ಭಾರತದ ಭವಿಷ್ಯವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಸವಾಲುಗಳು ನಮ್ಮಗಳ ಮುಂದಿದೆ
ಸಂಜೆವಾಣಿ ನ್ಯೂಸ್
ಮೈಸೂರು, ಆ.15:- ಈ ಭವ್ಯ ಭಾರತದ ಭವಿಷ್ಯವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಸವಾಲುಗಳು ನಮ್ಮಗಳ ಮುಂದಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯಿತು ಮೈಸದಾನದಲ್ಲಿ ಇಂದು ನಡೆದ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಚಿವರು ಮಾತನಾಡಿದರು. ಒಟ್ಟಾರೆ ಹಲವಾರು ಸಾಧು ಸಂತರ, ಸ್ವಾತಂತ್ರ್ಯ ಯೋಧರ, ದೇಶ ಪ್ರೇಮಿಗಳ, ಹಿರಿಯರ ಹೋರಾಟ ಹಾಗೂ ಪರಿಶ್ರಮದಿಂದ ಕಟ್ಟಿ ಬೆಳಸಿರುವ ಈ ಕಾರ್ಯದ ಯಶಸ್ಸಿಗೆ ನಾವೆಲ್ಲರೂ ಒಟ್ಟಾಗಿ ದುಡಿಯೋಣ ಎಂದು ಡಾ, ಮಹದೇವಪ್ಪ ನಾಡಿನ ಜನತೆಗೆ ಕರೆ ನೀಡಿದರು.
ದೇಶ ಪ್ರೇಮ ನಮ್ಮಲ್ಲಿ ಪ್ರತಿದಿನ ಪ್ರತಿಕ್ಷಣ ರಕ್ತಗತವಾಗಿರಬೇಕು ಎಂದು ಅವರು ತಿಳಿಸಿದರು.
ನಾವಿಂದು ಮನೆಯೊಳಗೆ ಸುರಕ್ಷಿತವಾಗಿ, ನಿಶ್ಚಿಂತೆಯಿಂದ ಇರಲು ಕಾರಣ ಪ್ರಾಣ ಒತ್ತೆ ಇಟ್ಟು ಗಡಿಯಲ್ಲಿ ಕಾಯುತ್ತಿರುವ ನಮ್ಮ ಹೆಮ್ಮೆಯ ಸೈನಿಕರು. ಹೋರಾಡುತ್ತಿರುವ ಮತ್ತು ಹೋರಾಡುತ್ತಲೇ ವೀರ ಮರಣವನ್ನಪ್ಪಿದ ನಮ್ಮ ಹೆಮ್ಮೆಯ ಸೈನಿಕರಿಗೆ ಒಮ್ಮೆ ತಲೆಬಾಗಿ ನಮಿಸೋಣ ಎಂದು ಸಚಿವ ಮಹದೇವಪ್ಪ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಹಾಗೂ ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಇದರಿಂದ ರಾಜ್ಯದಲ್ಲಿ ಬಹುತೇಕ ಜನತೆಗೆ ಅನುಕೂಲವಾಗಿದೆ ಎಂದವರು ತಿಳಿಸಿದರು.
ಅನೇಕ ಮಹಾನ್ ಚೇತನರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಹೀಗಾಗಿ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಅಭಿವೃದ್ಧಿಯೇ ಸ್ವಾತಂತ್ರ್ಯ ಹೀಗಾಗಿ ನಾವು ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆಂದರು.
ಇದನ್ನು ನಾನು `ಕರ್ನಾಟಕ ಅಭಿವೃದ್ದಿ ಮಾದರಿ’ಎಂದು ಹೆಮ್ಮೆಯಿಂದ ಕರೆಯುತ್ತೇನೆ ಎಂದವರು ಹೇಳಿದರು.
ಮೈಸೂರು ಜಿಲ್ಲೆಗೆ 2023-24ನೇ ಸಾಲಿನಲ್ಲಿ ಬಜೆಟ್ ಘೋಷಿಸಿರುವಂತೆ ಭೌಗೊಳಿಕ ಗುರುತು ಬೆಳೆಗಳಾದ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆ ಇವುಗಳ ವಿಸ್ತೀರ್ಣ ಹೆಚ್ಚಿಸುವಿಕೆ ಉತ್ಪಾದನೆಗೆ ಉತ್ತೇಜನ, ಮಾರುಕಟ್ಟೆ ವ್ಯವಸ್ಥೆ ಮತ್ತು ಬೆಳೆಗಳ ಸಂರಕ್ಷಣೆಯ ಕಾರ್ಯಕ್ರಮವನ್ನು ರೂಪಿಸಲಾಗಿರುತ್ತದೆ ಎಂದು ಸಚಿವ ಮಹದೇವಪ್ಪ ತಿಳಿಸಿದರು.
