ಬೋಧಕರ ಗಮನ ಬೋಧನೆ ಕಡೆಯಿರಲಿ
ಬೀದರ:ಆ.15:2025ರ ಮಾರ್ಚನಲ್ಲಿ ಜರಗುವ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶ ವೃದ್ಧಿಸಬೇಕಾದರೆ ಬೋಧನೆ ಮಾಡುವ ಬೋಧಕರ ಗಮನ ಸಂಪೂರ್ಣವಾಗಿ ವಿದ್ಯಾರ್ಥಿಗಳ ಕಡೆ ಕೇಂದ್ರಿಕೃತವಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಬೀದರ ಉಪನಿರ್ದೇಶಕ ಚಂದ್ರಕಾಂತ ಶಾಹಾಬಾದಕರ ಹೇಳಿದರು.
ನಗರದ ಗುರುನಾನಕ ಪಿಯು ಕಾಲೇಜಿನಲ್ಲಿ ಕರೆದ ಜಿಲ್ಲಾ ಪ್ರಾಚಾರ್ಯರ ಸಭೆಯಲ್ಲಿ ಪಿಯು ಕ್ರೋಢಿಕೃತ ಪರೀಕ್ಷೆ ಅಂಕವಹಿ ಬಿಡುಗಡೆಗೊಳಿಸಿ ಮಾತನಾಡಿದರು.
ಪಿಯು ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅತ್ಯುಪಯುಕ್ತ ಮತ್ತು ಪರಿಣಾಮಕಾರಿಯಾಗಿದೆ.ಪರೀಕ್ಷೆಗಳು ವೆಬ್‍ಕಾಸ್ಟಿಂಗ್ ಅಡಿಯಲ್ಲಿ ನಡೆಯುತ್ತಿರುವುದರಿಂದ ಈಗಿನಿಂದಲೇ ಮಕ್ಕಳಿಗೆ ಗುಣಮಟ್ಟದ ಪಾಠ ಮಾಡಬೇಕಾಗುತ್ತದೆ.ಪರೀಕ್ಷೆ ಕೇಂದ್ರದವರು ಅಗತ್ಯ ಸಕಲ ಸೌಲಭ್ಯ ಹೊಂದಿರಬೇಕು.ಪ್ರತಿ ವರ್ಷ ಸರ್ಕಾರಿ ಮತ್ತು ಅನುದಾನಿತ ಕಾಲೇಜಿನವರ ಫಲಿತಾಂಶ ಕುಗ್ಗುತ್ತಿರುವುದು ಬೇಸರದ ಸಂಗತಿಯಾಗಿದೆ.ವಿನೂತನ ಯೋಜನೆ ಮೂಲಕ ಫಲಿತಾಂಶ ಸುಧಾರಿಸಲು ಪ್ರಯತ್ನಿಸಬೇಕು .ಮಕ್ಕಳಿಂದ ಸಂಗ್ರಹಿಸಿದ ಶುಲ್ಕಗಳನ್ನು ನಿಗದಿತ ಅವಧಿಯಲ್ಲಿ ಇಲಾಖೆಗೆ ಪಾವತಿಸಬೇಕು.ಪ್ರವೇಶ ಪಡೆದ ಮಕ್ಕಳ ಮಾಹಿತಿ ಸ್ಯಾಟ್ಸ್‍ನಲ್ಲಿ ಅಪಡೇಟ್ ಮಾಡಬೇಕು .ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ಸಂಘ ಸ್ಥಾಪಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸುರೇಶ ಅಕ್ಕಣ್ಣ ಮಾತನಾಡಿ,ಸಂಘದಿಂದ ಸಿದ್ಧಪಡಿಸಿದ ಕ್ರೋಢಿಕ್ರತ್ ಅಂಕವಹಿಯಲ್ಲಿ ತ್ರೈಮಾಸಿಕ,ಅರ್ಧವಾಸಿಕ ಮತ್ತು ವಾರ್ಷಿಕ ಪರೀಕ್ಷೆಯ ಅಂಕಗಳನ್ನು ನೀಟಾಗಿ ನಮೂದಿಸಬೇಕು.ಪರೀಕ್ಷೆ ಸುಧಾರಣೆಗಾಗಿ ಜಿಲ್ಲಾ ಮಟ್ಟದಲ್ಲಿ ಎಲ್ಲ ವಿಷಯಗಳ ಕಾರ್ಯಾಗಾರ ಹಮ್ಮಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಕಾಲೇಜಿನಲ್ಲಿ ಎಲೆಕ್ಟ್ರಾಲ್ ಲೀಟರಸಿ ಕ್ಲಬ್ (ಇಎಲ್‍ಸಿ) ಸ್ಥಾಪನೆ ಕುರಿತು ಜಿಲ್ಲಾ ನೋಡಲ್ ಅಧಿಕಾರಿ ಚಂದ್ರಕಾಂತ ಗಂಗಶೆಟ್ಟಿ ವಿವರವಾದ ಮಾಹಿತಿ ನೀಡಿದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಮನ್ಮತ ಡೋಳೆ ಸ್ವಾಗತಿಸಿದರು.ಸಂಘದ ಉಪಾಧ್ಯಕ್ಷ ಅಶೋಕ ರಾಜೋಳೆ ನಿರೂಪಿಸಿದರು.ಸಂಘದ ರಾಜ್ಯಪ್ರತಿನಿಧಿ ಪ್ರಭು ಎಸ್.ವಂದಿಸಿದರು.
ಸಭೆಯಲ್ಲಿ ಗುರುನಾನಕ ಪಿಯು ಕಾಲೇಜಿನ ಪ್ರಾಚಾರ್ಯ ವಿಕ್ರಮ್ ತೋಮರಕರ್ ಸೇರಿದಂತೆ ಜಿಲ್ಲೆಯ ಸರ್ಕಾರಿ,ಅನುದಾನಿತ ಮತ್ತು ಅನುದಾನರಹಿತ ಕಾಲೇಜಿನ ಪ್ರಾಚಾರ್ಯರು ಭಾಗವಹಿಸಿದ್ದರು.