ವೀರಶೈವ-ಲಿಂಗಾಯತ ಎಲ್ಲಾ ಒಳ ಪಂಗಡಗಳನ್ನು ಒಗ್ಗೂಡಿಸಿದ ಕೀರ್ತಿ ಮಹಾಸಭೆಗೆ ಸಲ್ಲುತ್ತದೆ: ಎನ್‍ರಿಚ್ ಮಹದೇವಸ್ವಾಮಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.15-ಬಸವಾದಿ ಶರಣರು 12ನೇ ಶತಮಾನದಲ್ಲಿ ಸ್ಥಾಪನೆ ಮಾಡಿದ್ದ ವೀರಶೈವ- ಲಿಂಗಾಯತ ಧರ್ಮವು ಎಲ್ಲಾ ಒಳಪಂಗಡಗಳನ್ನು ಒಗ್ಗೂಟ್ಟಿಸಿ ಸಂಘಟನೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಿಸಿದ್ದು, ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಎಲ್ಲರು ಶ್ರಮಿಸೋಣ ಎಂದು ವೀರಶೈವ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಸದಸ್ಯ ಎನ್‍ರಿಚ್ ಮಹದೇವಸ್ವಾಮಿ ತಿಳಿಸಿದರು.
ತಾಲೂಕಿನ ಸಂತೇಮರಹಳ್ಳಿಯಲ್ಲಿ ಎನ್‍ರಿಚ್ ಅಭಿಮಾನಿಗಳ ಬಳಗದಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ವೀರಶೈವ ಲಿಂಗಾಯತ ಮಹಾಸಭೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜಿಲ್ಲೆಯಲ್ಲಿ ಸಂಘಟನೆ ಮಾಡಿದ ಪರಿಣಾಮ, ಮಠಾಧೀಶರು, ಹಿರಿಯರು ಹಾಗು ಮಹಾಸಭಾದ ರಾಜ್ಯ ಮತ್ತು ಕೇಂದ್ರ ಸಮಿತಿಯ ವರಿಷ್ಠರು ಕೇಂದ್ರ ಸಮಿತಿಯ ಸದಸ್ಯನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಟಗೊಳಿಸೋಣ. ಐದು ತಾಲೂಕು ಕೇಂದ್ರಗಳಲ್ಲಿ ಬಸವ ಭವನ ನಿರ್ಮಾಣ, ಸದಸ್ಯತ್ವವನ್ನು ಹೆಚ್ಚು ಮಾಡುವುದು ಹಾಗೂ ವೀರಶೈವ ಲಿಂಗಾಯತ ಬಂಧುಗಳಿಗೆ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಎಲ್ಲರು ಒಗ್ಗಟ್ಟಿನಿಂದ ಮಾಡೋಣ ಎಂದರು.
ಮಹಾಸಭೆಯು ತಾಲೂಕಿನಿಂದ ಕೇಂದ್ರ ಸಮಿತಿ ದೆಹಲಿಯವರೆಗೆ ಒಂದೇ ವಿಚಾರ ಹಾಗೂ ಸಂಘಟನೆ ಪ್ರಥಮ ಅಧ್ಯತೆಯಾಗಿದೆ. ವೈಯಕ್ತಿಕ ವಿಚಾರಗಳು ಹಾಗೂ ಇತರೇ ಭಿನ್ನಾಭಿಪ್ರಯಗಳನ್ನು ಬದಿಗಿಟ್ಟು ಎಲ್ಲರು ಸಹ ಸಮಾಜದ ಸಂಘಟನೆಗೆ ಒತ್ತು ನೀಡೋಣ. ಪ್ರಸ್ತುತ ಪರಿಸ್ಥಿತಿಯ ಸಮಾಜದ ಯುವಕರು, ಯುವತಿಯರು ಬಹಳಷ್ಟ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳಿಗೆ ಪರಿಹಾರ ಕಂಡು ಕೊಳ್ಳಬೇಕಾಗಿದೆ. 12 ಶತಮಾನದಲ್ಲಿ ಬಸವಣ್ಣ ಹಾಗು ಶರಣರು ಸ್ಥಾಪಿರುವ ವೀರಶೈವ ಲಿಂಗಾಯತ ಧರ್ಮದ ರಥವನ್ನು ಮುಂದಿನ ಪೀಳಿಗೆಗೆ, ಅವರ ವಚನ ಸಾರಗಳು, ಶರಣರ ಆಶಯ, ಅನ್ನ ದಾಸೋಹ. ಅಕ್ಷರ ದಾಸೋಹ ಸಮಾನತೆಯನ್ನು ಜಗತ್ತಿಗೆ ಸಾರೋಣ ಎಂದರು.