ಶಕ್ತಿ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ ಈವರೆಗೂ ಒಟ್ಟು 10.20 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆಂದರು.
ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ನಮ್ಮ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು ಈವರೆಗೆ ಜಿಲ್ಲೆಯಲ್ಲಿ 6,66,264 ಫಲಾನುಭವಿಗಳು ಯೋಜನೆಯ ಪ್ರಯೋಜನವನ್ನು ಪಡೆದಿರುತ್ತಾರೆಂದವರು ವಿವರಿಸಿದರು.
ಡಿಪೆÇ್ಲೀಮೋ ಹಾಗೂ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಕ್ರಮವಾಗಿ ರೂ.1500 ಮತ್ತು ರೂ 3000 ಗಳನ್ನು ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ ಈವರೆಗೂ 6450 ಅರ್ಜಿಗಳು ನೋಂದಣಿಯಾಗಿದ್ದು 4279 ಫಲಾನುಭವಿಗಳಿಗೆ ಹಣವನ್ನು ಪಾವತಿಸಲಾಗಿದೆ ಎಂದರು.
ನಂಜನಗೂಡು ತಾಲ್ಲೂಕು ದೇವನೂರು ಗ್ರ್ರಾಮದ ಬಳಿ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ರೂ 90 ಕೋಟಿ ಅನುದಾನದಲ್ಲಿ ಒಟ್ಟು 17 ಕೆರೆಗಳಿಗೆ ನೀರು ತುಂಬಿಸಲು ಹಾಗೂ ಕೆ.ಆರ್. ನಗರ ತಾಲ್ಲೂಕು ಕೆಸ್ತೂರು ಕೊಪ್ಪಲು ಏತ ನೀರಾವರಿ ಯೋಜನೆ ಕಾಮಗಾರಿಯನ್ನು ರೂ 50ಕೋಟಿಗಳ ಅನುದಾನದಲ್ಲಿ ಒಟ್ಟು 29 ಕೆರೆಗಳಿಗೆ ನೀರು ತುಂಬಿಸಲು ಅಂದಾಜು ಮೊತ್ತಕ್ಕೆ ಕೈಗೊಳ್ಳಲು ಯೋಜಿಸಲಾಗಿದೆ ಎಂದರು.
ಪ.ಜಾತಿಯ ವಿವಿಧ ಯೋಜನೆಗಳ ಕಾರ್ಯಕ್ರಮದಡಿ 59.60 ಕೋಟಿ ವೆಚ್ಚದಲ್ಲಿ ಹುಣಸೂರು ತಾಲ್ಲೂಕಿನಲ್ಲಿ 1 ಮೆಟ್ರಿಕ್ ಪೂರ್ವ, ಮೈಸೂರು ನಗರದಲ್ಲಿ 8 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಕೈಗೊಳ್ಳಲಾಗಿದ್ದು ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದುಎಂದರು.
ಮೈಸೂರು ಚಾಮುಂಡಿ ಅತಿಥಿ ಗೃಹದ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿಯನ್ನು ರೂ 19.10 ಕೋಟಿ ವೆಚ್ಚದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪೂರ್ಣಗೊಳಿಸಲಾಗುವುದು. ಜಿಲ್ಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬುಜಗಜೀವನರಾಂ ಭವನಗಳ ನಿರ್ಮಾಣ, ಪ್ರಗತಿ ಕಾಲೋನಿ, ಸ್ಮಶಾನಗಳ ಅಭಿವೃದ್ಧಿ ಹಾಗೂ ವಿವಿಧ ಕಾಮಗಾರಿಗಾಗಿ ರೂ. 120.036 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದವರು ಹೇಳಿದರು.
ಮೈಸೂರು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿಯಡಿ ಮತ್ತು ಹೊರಗುತ್ತಿಗೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕರನ್ನು ಪೌರ ಕಾರ್ಮಿಕರ ವಿಶೇಷ ನೇಮಕಾತಿಯಡಿಯಲ್ಲಿ ಒಟ್ಟು 454 ಪೌರಕಾರ್ಮಿಕರನ್ನು ಖಾಯಂ ಮಾಡಲಾಗಿರುತ್ತದೆ ಎಂದು ಸಚಿವ ಮಹದೇವಪ್ಪ ತಿಳಿಸಿದರು.
ಶಾಸಕರ ತನ್ವೀರ್ ಸೇಠ್, ಮೂಡಾ ಅಧ್ಯಕ್ಷ ಕೆ ಮರಿಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ, ದಕ್ಷಿಣ ವಲಯ ಐ ಜಿ ಪಿ ಬೋರಲಿಂಗಯ್ಯ, ನಗರ ಪೆÇಲೀಸ್ ಆಯುಕ್ತ ರಾದ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಎಂ ಗಾಯತ್ರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ. ಶಿವರಾಜ್ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.