ಕಾಂಗ್ರೆಸ್ಸಿಗರ ನಡೆ ಪ್ರಗತಿಗೆ ವಿರುದ್ಧವಾಗಿದೆ: ಜಾನಕಿರಾಮ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.15: ತಾಲೂಕಿನ ಬೂಕನಕೆರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಣ್ಣ ನೀರಾವರಿ ಇಲಾಖೆಯ ಉಪ ವಿಭಾಗ ಕಛೇರಿಯನ್ನು ನೆರೆಯ ನಾಗಮಂಗಲ ತಾಲೂಕಿಗೆ ವರ್ಗಾಹಿಸಿಕೊಂಡಿರುವ ಸಚಿವ ಎನ್.ಚಲುವರಾಯಸ್ವಾಮಿ ಅವರ ನಡೆಯನ್ನು ತಾಲೂಕು ಕಾಂಗ್ರೆಸ್ ಮುಖಂಡರು ಸಮರ್ಥನೆ ಮಾಡಿಕೊಂಡಿರುವುದನ್ನು ತಾಲೂಕು ಜೆಡಿಎಸ್ ಪಕ್ಷ ಖಂಡಿಸಿದೆ.
ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಮುಖಂಡರು ಕಾಂಗ್ರೆಸ್ಸಿಗರ ನಡೆ ತಾಲೂಕಿನ ಪ್ರಗತಿಗೆ ವಿರುದ್ದವಾಗಿದೆ ಎಂದಿದ್ದಾರೆ.
ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ಮಾತನಾಡಿ ಬೂಕನಕೆರೆಯಲ್ಲಿದ್ದ ಸಣ್ಣ ನೀರಾವರಿ ಇಲಾಖೆ ಕೆ.ಆರ್.ಪೇಟೆ, ನಾಗಮಂಗಲ ಮತ್ತು ಪಾಂಡವಪುರ ತಾಲೂಕುಗಳ ಕ್ಷೇತ್ರ ವ್ಯಾಪ್ತಿ ಹೊಂದಿದೆ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ವಿಜಯ ಭಾಸ್ಕರ್ ಅವರು ಹೋಬಳಿ ಕೇಂದ್ರದಲ್ಲಿ ಕಚೇರಿ ಇರುವುದಕ್ಕೆ ಆಕ್ಷೇಪಿಸಿದ್ದಾರೆ. ಅದನ್ನೆ ನೆಪವಾಗಿರಿಸಿ ಸಚಿವ ಎನ್.ಚಲುವರಾಯಸ್ವಾಮಿ ನಮ್ಮ ತಾಲೂಕಿನ ಕಛೇರಿಯೊಂದನ್ನು ತಮ್ಮ ಸ್ವಕ್ಷೇತ್ರಕ್ಕೆ ಕಿತ್ತುಕೊಂಡು ಹೋಗುವ ಬದಲು ಅದನ್ನು ತಾಲೂಕು ಕೆಂದ್ರವಾಗಿರುವ ಕೆ.ಆರ್.ಪೇಟೆ ಪಟ್ಟಣಕ್ಕೆ ವರ್ಗಾಹಿಸಬಹುದಾಗಿತ್ತು. ಕಾಂಗ್ರೆಸ್ ಮುಖಂಡರಾದ ಬಿ.ಎಲ್.ದೇವರಾಜು ಹಿರಿಯ ರಾಜಕಾರಣಿ. ಅವರಿಗೆ ತಾಲೂಕಿನ ಬಗ್ಗೆ ಕಾಳಜಿಯಿದ್ದರೆ ನಮ್ಮ ಕ್ಷೇತ್ರದ ಕಛೇರಿಯೊಂದನ್ನು ಸಚಿವರು ಕಿತ್ತುಕೊಂಡು ಹೋಗಿರುವುದನ್ನು ಸಮರ್ಥಿಸಿಕೊಳ್ಳುವ ಬದಲು ಸಚಿವರ ಮನವೊಲಿಸಿ ಅದನ್ನು ಕೆ.ಆರ್.ಪೇಟೆ ಪಟ್ಟಣಕ್ಕೆ ಸ್ಥಳಾಂತರಿಸುವಂತೆ ವ್ಯವಹರಿಸಬೇಕಾಗಿತ್ತು. ಬಿ.ಎಲ್.ದೇವರಾಜು ಅವರಿಗೆ ಕ್ಷೇತ್ರದ ಪ್ರಗತಿಗಿಂತ ಸಚಿವರನ್ನು ಮೆಚ್ಚಿಸುವುದೇ ಮುಖ್ಯವಾಗಿರುವಂತಿದೆ ಎಂದು ಕಿಡಿಕಾರಿದರು.