ಬಸವಣ್ಣ ಅವರು ಎಲ್ಲಾ ಜಾತಿ, ವರ್ಗದವರನ್ನು ಸೇರಿಕೊಂಡು ವೀರಶೈವ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದರು. ಅದರೊಟ್ಟಿಗೆ ಸಮ ಸಮಾಜದ ನಿರ್ಮಾಣ ಕನಸು ಕಂಡವರು. ಅವರ ಅನುಯಾಯಿಗಳು ಈ ನಿಟ್ಟಿನಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಬಸವ ಧರ್ಮ ಪರಿಪಾಲನೆ ಮಾಡಿ ಮಠಗಳನ್ನು ನಿರ್ಮಾಣ ಮಾಡಿದರು. ನಮ್ಮದು ದಯವೇ ಧರ್ಮದ ಮೂಲವಯ್ಯ ಎಂಬಂತೆ ನಮ್ಮ ಸಮಾಜ ಉಳಿಯಬೇಕು. ಈ ನಿಟ್ಟಿಯಲ್ಲಿ ಯುವಕರು ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಸಮಾಜಕ್ಕೆ ಅನ್ಯಾಯ, ಅಪ್ರಚಾರವಾದಂತಹ ಸಂದರ್ಭದಲ್ಲಿ ಖಂಡಿಸುವ, ಹಾಗೂ ಪ್ರತಿಭಟನೆ ಮಾಡುವ ಹಕ್ಕು ನಮ್ಮದಾಗಿದೆ. ನಾವೆಲ್ಲರು ಮೊದಲು ವೀರಶೈವ ಲಿಂಗಾಯತರಾಗೋಣ ನಂತರ ಇತರೇ ವಿಚಾರಗಳು ಎಂಬುದನ್ನು ಪ್ರತಿ ಮನೆ ಮನೆಗೆ ತಲುಪಿಸಿ, ಗ್ರಾಮ, ಗ್ರಾಮಗಳಲ್ಲಿ ಪ್ರಚಾರ ಮಾಡೋಣ ಎಂದು ಮಹದೇವಸ್ವಾಮಿ ತಿಳಿಸಿದರು.
ಕೊಳ್ಳೇಗಾಲ ತಾಲೂಕು ಮಹಾಸಭಾದ ಅಧ್ಯಕ್ಷ ತಿಮ್ಮರಾಜಿಪುರದ ಪುಟ್ಟಣ್ಣ ಅಧ್ಯಕ್ಷತೆ ವಹಿಸಿ, ಎನ್‍ರಿಚ್ ಮಹದೇವಸ್ವಾಮಿ ಅವರಿಗೆ ಕೇಂದ್ರ ಸಮಿತಿ ಸದಸ್ಯ ಸ್ಥಾನ ದೊರೆತಿರುವುದು ಜಿಲ್ಲೆಗೆ ಹೆಚ್ಚಿನ ಬಲ ಬಂದಿದೆ. ಸಂಘಟನೆ ಚತರರು, ಹಾಗೂ ಎಲ್ಲರನ್ನು ಪ್ರೀತಿಸುವ ಹಾಗು ಸಮಾಜದ ಕೆಲಸದಲ್ಲಿ ಒಂದು ಹೆಜ್ಜೆ ಮುಂದೆ ನಿಲ್ಲುವ ಮಹದೇವಸ್ವಾಮಿ ಅವರು ಕೇಂದ್ರ ಮಟ್ಟದಲ್ಲಿ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡಲಿ, ನಮ್ಮಂಥ ತಾಲೂಕು ಸಂಘಟನೆಗಳ ಬೆಳವಣಿಗೆಗೆ ವರದಾನವಾಗಿದೆ ಎಂದರು.
