ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶಜಿಲ್ಲೆಯ ಅಭಿವೃದ್ಧಿಗೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ: ಸಚಿವ ಜಮೀರ್
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ) ಆ15: ಶಾಸಕಾಂಗದ ಜೊತೆ ಕಾಯಾರ್ಂಗವು ಕೈ ಜೋಡಿಸಿದರೆ ಮಾತ್ರ ದೇಶ, ರಾಜ್ಯ, ಜಿಲ್ಲೆಯ ಅಭಿವೃದ್ಧಿ ಸಾದ್ಯ, ಎಲ್ಲಾ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಅಭಿವೃದ್ಧಿಗಾಗಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಝೆಡ್ ಜಮೀರ್ ಅಹ್ಮದ್ ಖಾನ್ ಅವರು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಬುಧುವಾರ ನಡೆದ ವಿಜಯನಗರ ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅನ್ನಭಾಗ್ಯ ಯೋಜನೆಯ ಬಗ್ಗೆ ಮಾಹಿತಿ ಕೇಳಿದ ಅವರು ಸಾರ್ವಜನಿಕರಿಗೆ ಸರಿಯಾಗಿ ಪಡಿತರ ಸಿಗುತ್ತಿದೆಯಾ? ಪಟಿತರ ಕಳ್ಳ ಸಾಗಾಣಿಕೆಯ ಬಗ್ಗೆ ಬಹಳ ದೂರುಗಳು ಬರುತ್ತಿವೆ ಅದರ ಬಗ್ಗೆ ಸರಿಯಾದ ನಿಗವಹಿಸಿ ಎಂದರು.
ಗೃಹ ಜ್ಯೋತಿ ಯೋಜನೆ ಪ್ರಗತಿಯ ವಿವರಗಳನ್ನು ಕೇಳಿದರು. ಯೋಜನೆಯಡಿ ನೊಂದಾಯಿಸಿದ ಫಲಾನುಭವಿಗಳಲ್ಲಿ 90% ಪ್ರಗತಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದರು. ಗೃಹಲಕ್ಷೀ ಯೋಜನೆಯ ಹಣ ಸರಿಯಾಗಿ ಜನರಿಗೆ ತಲುಪಿಸಿ, ಎಷ್ಟು ತಿಂಗಳು ಕಂತು ಬಾಕಿ ಇದೆ? ಮೂರು ನಾಲ್ಕು ತಿಂಗಳಿಂದ ಗೃಹ ಲಕ್ಷ್ನೀ ಹಣವೇ ಬಂದಿಲ್ಲ ಎನ್ನುವ ಬಹಳ ದೂರುಗಳು ಬಂದಿವೆ, ಜನಸಾಮನ್ಯರು ಬಹಳ ನೀರಿಕ್ಷೆ ಇಟ್ಟುಕೊಂಡಿದ್ದಾರೆ ಅವರಿಗೆ ಸರಿಯಾಗಿ ಹಣ ತಲುಪಿಸುತ್ತಿದ್ದಿರಾ ಎಂದು ಸಚಿವರು ಪ್ರಶ್ನಿಸಿದರು.
ಈಗಾಗಲೇ ಹಣ ಜಮೆ ಮಾಡಲಾಗುತ್ತಿದೆ. ಏಪ್ರಿಲ್ ಮೇ ಜೂನ್ ಜುಲೈ ಗೃಹಲಕ್ಷ್ಮೀ ಯೋಜನೆ ಹಣ ಬರಬೇಕು. ಖಜಾನೆಯಲ್ಲಿ ಹಣ ಇದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕಿದೆ ಎಂಬ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ನೀಡಿದರು.