ಶಾಸಕ ಹೆಚ್.ಟಿ.ಮಂಜು ಜೆಡಿಎಸ್ ಪಕ್ಷದವರಾಗಿದ್ದರೂ ಅವರು ಕ್ಷೇತ್ರದ ಸಮಸ್ತ ಜನರ ಪ್ರತಿನಿಧಿ. ಕ್ಷೇತ್ರದಲ್ಲಿ ಚುನಾಯಿತ ಶಾಸಕರಿದ್ದರೂ ಸಚಿವ ಎನ್.ಚಲುವರಾಯಸ್ವಾಮಿ ಶಾಸಕರನ್ನು ಕಡೆಗಣಿಸಿ ತಾಲೂಕಿನ ಬೀರವಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಸರ್ಕಾರದ ಪರಿಹಾರ ಹಣದ ಚೆಕ್ ವಿತರಿಸಿದ್ದಾರೆ. ಸಚಿವ ಸ್ಥಾನ ಶಾಶ್ವತವಲ್ಲ. ಸಚಿವರಾದವರು ಶಾಸಕರಿಗೆ ಗೌರವ ಕೊಡುವ ನಡವಳಿಕೆಯನ್ನು ಪ್ರದರ್ಶಿಸಬೇಕು ಎಂದು ಆಗ್ರಹಿಸಿದ ಜಾನಕೀರಾಂ ಮುಖಂಡ ಬಿ.ಎಲ್.ದೇವರಾಜು ವಿಶಾಲ ಮನೋಭಾವ ಪ್ರದರ್ಶಿಸಬೇಕು. ಕ್ಷೇತ್ರದ ಅಭಿವೃದ್ದಿಗೆ ಪೂರಕವಾದ ಸಣ್ಣ ನೀರಾವರಿ ಇಲಾಖೆ ತಾಲೂಕಿನಲ್ಲಿಯೇ ಉಳಿಯಲು ಪ್ರಯತ್ನಿಸುವಂತೆ ಕಿವಿ ಮಾತು ಹೇಳಿದರು.
ತಾಲೂಕು ಪಂಚಾಯತಿ ಮಜಿ ಸದಸ್ಯ ಹುಲ್ಲೇಗೌಡ ಮಾತನಾಡಿ ಬೂಕನಕೆರೆಯ ಮಣ್ಣಿನ ಮಗ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ವಾಗ್ರಾಮಕ್ಕೆ ನೆನಪಿನ ಕಾಣಿಕೆಯಾಗಿ ಸಣ್ಣ ನೀರಾವರಿ ಇಲಾಖೆಯನ್ನು ನೀಡಿದ್ದರು. ಯಡಿಯೂರಪ್ಪ ಅವರ ಮೇಲಿನ ದ್ವೇಷಕ್ಕೆ ಅದನ್ನು ಕಿತ್ತುಕೊಳ್ಳಲಾಗಿದೆ. ತಾಲೂಕಿನಲ್ಲಿ ಸುಮಾರು 08 ಏತ ನೀರಾವರಿ ಯೋಜನೆಗಳು ಹಾಗೂ ಕೋಟ್ಯಂತರ ರೂ ಅನುದಾನದಲ್ಲಿ ಹಲವಾರು ಕೆರೆಗಳ ಅಭಿವೃದ್ದಿ ಕಾರ್ಯ ನಡೆಯುತ್ತಿದೆ. ಕಾಂಗ್ರೆಸ್ ಮುಖಂಡರು ತಾಲೂಕಿನ ಸ್ವತ್ತನ್ನು ಉಳಸಿಕೊಳ್ಳಲು ಹೋರಾಡುವ ಬದಲು ತಮ್ಮ ರಾಜಕೀಯ ಸ್ವಾರ್ತಕ್ಕೆ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಸಚಿವರು ಸ್ಥಳಾಂತರಗೊಂಡಿರುವ ಸಣ್ಣ ನೀರಾವರಿ ಇಲಾಖೆಯ ಆದೇಶವನ್ನು ಹಿಂಪಡೆದು ಅದನ್ನು ಬೂಕನಕೆರೆಯಲ್ಲಿಯೇ ಉಳಿಸಬೇಕು. ಅದು ಸಾಧ್ಯವಿಲ್ಲದಿದ್ದರೆ ಕೆ.ಆರ್.ಪೇಟೆ ಪಟ್ಟಣಕ್ಕೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಬೂಕನಕೆರೆ ಗ್ರಾಮದ ಜನ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದರು. ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಟಿ.ಬಲದೇವ್, ಜೆಡಿಎಸ್ ಯುವ ಮುಖಂಡ ಅಲೋಕ್ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ ಮುಖಂಡರ ನಡೆಯನ್ನು ಖಂಡಿಸಿದರಲ್ಲದೆ ಸಣ್ಣ ನೀರಾವರಿ ಇಲಾಖೆಯನ್ನು ತಾಲೂಕಿನಲ್ಲಿಯೇ ಉಳಿಸುವಂತೆ ಆಗ್ರಹಿಸಿದರು.
ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಟಿ.ಎ.ಪಿ.ಎಂ.ಎಸ್ ನಿರ್ದೇಶಕ ಕೊರಟಿಕೆರೆ ದಿನೇಶ್, ಜೆಡಿಎಸ್ ವಿವಿಧ ಹೋಬಳಿ ಘಟಕಗಳ ಅಧ್ಯಕ್ಷರುಗಳಾದ ವಸಂತಕುಮಾರ್, ರವಿಕುಮಾರ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.