ಸಿಯುಕೆಯಲ್ಲಿ 78 ನೇ ಸ್ವಾತಂತ್ರೋತ್ಸವ ಆಚರಣೆ
ಕಲಬುರಗಿ:ಆ.15:“78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ವಿಶ್ವವಿದ್ಯಾಲಯಗಳು ದೇಶಕ್ಕೆ ನೀಡಿದ ಕೊಡುಗೆ ಏನು ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದು ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಇಂದು ಅವರು ಸಿಯುಕೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ವಿದೇಶಿ ವಿಶ್ವವಿದ್ಯಾಲಯಗಳು ಏಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ನಮ್ಮ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ ಎಂಬುದನ್ನು ನಾವು ವಿಶ್ಲೇಷಿಸಬೇಕಾಗಿದೆ. ತೆರಿಗೆದಾರರ ಹಣದಲ್ಲಿ ವಿಶ್ವವಿದ್ಯಾಲಯಗಳನ್ನು ನಡೆಸುತ್ತಿದ್ದೇವೆ ಎಂಬುದನ್ನು ನಾವು ಮರೆಯಬಾರದು. ಹಣ, ಸಮಯ ಮತ್ತು ಸಂಪನ್ಮೂಲಗಳನ್ನು ಖರ್ಚು ಮಾಡುವ ಮೊದಲು ನಾವು ಎರಡು ಬಾರಿ ಯೋಚಿಸಬೇಕು. ನಿನ್ನೆ ಸುಂಟನೂರು ಗ್ರಾಮದಲ್ಲಿ ‘ಹರ್ ಘರ್ ತಿರಂಗ’ ಅಭಿಯಾನವನ್ನು ಆಚರಿಸಿದ್ದೇವೆ. ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲ. ವಿಶ್ವವಿದ್ಯಾಲಯವಾಗಿ ನಾವು ಗ್ರಾಮೀಣ ಅಭಿವೃದ್ಧಿಗೆ ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ ಆದರೆ ನಾವು ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಕೊಡುಗೆ ನೀಡಬಹುದು. ವಿಶ್ವವಿದ್ಯಾಲಯಗಳ ಸಂಶೋಧನೆಗಳು ಗ್ರಾಮೀಣ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನಹರಿಸಬೇಕು ಮತ್ತು ಸಮಾಜ ಪ್ರೇರಿತವಾಗಬೇಕು. ಆಗ ನಮ್ಮ ಅಸ್ತಿತ್ವಕ್ಕೆ ಅರ್ಥವಿರುತ್ತದೆ” ಎಂದು ಅವರು ಹೇಳಿದರು.
“ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನಾವು ಸ್ಮರಿಸಬೇಕು ಮತ್ತು ಅವರ ಕೊಡುಗೆಯನ್ನು ಗೌರವಿಸಬೇಕು. ನಾವು ನಮ್ಮ ದೇಶದ ಸ್ವಾತಂತ್ರ್ಯ ಕಾಪಾಡಲು ಸದಾ ಜಾಗೃತರಾಗಿರಬೇಕು” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಿದರು, ಸಂಗೀತ ಮತ್ತು ಲಲಿತಕಲೆಗಳ ಅಧ್ಯಾಪಕರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಡಾ.ರವಿಕಿರಣ್ ನಾಕೋಡ್ ಅವರು ಏಕವ್ಯಕ್ತಿ ತಬಲಾ ನಡೆಸಿಕೊಟ್ಟರು. ಡಾ.ಕುಮಾರ್ ಮಂಗಲಂ ಮತ್ತು ಡಾ.ರೇμÁ್ಮ ನದಾಫ್ ಕಾರ್ಯಕ್ರಮ ನಿರೂಪಿಸಿದರು. ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್, ಪ್ರೊ.ಚನ್ನವೀರ ಆರ್.ಎಂ., ಡಾ.ಬಸವರಾಜ ಕುಬಕಡ್ಡಿ, ಹಣಕಾಸು ಅಧಿಕಾರಿ ಡಿ.ರಾಮದೊರೈ, ಡೀನ್‍ರು, ಮುಖ್ಯಸ್ಥರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.