ರೈತ ಮುಖಂಡ ಹೆಗ್ಗವಾಡಿಪುರ ಮಹೇಶ್‍ಕುಮಾರ್ ಮಾತನಾಡಿ, ಸಂತೇಮರಹಳ್ಳಿ ಭಾಗದಲ್ಲಿ ಹೆಗ್ಗವಾಡಿಪುರ ವಿಶಿಷ್ಟವಾದ ಗ್ರಾಮ. ಎಲ್ಲಾ ರಂಗದಲ್ಲಿಯು ಹೆಗ್ಗವಾಡಿಪುರ ಗ್ರಾಮ ಮುಂಚೂಣಿಯಲ್ಲಿದ್ದಾರೆ. ಈಗ ಎನ್‍ರಿಎಚ್ ಮಹದೇವಸ್ವಾಮಿ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ಕೇಂದ್ರ ಸಮಿತಿಯ ಸದಸ್ಯರಾಗಿ, ದೆಹಲಿ ಮಟ್ಟಕ್ಕೆ ಹೋಗಿರುವುದು ಹೆಮ್ಮೆ. ಆದೇ ರೀತಿ ಚಾಮರಾಜನಗರ ಜಿಲ್ಲೆಯಲ್ಲಿ ಮಹಾಸಭೆ ಸಂಘಟನೆ ಬಲಿಷ್ಟವಾಗಿದೆ. ಬಸವ ಭವನ ನಿರ್ಮಾಣ, ಕೌಶಲ್ಯ ಅಭಿವೃದ್ದಿ ಕೇಂದ್ರ, ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಶಿಕ್ಷಣಕ್ಕೆ ಒತ್ತು ನೀಡಿ, ಸಮಾಜವನ್ನು ಮುನ್ನಡೆಸಲು ಎಲ್ಲರು ಕೈಜೋಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಸದಸ್ಯರಾದ ಎನ್‍ರಿಚ್ ಮಹದೇವಸ್ವಾಮಿ ಅವರಿಗೆ ಮೈಸೂರು ಪೇಟಾ ತೊಡಿಸಿ, ಭಾರಿ ಗಾತ್ರ ಹಾರ ಹಾಕಿ ಅಭಿನಂದಿಸಲಾಯಿತು. ಜಿಲ್ಲೆ ಘಟಕ, ತಲೂಕು ಘಟಕಗಳ ಮಹಾಸಭಾದ ನೂತನ ನಿರ್ದೇಶಕರನ್ನು ಅಭಿನಂದಲಾಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕರಾದ ಹೊಸೂರು ನಟೇಶ್, ಎನ್.ಆರ್. ಪುರುಷೋತ್ತಮ್, ಮೂಡ್ಲುಪುರ ಮಂಜೇಶ್, ಮುರುಡೇಶ್ವರಸ್ವಾಮಿ, ಸ್ಟೈಲ್ ಮಂಜು, ಕೊಳ್ಳೇಗಾಲ ತಾಲೂಕು ನಿಕಟಪೂರ್ವ ಅಧ್ಯಕ್ಷ ಮಹದೇವಪ್ರಸಾದ್, ಬಸಪ್ಪದೊಡ್ಡಿ ಬಸವರಾಜು, ಸಿ.ಡಿ. ಪ್ರಕಾಶ್, ದೊಡ್ಡರಾಯಪೇಟೆ ಗಿರೀಶ್, ಕಾವುದವಾಡಿ ಶ್ರೀಕಂಠಮೂರ್ತಿ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸುಂದ್ರಪ್ಪ, ಎಪಿಎಂಸಿ ನಿರ್ದೇಶಕ ಅಲೂರು ಪ್ರದೀಪ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಪಿ. ಶಮಿತ್ ಕುಮಾರ್, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಶಿವಶಂಕರ್, ಡಿ.ಎಸ್. ಶಂಕರಮೂರ್ತಿ, ವೇದಮೂರ್ತಿ, ನಲ್ಲೂರು ಮಹದೇವಪ್ಪ, ಬಿಸಲವಾಡಿ ಕುಮಾರ್ ಮೊದಲಾದವರು ಇದ್ದರು.