ಭಾರತಕ್ಕೆ ಸೈನಿಕ ಮನಸ್ಥಿತಿ ಚಿಂತನೆ ಅಗತ್ಯ- ಕ್ಯಾ.ಬ್ರಿಜೇಶ್ ಚೌಟ
ಪುತ್ತೂರು: ಅಭಿವೃದ್ಧಿ ಭಾರತದ ಪರ್ವ ಕಾಲದಲ್ಲಿ ನಾವಿದ್ದು, ಯೋಧನಲ್ಲಿ ಸ್ವಾರ್ಥ ಮರೆತು ಇಡೀ ಸಮಾಜವನ್ನು ಒಂದಾಗಿ ಒಯ್ಯುವ ಮನೋಸ್ಥಿತಿ ಇರುತ್ತದೆ. ಆದರೆ ಸೈನಿಕನ ಮನೋಸ್ಥಿತಿ ಅರ್ಥಮಾಡಿಕೊಳ್ಳುವಲ್ಲಿ ಸಮಾಜ ವಿಫಲವಾಗಿದೆ. ಇಂದಿನ ಭಾರತಕ್ಕೆ ಸೈನಿಕ ಮನಸ್ಥಿತಿ ಚಿಂತನೆಯ ಅಗತ್ಯವಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಅವರು ಸವಣೂರು ವಿದ್ಯಾಗಂಗೋತ್ರಿಯ ವಿದ್ಯಾಚೇತನ ಸಭಾಂಗಣದಲ್ಲಿ ಬುಧವಾರ ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ ಪ್ರವರ್ತಿತ, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸ್ಥಾಪಕ ಶೀಂಟೂರು ನಾರಾಯಣ ರೈಯವರ ೧೩ನೇ ವರ್ಷದ ಸ್ಥಾಪಕರ ದಿನಾಚರಣೆ, ಶೀಂಟೂರು ಸ್ಮೃತಿ, ಶಿಷ್ಯ ವೇತನ ವಿತರಣೆ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಸೈನಿಕರಾಗಿದ್ದ ಶೀಂಟೂರು ನಾರಾಯಣ ರೈ ಅವರ ಹೆಸರಿನಲ್ಲಿ ವಿದ್ಯಾದಾನ ಮಾಡುತ್ತಿರುವುದು ಪ್ರೇರಣಾದಾಯಿಯಾದ ವಿಚಾರವಾಗಿ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಅವರು ಮಾತನಾಡಿ, ಶೀಂಟೂರು ನಾರಾಯಣ ರೈಗಳು ಯೋಧನಾಗಿ, ಶಿಕ್ಷಕ, ಸಹಕಾರಿ, ಕೃಷಿಕ ಹೀಗೆ ಹಲವು ಕ್ಷೇತ್ರಗಳಲ್ಲಿನ ಸಾಧನೆಗಳ ಸಾಧಕರಾಗಿದ್ದರು. ಗಾಂಧೀಜಿ ಅವರ ಪ್ರೇರಣೆಯಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಕೃಷಿಯಲ್ಲಿಯೂ ತಾಂತ್ರಿಕತೆ ಮತ್ತು ಸಹಕಾರಿ ತತ್ವವನ್ನು ಅಳವಡಿಸಿಕೊಂಡಿದ್ದರು. ಬೋರ್ಡು ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಶಿಕ್ಷಕರ ದತ್ತಿನಿಧಿಯನ್ನು ಆರಂಭಿಸಿದ ಹೆಗ್ಗಳಿಕೆ ಶೀಂಟೂರು ನಾರಾಯಣ ರೈಗಳಿಗೆ ಸಲ್ಲುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಮಾತನಾಡಿ, ಒಬ್ಬನೇ ವ್ಯಕ್ತಿ ಯಾವ ರೀತಿಯ ಸಾಧನೆಗಳನ್ನೆಲ್ಲಾ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ದಿ.ಶೀಂಟೂರು ನಾರಾಯಣ ರೈ ಅವರು. ತಂದೆಯ ಹಾದಿಯಲ್ಲಿ ಸಾಗುವ ಮಗ ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆ ಸವಣೂರು ಕೆ. ಸೀತಾರಾಮ ರೈ ಅವರು ಎಂದರು.
ಈ ಸಂದರ್ಭದಲ್ಲಿ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ರೂಪಕಲಾ ಕೆ. ಅವರಿಗೆ ‘ಶೀಂಟೂರು ಸನ್ಮಾನ’ ನೀಡಿ ಗೌರವಿಸಲಾಯಿತು. ಸೇನೆಗೆ ನೀಡುವ ಗೌರವಾರ್ಥ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳಾದ ಮಹಮ್ಮದ್ ಝಯಾನ್, ಮನ್ವಿತ್ ಎಚ್. ಆಚಾರ್ಯ, ಕೃಪಾಲಿ ಎಸ್. ಡಿ, ಜಶ್ವಿತ್ ಕೆ., ಆಝ್ಮಿಯತ್ ಸಫಾ, ಕೆ. ಯಶಸ್ವಿ ರೈ, ಯಶ್ವಿನಿ ಪಿ. ಆರ್, ಶಿಲ್ಪ ಎನ್. ಮತ್ತು ಶೀಲ ಕೆ. ಡಿ. ಅವರಿಗೆ ‘ಶೀಂಟೂರು ಶಿಷ್ಯ ವೇತನ’ ನೀಡಿ ಪುರಸ್ಕರಿಸಲಾಯಿತು.
. ದ.ಕ. ಮತ್ತು ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ನಡುಮನೆ,  ಬಳ್ಳಾರಿ ಕುಮಾರಸ್ವಾಮಿ ಮಿನರಲ್ ಎಕ್ಸ್‌ಪೋರ್ಟ್ಸ್‌ನ ಮಾಲಕ ಮಲಾರ್‌ಬೀಡು ರವೀಂದ್ರನಾಥ ಆಳ್ವ, ಗುಜರಾತ್‌ನ ಗ್ರೀನ್‌ಹೀರೋ ಆಫ್ ಇಂಡಿಯಾದ ಫಾರೆಸ್ಟ್ ಕ್ರಿಯೇಟರ್‌ನ ಸಹ ಸ್ಥಾಪಕ ಡಾ. ಆರ್. ಕೆ. ನಾಯರ್ ಮಾತನಾಡಿದರು.
ವೇದಿಕೆಯಲ್ಲಿ ಸವಣೂರು ಎಸ್.ಎನ್.ಆರ್.ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ವಿಶ್ವಸ್ಥರಾದ ಎನ್. ಸುಂದರ ರೈ ನಡುಮನೆ, ಎನ್. ಸುಧಾಕರ ರೈ, ರಶ್ಮಿ ಅಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ., ವಿದ್ಯಾರಶ್ಮಿ ಸ್ವತಂತ್ರ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಉಪಸ್ಥಿತರಿದ್ದರು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಹಕಾರಿ ರತ್ನ ಸವಣೂರು ಕೆ.ಸೀತಾರಾಮ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಎನ್. ಜಯಪ್ರಕಾಶ್ ರೈ ವಂದಿಸಿದರು. ಉಪನ್ಯಾಸಕಿ ಪ್ರತಿಭಾ ಎಸ್. ಕಾರ್ಯಕ್ರಮ ನಿರ್ವಹಿಸಿದರು.