ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ‘ಎಕ್ ಪೆಡ್ ಮಾ ಕೇ ನಾಮ್ ಅಭಿಯಾನ’
ಬೀದರ : ಆ.15: ಡಿ.ಜಿ ಎನ್.ಸಿ.ಸಿ ಹಾಗೂ ಸಿ.ಓ. 32ನೇ ಕರ್ನಾಟಕ ಬೆಟಾಲಿಯನ್ ನಿರ್ದೇಶನದ ಮೇರೆಗೆ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಬೀದರ ಆರ್ಮಿ ಎನ್.ಸಿ.ಸಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಜೂನ್ ತಿಂಗಳಿಂದ ಆಗಸ್ಟ್ 15 ರವರೆಗೆ ‘ಏಕ್ ಪೆಡ್ ಮಾ ಕೆ ನಾಮ್’ ( ತಾಯಿಯ ಹೆಸರಲ್ಲಿ ಒಂದು ವೃಕ್ಷ ) ಅಭಿಯಾನ – 2024 ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ಮೊದಲಿಗೆ ವಿಶ್ವ ಪರಿಸರ ದಿನ 5ನೇ ಜೂನರಂದು ಎಚ್.ಕೆ. ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬಿ.ವಿ ಭೂಮರಡ್ಡಿ ಮಹಾವಿದ್ಯಾಲಯ ಆವರಣದ ಶಾಲಾ ಕಾಲೇಜುಗಳ ಸಂಯೋಜಕರಾದ ಡಾ. ರಜನೀಶ ವಾಲಿಯವರು ಸಸಿ ನೆಡುವುದರ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಅಭಿಯಾನದ ಕುರಿತು ಪ್ರಾಚಾರ್ಯರಾದ ಡಾ.ಮೇಜರ್ ಪಿ. ವಿಠ್ಠಲ ರೆಡ್ಡಿ ಅವರು ಮಾತನಾಡಿ “ಏಕ್ ಪೆಡ್ ಮಾ ಕೆ ನಾಮ್” ಅಂದರೆ ತಮ್ಮ ತಾಯಿ ಹಾಗೂ ತಾಯಿ ಭಾರತಾಂಬೆಯ ಹೆಸರಿನಲ್ಲಿ ಪ್ರತಿಯೊಬ್ಬ ಕೆಡೆಟ್ ಹಾಗೂ ವಿದ್ಯಾರ್ಥಿಯು ಸಸಿ ನೆಡುವುದು ಈ ಅಭಿಯಾನದ ಉದ್ದೇಶವಾಗಿದೆ. ಜಾಗತಿಕ ತಾಪಮಾನದಿಂದ ತತ್ತರಿಸಿರುವ ಜಗತ್ತನ್ನು ತಂಪುಗೊಳಿಸಿ ಪ್ರತಿಯೊಬ್ಬರಿಗೂ ಶುದ್ಧವಾದ ಪ್ರಾಣವಾಯು ದೊರಕುವಂತೆ ಮಾಡುವುದು ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ ಇಂದಿನ ದಿನಮಾನಗಳಲ್ಲಿ ಆರೋಗ್ಯಕರ ಬದುಕನ್ನು ನಡೆಸಲು ಉತ್ತಮ ಜೀವನ ಶೆ?ಲಿಯೊಂದಿಗೆ ಸ್ವಚ್ಚ ಹಾಗೂ ಉತ್ತಮ ಪರಿಸರ ಅತಿ ಅಗತ್ಯವಾಗಿದ್ದು,ಅದಕ್ಕಾಗಿ ನಾವು ಮರ ಗಿಡಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಮೂಲಕ ಪ್ರಕೃತಿಗೆ ನಮ್ಮ ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಅಲ್ಲದೆ ಇಲ್ಲಿಯವರೆಗೆ ವಿಶ್ವ ಪರಿಸರ ದಿನದಂದು 50 ಸಸಿಗಳು, ಕಾರ್ಗಿಲ್ ವಿಜಯೋತ್ಸವ ದಿವಸ್ ಆಚರಣೆಯಂದು 25 ಸಸಿಗಳು, ಹೆ.ಕೆ.ಇ ಸಂಸ್ಥೆಯ ಸಂಸ್ಥಾಪಕರಾದ ಶಿಕ್ಷಣ ಧುರೀಣ ದಿವಂಗತ ಮಹದೇವಪ್ಪ ರಾಂಪುರೆಯವರ ಜನ್ಮ ದಿನದಂದು 113 ಸಸಿಗಳು ಹಾಗೂ ಒಂದು ಕೆಡೆಟ್ ಒಂದು ವೃಕ್ಷ ಧ್ಯೇಯ ವಾಕ್ಯದಡಿ 100 ಸಸಿಗಳು (ಒನ್ ಕೆಡೆಟ್ ಒನ್ ಪ್ಲಾಂಟ್) ಹೀಗೆ ಒಟ್ಟು ಮಹಾವಿದ್ಯಾಲಯದ ಆವರಣದಲ್ಲಿ ಸುಮಾರು 300 ಸಸಿಗಳನ್ನು ನೆಡಲಾಗಿದೆ ಹಾಗೂ ಎನ್. ಸಿ.ಸಿ ಯ ಕೆಡೆಟ್ ಗಳು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸಸಿಗಳನ್ನು ನೆಡುವಂತೆ ಸೂಚಿಸಿ ಸುಮಾರು 100 ಸಸಿಗಳನ್ನು ವಿತರಿಸಲಾಯಿತು. ಇದಲ್ಲದೆ ಕರ್ನಾಟಕ ಮಹಾವಿದ್ಯಾಲಯದಲ್ಲಿ 100 ಸಸಿಗಳು, ಕರ್ನಾಟಕ ಪ್ರೌಢ ಶಾಲೆಯಲ್ಲಿ 100 ಸಸಿಗಳು, ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ 25 ಸಸಿಗಳು, ಭಾಲ್ಕಿಯ ಶಿವಾಜಿ ಕಾಲೇಜಿನಲ್ಲಿ 50 ಸಸಿಗಳು, ಸಿ. ಬಿ. ಕಾಲೇಜಿನಲ್ಲಿ 50 ಸಸಿಗಳು, ಹುಮನಾಬಾದನ ಮಾಣಿಕ ಪ್ರಭು ಪಬ್ಲಿಕ್ ಶಾಲೆಯಲ್ಲಿ 100 ಸಸಿಗಳು ಹೀಗೆ ಸುಮಾರು ಒಂದು ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಅಭಿಯಾನದ ಕಾರ್ಯಕ್ರಮದಲ್ಲಿ ಬಿ.ವಿ.ಬಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಶ್ರೀ ಅನಿಲಕುಮಾರ ಆಣದೂರೆ, ಎನ್.ಸಿ.ಸಿ ಅಧಿಕಾರಿ ಮಾರುತಿ.ಬಿ, ಕರ್ನಾಟಕ ಮಹಾವಿದ್ಯಾಲಯದ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಅಶ್ವಿನ್ ಚವ್ಹಾಣ, ಕರ್ನಾಟಕ ಪ್ರೌಢ ಶಾಲೆಯ ಎನ್.ಸಿ.ಸಿ ಉನ್ನತ ಅಧಿಕಾರಿ ಶ್ರೀ ಮೊಹ್ಮದ್ ರಫಿ ಹಾಗೂ ಎನ್.ಸಿ.ಸಿ ಕೆಡೆಟ್ಸ್ , ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸಿದರು.