ಕಡಪ್ಪರ ಸಮೀರ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಮಂಗಳೂರು: ಇತ್ತೀಚೆಗೆ ನಗರದ ಹೊರವಲಯದ ಕಲ್ಲಾಪಿನಲ್ಲಿ ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆಯಾದ ರೌಡಿಶೀಟರ್ ಕಡಪ್ಪರ ಸಮೀರ್ ಕೊಲೆ ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೃಷ್ಣಾಪುರದ ಮುಹಮ್ಮದ್ ನೌಶಾದ್ (೨೬), ಕಿನ್ಯದ ನಿಯಾಝ್ (೨೩), ತನ್ವೀರ್ ಬಜಾಲ್ (೨೭), ಕಾಪುವಿನ ಮುಹಮ್ಮದ್ ಇಕ್ಬಾಲ್ (೨೮), ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಕಡಪ್ಪರ ಸಮೀರ್ ರವಿವಾರ ರಾತ್ರಿ ತಾಯಿ ಹಾಗೂ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ಕಲ್ಲಾಪುವಿನಲ್ಲಿರುವ ಫಾಸ್ಟ್ ಫುಡ್‌ವೊಂದಕ್ಕೆ ಉಪಹಾರಕ್ಕೆ ಕಾರಿನಲ್ಲಿ ತೆರಳಿದ್ದನು. ಈ ವೇಳೆ ಅವರನ್ನು ಹಿಂಬಾಲಿಸಿದ ತಂಡವೊಂದು ಸಮೀರ್ ಕಾರಿನಿಂದ ಇಳಿಯುತ್ತಿದ್ದಂತೆ ಮಾರಕಾಸ್ತ್ರಗಳನ್ನು ಹಿಡಿದು ಬಂದಿದ್ದಾರೆ. ಅಪಾಯವನ್ನು ಅರಿತ ಸಮೀರ್ ಅಲ್ಲಿಂದ ಓಡಿದ್ದಾನೆ. ತಂಡ ೫೦೦ಮೀ. ದೂರವಿರುವ ವಿ.ಕೆ.ಫರ್ನಿಚರ್ ಇರುವಲ್ಲಿವರೆಗೆ ಅಟ್ಟಾಡಿಸಿಕೊಂಡು ಓಡಿಸಿ ಮಾರಕಾಸ್ತ್ರಗಳಿಂದ ಕಡಿದು ಕೊಂದಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಿ ಉಳ್ಳಾಲ ಪೊಲೀಸರು ನಾಲ್ವರನ್ನು ಬಂಧಿಸಿ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.