ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ: ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.15: ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಗೌರವದಿಂದ ಕಂಡು ಗುಣಮಟ್ಟದ ಚಿಕಿತ್ಸೆ ನೀಡುವುದು ವೈದ್ಯರು ಮತ್ತು ಸಿಬ್ಬಂದಿಗಳ ಧರ್ಮ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯ ರಕ್ಷಾ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
108 ಆಂಬುಲೆನ್ಸ್ ಸರ್ವೀಸ್ ಸಮರ್ಪಕವಾಗಿ ಸೇವೆ ನೀಡುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿರುವುದರಿಂದ ಆಸ್ಪತ್ರೆಗೆ ಆಂಬುಲೆನ್ಸ್ ಸೇವೆ ಕಲ್ಪಿಸುವಂತೆ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಕರೆ ಮಾಡಿ ಮಾತನಾಡಿದರು. ಆರೋಗ್ಯ ಎಲ್ಲರಿಗೂ ಮಹತ್ವದ್ದು ಸಾರ್ವಜನಿಕರಿಂದ ತಾಲ್ಲೂಕು ಕಛೇರಿ ಹಾಗೂ ಆಸ್ಪತ್ರೆಯನ್ನು ಸರಿಮಾಡಿ ಎಂದು ದೂರುಗಳು ಬರುತ್ತಿವೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನಾನು ಬಹಳ ಗೌರವದಿಂದ ಕಾಣುತ್ತೇನೆ. ಅದನ್ನು ಉಳಿಸಿಕೊಳ್ಳುವ ಕೆಲಸವನ್ನು ನೀವುಗಳು ಮಾಡಬೇಕು.ಆಸ್ಪತ್ರೆಯ ಆವರಣದಲ್ಲಿ ವಾಹನ ನಿಲುಗಡೆ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಅದನ್ನು ಪರಿಹರಿಸಿ. ಔಷಧಿಗಳನ್ನು ಹೊರಗಿನ ಅಂಗಡಿಗಳಿಗೆ ಬರೆದು ಕೊಡಬೇಡಿ. ಸರ್ಕಾರವು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಣ ನೀಡುತ್ತಿದೆ. ನಾನೂ ಸಹ ಶಾಸಕರ ಅನುದಾನ ನೀಡಿದ್ದೇನೆ. ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿನ ಎಲ್ಲಾ ಖರೀದಿ ಪ್ರಕ್ರಿಯೆ ಸರ್ಕಾರದ ನಿಯಮಾವಳಿಯಂತೆ ನಡೆಯಬೇಕು ಎಂದರು.
ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್ ಮಾತನಾಡಿ ಹೊರರೋಗಿಗಳ ನೋಂದಣಿಗೆ ಐದು ರೂಪಾಯಿಗಳಿಂದ ಹತ್ತು ರೂಪಾಯಿಗೆ ಏರಿಸಲು ಮನವಿ ಮಾಡಿದರು. ಆಸ್ಪತ್ರೆಯ ಸ್ವಚ್ಚತೆಗೆ ಹೆಚ್ಚಿನ ಗಮನ ಕೊಡಲಾಗಿದೆ. ಆಸ್ಪತ್ರೆಯ ಹೊರಭಾಗದ ಸ್ವಚ್ಚತೆಗೆ ಪವರ್ ವೀಡರ್ ಖರೀದಿಸಲಾಗಿದೆ ಎಂದರು. ಹೊರರೋಗಿ ಚೀಟಿ 5ರೂನಿಂದ 10 ರೂ ಗೆ ಹೆಚ್ಚಿಗೆ ಮಾಡಬೇಕಾಗಿದ್ದು ಜಿಲ್ಲೆಯ ಎಲ್ಲಾ ತಾಲೂಕಿನ ಎಲ್ಲ ಆಸ್ಪತ್ರೆಯಲ್ಲಿ ಈಗಾಗಲೇ ಹೆಚ್ಚಳವಾಗಿದೆ. ಅಲ್ಲದೇ ಚಿಲ್ಲರೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ಸಭೆಯು ಶುಲ್ಕ ಹೆಚ್ಚಳಕ್ಕೆ ತೀರ್ಮಾನಿಸಿತು.
