ಬೀದರ್ ನಾಗರಿಕ ವಿಮಾನಯಾನ ಪುನರಾರಂಭಕ್ಕೆ ಕ್ರಮ:ಈಶ್ವರ್ ಖಂಡ್ರೆ
ಬೀದರ್:ಆ.15: ಕಳೆದ ಎಳೆಂಟು ತಿಂಗಳಿಂದ ಬಂದ್ ಆಗಿರುವ ನಾಗರಿಕ ವಿಮಾನಯಾನ ಪುನರಾರಂಭಿಸಲು ಈಗಾಗಲೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಭಾರಿ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ ಅವರೊಂದಿಗೆ ಮಾತುಕತೆ ನಡೆಸಲಾಗಿದ್ಧು ಆದಷ್ಟು ಶೀಘ್ರ ವಿಮಾನಯಾನ ಆರಂಭಿಸಲಾಗುವದು ಎಂದು ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಹೇಳಿದರು.
ಇಂದು ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿಗಳ ಸಹಯೋಗದಲ್ಲಿ ಜರುಗಿದ 78ನೇ ಸ್ವತಂತ್ರ ದಿನಾಚರಣೆ ನಿಮಿತ್ಯ ರಾಷ್ಟ್ರ ಧ್ವಜಾರೊಹಣ ನೆರವೇರಿಸಿ ಮಾತನಾಡಿರುವ ಅವರು, ಕಳೆದ ಆಯವ್ಯಯದಲ್ಲಿ ಮಂಡಿಸಲಾದ ಬೀದರ್ ಜಿಲ್ಲಾ ಸಂಕೀರ್ಣ ಕಟ್ಟಡ ಕಾಮಗಾರಿಗೆ 75 ಕೋಟಿ ಅನುದಾನದ ಪ್ರಸ್ತಾವನೆ 15 ದಿನಗಳೊಳಗೆ ಸಚಿವ ಸಂಪುಟದ ಮುಂದೆ ಬರಲಿದ್ದು ಆಕ್ಟೊಬರ್ ತಿಂಗಳಲ್ಲಿ ಕಾಮಗಾರಿ ಆರಂಭಿಸಲು ಚಿಂತಿಸಲಾಗಿದ್ದು, ಡಿಸೆಂಬರ್ 2025ರೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದಾಗಿ ಭರವಸೆ ನೀಡಿದರು.ಬಸವಕಲ್ಯಾಣ ಅನುಭವ ಮಂಟಪದ ಕಾಮಗಾರಿಗೆ ಈಗಾಗಲೆ 100 ಕೋಟಿ ಅನುದಾನ ಮಂಜೂರಿಯಾಗಿದ್ದು, ಈಗಾಗಲೆ 70 ಕೋಟಿ ಕಾಮಗಾರಿ ಮುಗಿದಿದೆ. ಉಳಿದ 30 ಕೋಟಿ ಕಾಮಗಾರಿ ಸಹ 2025 ಡಿಸೆಂಬರ್ ಒಳಗೆ ಪೂರ್ಣಗೊಳಿಸಲಾಗುವುದೆಂದು ತಿಳಿಸಿದರು.
ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ ವಹಿಸಲಾಗುವುದು. ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಕ್ರಮ ಜೊತೆಗೆ ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್ ತರಬೇತಿಗಾಗಿ ಉತ್ತೇಜನ ನೀಡುವುದಾಗಿ ಖಂಡ್ರೆ ಹೇಳಿದರು.
ಜಿಲ್ಲೆಯಲ್ಲಿ 2024ನೇ ಮಳೆಗಾಲದಲ್ಲಿ 20 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದ್ದು, ಈಗಾಗಲೇ 5 ಲಕ್ಷ ಸಸಿಗಳನ್ನು ಜಿಲ್ಲೆಯ ವಿವಿಧ ಅರಣ್ಯ ಮತ್ತು ಅರಣ್ಯೇತರ ಪ್ರದೇಶಗಳಲ್ಲಿ ನೆಡಲಾಗಿರುತ್ತದೆ2023.24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963 ರನ್ವಯ ಒಟ್ಟು 815 ಎಕರೆ ಒತ್ತುವರಿಯಾದ ಅರಣ್ಯ ಪ್ರದೇಶವನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ.
ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಮಾಲಿನ್ಯ ತಡೆಗಟ್ಟಲು ಕ್ರಮ ವಹಿಸಲಾಗಿದೆ. ಹೆಚ್ಚಿನ ವಾಯು ಮಾಲಿನ್ಯ ಉಂಟು ಮಾಡುವ 8 ಪೈರೋಲಿಸಿಸ್ ಘಟಕಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಇನ್ನು ಜೀವಿಶಾಸ್ತ್ರ ಇಲಾಖೆಯ ಅಡಿಯಲ್ಲಿ ಬೀದರ್ ಜಿಲ್ಲೆಯಲ್ಲಿರುವ ವಿಶಿಷ್ಟ ಮತ್ತು ಅಪರೂಪದ ಸಸ್ಯ ಪ್ರಭೇದ, ಜೀವಿ ಪ್ರಭೇದಗಳ ಅಧ್ಯಯನಕ್ಕೂ ಸೂಚನೆ ನೀಡಲಾಗಿದೆ ಎಂದರು.
ಜಲ ಜೀವನ ಮಿಷನ್ ಯೋಜನೆಯು ರಾಜ್ಯದಲ್ಲಿ ಮನೆ ಮನೆಗೆ ಗಂಗೆ ಎಂಬ ಹೆಸರಿನಲ್ಲಿ ಅನುಷ್ಠಾನಗೊಳಿಸಲಾಗಿದೆ. ಬೀದರ ಜಿಲ್ಲೆಯಲ್ಲಿ ಒಟ್ಟು 883 ಜನ ವಸತಿಗಳಿಗೆ ಅಂದಾಜು ರೂ. 892.22 ಕೋಟಿಗಳ ಯೋಜನೆಯಲ್ಲಿ ಓಟ್ಟು3.14 ಲಕ್ಷ ಕಾರ್ಯಾತ್ಮಕ ನಳ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. . ಜೆ.ಜೆ.ಎಮ್. ಯೋಜನೆಯಡಿ ಜಿಲ್ಲೆಯಲ್ಲಿ ಒಟು 9 ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ರೂ. 729.74 ಕೋಟಿಗಳಿಗೆ ಅನುಮೋದನೆಗೊಂಡಿರುತ್ತವೆ. ಈ ಯೋಜನೆಗಳಿಂದ ಜಿಲ್ಲೆಯ ಸುಮಾರು 362 ಜನವಸತಿಗಳಿಗೆ ಒಟ್ಟು 6.24 ಲಕ್ಷ ಫಲಾನುಭವಿಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸಲಾಗುವುದು.
2020-21 ಹಾಗೂ 2022-23ನೇ ಸಾಲಿನಲ್ಲಿ ಬೀದರ ಜಿಲ್ಲೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ-3ರಡಿ ಒಟ್ಟು 189.06 ಕಿ.ಮೀ ಉದ್ದದ 35 ರಸ್ತೆಗಳು ಅಭಿವೃಧ್ಧಿಪಡಿಸಲು ರೂ. 135.73 ಕೋಟಿಗಳ ಅನುದಾನ ಹಂಚಿಕೆಯಾಗಿರುತ್ತದೆ. ಪ್ರಸ್ತುತದವರೆಗೆ 27 ಕಾಮಗಾರಿಗಳು ಪೂರ್ಣಗೊಳಿಸಿ 142.66 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃಧ್ಧಿಪಡಿಸಲಾಗಿದೆ.
ಇದಕ್ಕೂ ಮೊದಲು ವಿವಿಧ ಏಳು ತುಕಡಿಗಳಿಂದ ಪರೆಡ್ ವಂದನೆ ಸ್ವೀಕರಿಸಿದರು. ಸ್ಥಳಿಯ ಶಾಸಕರು ಹಾಗೂ ರಾಜ್ಯದ ಪೌರಾಡಳಿತ ಸಚಿವ ರಹಿಮ್ ಖಾನ್, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ಎಂ.ಜಿ ಮೂಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರ ಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಸಿಇಒ ಗಿರೀಶ ಬದೋಲೆ, ಎಸ್.ಪಿ ಪ್ರದೀಪ ಗುಂಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.