ, ಮಲ್ಲನಗೌಡ ಗೌಡಪ್ಪಗೋಳ, ನೀಲಮ್ಮಗೌಡತಿ ಬಿರಾದಾರ, ನೀಲಾಬಾಯಿ ದೊಡಕಟ್ಟಿ, ಶಾಂತಾಬಾಯಿ ಗೌಡಪ್ಪಗೋಳ, ಕಸ್ತೂರಿ ಜಂಗಮಶೆಟ್ಟಿ, ರಾಜೇಂದ್ರ ಜಗದಾಳ, ಮಹಾದೇವಪ್ಪ ಕೊಕರೆ, ಸಚಿನ ಕರ್ಕಿ, ಕಸ್ತೂರಿಬಾಯಿ ಪಾಟೀಲ, ಗುರನಗೌಡ ಬಾಯಕ್ಕಗೋಳ, ಸುಶೀಲಾಬಾಯಿ ಪಾಟೀಲ, ಶಾಂತಾಬಾಯಿ ಪಾಟೀಲ, ಗಂಗಾಬಾಯಿ ಶಿರಗುಪ್ಪಿ, ಶಂಕರಗೌಡ ಬಿರಾದಾರ, ಕಸ್ತೂರಿಬಾಯಿ ಕುಳಲಿ, ಶಿವಾನಂದ ತೆಗ್ಗಿ, ಈರಯ್ಯ ಹಿರೇಮಠ ಉಪಸ್ಥಿತರಿದ್ದರು.
ಬಸನಗೌಡ ಬಿರಾದಾರ ಸ್ವಾಗತಿಸಿದರು. ಈರಣ್ಣ ಶಿರಮಗೊಂಡ ನಿರೂಪಿಸಿದರು. ಗಿರೀಶ ಹಿರೇಮಠ ವಂದಿಸಿದರು.