ಇ.ಎನ್.ಟಿ ವೈದ್ಯ ಡಾ.ಶಿವಕುಮಾರ್ ಬಗ್ಗೆ ದೂರಿನ ಸುರಿಮಳೆ:-
ಸಾರ್ವಜನಿಕರು ಅವರು ಆಡಳಿತ ವೈದ್ಯಾಧಿಕಾರಿಯಾಗಿದ್ದ ವೇಳೆ ಸಿಸಿ ಕ್ಯಾಮರಾ, ಹೊರ ಚೀಟಿ ಬಿಲ್ ಹಣ ಎರಡುವರೆ ಲಕ್ಷ ರೂಪಾಯಿಗಳ ಕಾಮಗಾರಿಗೆ ಬಿಲ್ ಮಾಡಿಕೊಡದೇ ಬೇರೆ ಪೂರೈಕೆದಾರರಿಗೆ ನೀಡಿ ವಂಚಿಸಿ ಹಣ ದುರುಪಯೋಗಿಸಿಕೊಂಡಿರುವುದಾಗಿ ಗುತ್ತಿಗೆದಾರರಾದ ಪ್ರೀತಂ ಹಾಗೂ ವೀರಪ್ಪ ಶಾಸಕರಿಗೆ ದೂರು ನೀಡಿದರು. ಅಲ್ಲದೇ ರಕ್ಷಾ ಸಮಿತಿಯ ಸದಸ್ಯೆ ರೇಖಾ ಮಾತನಾಡಿ ಡಾ.ಶಿವಕುಮಾರ್ ಶಾಸಕರ ಮತ್ತು ಇತರೆ ಸಭೆಗಳಿಗೆ ಹಾಜರಾಗದೇ ನಿರ್ಲಕ್ಷ್ಯವಹಿಸಿದ್ದಾರೆ. ಕಳೆದ ಸಭೆಯಲ್ಲಿಯೂ ಅವರಿಗೆ ನೋಟಿಸ್ ನೀಡುವಂತೆ ಸೂಚಿಸಲಾಗಿತ್ತು. ಇಷ್ಟಾದರೂ ಆಡಳಿತ ವೈದ್ಯಾಧಿಕಾರಿಗಳು ಅವರಿಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಶಾಸಕ ಮಂಜು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಪ್ರಸಾದ್ ರವರೊಂದಿಗೆ ಮೊಬೈಲ್ ಕರೆ ಮಾಡಿ ಡಾ.ಶಿವಕುಮಾರ್ ಕರ್ತವ್ಯ ಲೋಪದ ಬಗ್ಗೆ ಹಾಗೂ ಅವರ ಅಡಳಿತದ ಅವಧಿಯಲ್ಲಿ ಆಗಿರುವ ಹಣಕಾಸಿನ ನಿರ್ವಹಣೆ ಬಗ್ಗೆ ಸಾಕಷ್ಟು ದೂರುಗಳಿವೆ ಅವರ ಬಗ್ಗೆ ಕೂಡಲೇ ಅವರ ಅವಧಿಯ ಎಲ್ಲಾ ವ್ಯವಹಾರವನ್ನು ತನಿಖೆ ಮಾಡಿ ನನಗೆ ವರದಿ ನೀಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ರಕ್ಷಾ ಸಮಿತಿಯ ಸದಸ್ಯರಾದ ರವಿಕುಮಾರ್, ಕಲ್ಪನಾಬಲದೇವ್, ರೇಖಾಲೋಕೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ತಾಪಂ ಯೋಜನಾಧಿಕಾರಿ ಶ್ರೀನಿವಾಸ್, ಪುರಸಭಾ ಸದಸ್ಯ ಗಿರೀಶ್, ಡಾ.ಜಯಪ್ರಕಾಶ್, ಡಾ.ಶ್ರೀಕಾಂತ್, ಡಾ.ಗಿರೀಶ್, ಡಾ.ದರ್ಶನ್, ಡಾ.ಪುಟ್ಟಸ್ವಾಮಿ ಶಾಸಕರ ಆಪ್ತಸಹಾಯಕರಾದ ಪ್ರತಾಪ್, ಕುಮಾರಸ್ವಾಮಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.