ಗ್ಯಾರಂಟಿ ಯೋಜನೆ ವಿವರಣೆ:
ಕೃಷಿ ಇಲಾಖೆ ಎಷ್ಟು ಪ್ರದೇಶದಲ್ಲಿ ಬೆಳೆ ರೈತರು ಬೆಳೆದಿದ್ದಾರೆ, ರೈತರಿಗೆ ಸರಿಯಾಗಿ ಗೊಬ್ಬರ, ಬೀಜಗಳನ್ನು ತಲುಪಿಸಬೇಕು. ತೋಟಗಾರಿಕೆ ಇಲಾಖೆಯಲ್ಲಿ ಚೆಂಡುಹೂ, ಸೇವಂತಿಗೆ ಹೂಗಳಿಗೆ ಸಹ ಬೆಳೆ ಪರಿಹಾರ ನೀಡಿಬೇಕು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದಲ್ಲಿ ಅದನ್ನು ಸರಿ ಪಡಿಸಿಕೊಳ್ಳಿ. ಪಶುಸಂಗೋಪನೆ ಇಲಾಖೆಯಲ್ಲಿರುವ ವಿವಿಧ ಯೋಜನೆಗಳ ಸೌಲಭ್ಯಗಳು ಜನರಿಗೆ ಸಿಗುವಂತೆ ಮಾಡಬೇಕು. ಕುರಿಗಳು ಸತ್ತ ಸ್ಥಳದಲ್ಲಿ ಅಧಿಕಾರಿಗಳು ನೇರವಾಗಿ ಹೋಗಿ ಪರಿಶೀಲಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಕುರಿ ಸತ್ತರೆ 5 ಸಾವಿರ ಪರಿಹಾರ ಇದೆ ಅದನ್ನು ಕುರಿಗಾಹಿಗಳಿಗೆ ಸರಿಯಾಗಿ ತಲುಪಿಸಿ ಎಂದು ಸೂಚಿಸಿದರು.
ಸಂಸದರಾದ ಇ.ತುಕಾರಾಂ ಅವರು ಮಾತನಾಡಿ, ಅಧಿಕಾರಿಗಳು ತಿಂಗಳಿಗೊಮ್ಮೆ ಶಾಸಕರನ್ನ ಭೇಟಿ ಮಾಡಿ ಏನಾದರು ಸಮಸ್ಯೆ ಇದ್ದರೆ ಚರ್ಚೆ ಮಾಡಿ ಪರಿಹರಿಸಿಕೊಳ್ಳಬೇಕು. ಗ್ರಾಮ ಪಂಚಾಯತಿ ಪಿ.ಡಿ.ಒಗಳು ಇನ್ನುಮುಂದೆ ಡೈರಿಗಳನ್ನು ನಿರ್ವಹಣೆ ಮಾಡಬೇಕು. ಎರಡು ಪಂಚಾಯತಿಗೆ ಕೆಲಸ ಮಾಡುವಾಗ ಪಂಚತಂತ್ರ-2 ನಲ್ಲಿ ಕಡ್ಡಾಯವಾಗಿ ಹಾಜರಾತಿ ಹಾಕಬೇಕು. ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಮೂಲಭೂತ ಸೌಕರ್ಯಗಳು ದೊರೆಯುಂತೆ ಮಾಡಬೇಕು.
ಜಿಲ್ಲೆಯ ಎಸ್‍ಎಸ್‍ಎಲ್‍ಸಿಯ ಪಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ವಹಿಸಿ.
ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸಿದ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯ ದೊರೆಯುವಂತೆ ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಬ್ರೋಕರ್‍ಗಳಿಗೆ ಬ್ರೇಕ್ ಹಾಕಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಶಾಸಕರುಗಳಾದ ಹೆಚ್.ಆರ್. ಗವಿಯಪ್ಪ, ನೇಮಿರಾಜ ನಾಯ್ಕ, ಡಾ.ಶ್ರೀನಿವಾಸ, ಕೃಷ್ಣಾ ನಾಯ್ಕ, ಎಂ.ಪಿ.ಲತಾ ಮಲ್ಲಿಕಾರ್ಜುನ, ಎಲ್.ಕೃಷ್ಣನಾಯ್ಕ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಧ್ಯಕ್ಷರಾದ ಎಸ್.ಆರ್ ಮನೋಹರ್ ರಾವ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ನವೀನ್‍ರಾಜ್ ಸಿಂಗ್, ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ, ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೊಂಗ್ಜಾಯ್ ಮೊಹಮ್ಮದ್ ಅಕ್ರಮ ಅಲಿ, ಜಿಲ್ಲಾ ಪೋಲೀಸ್ ವಿಶಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್., ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅರ್ಸಲನ್ ಹಾಗೂ ವಿವಿಧ ತಾಲ್ಲೂಕುಗಳ ತಹಶಿಲ್ದಾರರು, ತಾಪಂ ಇಓಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.